ದೆಹಲಿಯಲ್ಲಿನ ವಾಯುಮಾಲಿನ್ಯ ತಡೆಗೆ ಕೇಂದ್ರಕ್ಕೆ ಸುಪ್ರೀಂ ಸೂಚನೆ

ದೆಹಲಿ ನ 17 : ದೆಹಲಿ-ಎನ್‌ಸಿಆರ್‌ನಲ್ಲಿನ ಗಾಳಿಯು ವಿಷಕಾರಿಯಾಗುತ್ತಿದೆ. ವಾಯು ಮಾಲಿನ್ಯದಿಂದ ಜನರ ಜೀವನ ಕಷ್ಟಕರವಾಗಿದೆ. ದೆಹಲಿಯಲ್ಲಿ ಹೆಚ್ಚುತ್ತಿರುವ ವಾಯು ಮಾಲಿನ್ಯವನ್ನು ಎದುರಿಸಲು ತುರ್ತು ಸಭೆ ಕರೆಯುವಂತೆ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ. 

ದೆಹಲಿ-ಎನ್‌ಸಿಆರ್‌ನಲ್ಲಿ ವಾಯುಮಾಲಿನ್ಯವನ್ನು ನಿಭಾಯಿಸಲು ನಿರ್ಮಾಣ, ಅನಿವಾರ್ಯವಲ್ಲದ ಸಾರಿಗೆ, ವಿದ್ಯುತ್ ಸ್ಥಾವರಗಳನ್ನು ನಿಲ್ಲಿಸುವುದು ಮತ್ತು ಮನೆಯಿಂದಲೇ ಕೆಲಸ ಕಾರ್ಯಗತಗೊಳಿಸುವುದು ಮುಂತಾದ ವಿಷಯಗಳ ಕುರಿತು ನಾಳೆ ತುರ್ತು ಸಭೆ ಕರೆಯುವಂತೆ ಸುಪ್ರೀಂ ಕೋರ್ಟ್ ಕೇಂದ್ರಕ್ಕೆ ನಿರ್ದೇಶನ ನೀಡಿದೆ.

ಇನ್ನು ಇದೇ ವೇಳೆ ಮುಖ್ಯ ನ್ಯಾಯಮೂರ್ತಿ ಎನ್‌ವಿ ರಮಣ ನೇತೃತ್ವದ ಪೀಠವು ರಾಷ್ಟ್ರ ರಾಜಧಾನಿಯಲ್ಲಿ ವಾಯು ಮಾಲಿನ್ಯ ಹೆಚ್ಚಾಗಿದ್ದು, ಯಾವುದೇ ಕ್ರಮಕೈಗೊಳ್ಳದ ದೆಹಲಿ ಸರ್ಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ಕುಂಟು ನೆಪಗಳನ್ನು ಕೊಡದೇ ಸರಿಯಾದ ಕ್ರಮಗಳನ್ನು ತೆಗೆದುಕೊಳ್ಳಿ ಎಂದು ಕೋರ್ಟ್​ ಹೇಳಿದೆ.

ಈ ಬಗ್ಗೆ ವಾಯು ಗುಣಮಟ್ಟ ನಿರ್ವಹಣಾ ಸಮಿತಿ(ಸಿಎಕ್ಯುಎಂ) ದೆಹಲಿ ಸರ್ಕಾರಕ್ಕೆ ಸೂಚನೆ ನೀಡಿದ್ದು,  ವಾಯುಮಾಲಿನ್ಯ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿರುವ ಹಿನ್ನೆಲೆಯಲ್ಲಿ ಮುಂದಿನ ಆದೇಶದವರೆಗೂ ದೆಹಲಿ-ಎನ್‌ಸಿಆರ್‌ನಲ್ಲಿ ಶಾಲೆ, ಕಾಲೇಜು ಮತ್ತು ಇತರ ಶೈಕ್ಷಣಿಕ ಸಂಸ್ಥೆಗಳನ್ನು ಬಂದ್ ಮಾಡುವಂತೆ ನಿರ್ದೇಶನ ನೀಡಿದ್ದು, ಆನ್‌ಲೈನ್ ತರಗತಿಗಳಿಗೆ ಒತ್ತು ನೀಡುವಂತೆ ಸೂಚಿಸಿದೆ.

ದೆಹಲಿಯ 300 ಕಿ.ಮೀ ವ್ಯಾಪ್ತಿಯಲ್ಲಿರುವ 11 ಥರ್ಮಲ್ ವಿದ್ಯುತ್ ಸ್ಥಾವರಗಳ ಪೈಕಿ ಕೇವಲ 5 ಮಾತ್ರ ನವೆಂಬರ್ 30ರವರೆಗೆ ಕಾರ್ಯನಿರ್ವಹಿಸಲಿವೆ ಎಂದು ಅದು ತಿಳಿಸಿದೆ. ವಾಯುಮಾಲಿನ್ಯ ತಡೆಯುವ ನಿಟ್ಟಿನಲ್ಲಿ ದೆಹಲಿ ಮತ್ತು ಎನ್‌ಸಿಆರ್ ವ್ಯಾಪ್ತಿಯ ರಾಜ್ಯಗಳಿಗೆ ನವೆಂಬರ್ 21ರವರೆಗೆ ಕಟ್ಟಡ ಕುಗಾರಿ, ಕಟ್ಟಡ ತೆರವು ಕಾರ್ಯಾಚರಣೆಗಳನ್ನು ನಡೆಸದಂತೆ ಸಮಿತಿ ಸೂಚಿಸಿದೆ, ಬಸ್, ರೈಲು, ಮೆಟ್ರೋ ಮತ್ತು ಮಿಲಿಟರಿಗೆ ಸಂಬಂಧಿತ ಸಂಚಾರಗಳನ್ನು ಕಠಿಣ ನಿಯಮಾವಧಿ ಅನ್ವಯ ನಡೆಸುವಂತೆ ತಿಳಿಸಿದೆ.

Exit mobile version