ನವದೆಹಲಿ, ಮೇ. 17: ಕೊರೊನಾ ಸೋಂಕು ಹಾವಳಿಯ ಬೆನ್ನಲ್ಲೇ ಬಿಹಾರ ಮತ್ತು ಉತ್ತರ ಪ್ರದೇಶಗಳಲ್ಲಿ ಗಂಗಾನದಿಯಲ್ಲಿ ಸಾಲುಸಾಲು ಹೆಣಗಳು ತೇಲಿಬರುತ್ತಿರುವ ಬಗ್ಗೆ ವಿಡಿಯೋಗಳು ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿವೆ. ಇದೀಗ ಕೇಂದ್ರ ಸರ್ಕಾರ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ್ದು, ಗಂಗಾನದಿ ಮತ್ತು ಅದರ ಉಪನದಿಗಳಲ್ಲಿ ಹೀಗೆ ಮೃತದೇಹಗಳನ್ನು ಹಾಕುವುದನ್ನು ತಡೆಗಟ್ಟಲು ಗಂಭೀರ ಕ್ರಮ ಕೈಗೊಳ್ಳಿ ಎಂದು ಉತ್ತರ ಪ್ರದೇಶ ಮತ್ತು ಬಿಹಾರ ಸರ್ಕಾರಗಳಿಗೆ ಸೂಚನೆ ನೀಡಿದೆ.
ಇಂದು ಮತ್ತು ನಿನ್ನೆ ಕೇಂದ್ರ ಜಲಶಕ್ತಿ ಸಚಿವಾಲಯ ಈ ಬಗ್ಗೆ ಎರಡೂ ಸರ್ಕಾರಗಳೊಂದಿಗೆ ಪರಿಶೀಲನಾ ಸಭೆ ನಡೆಸಿತ್ತು. ಮೃತದೇಹಗಳನ್ನು ಸರಿಯಾಗಿ ವಿಲೇವಾರಿ ಮಾಡಬೇಕು. ಗಂಗಾನದಿಯಲ್ಲಿ ಹಾಕದಂತೆ ತಡೆಯಲು ಕ್ರಮ ಕೈಗೊಳ್ಳಬೇಕು ಎಂದು ನಮಾಮಿ ಗಂಗಾ ಮಿಷನ್ನಿಂದ ಎರಡೂ ರಾಜ್ಯಗಳಿಗೂ ತಿಳಿಸಲಾಗಿದೆ.
ಮೃತದೇಹಗಳನ್ನು ಸುಡಬೇಕು ಇಲ್ಲವೇ ಹೂಳಬೇಕು. ಅದೆಲ್ಲ ಬಿಟ್ಟು ಹೀಗೆ ಅರ್ಧಸುಟ್ಟ, ಕೊಳೆತ ಶವಗಳನ್ನು ಗಂಗಾ ಮತ್ತು ಅದರ ಉಪನದಿಗಳಲ್ಲಿ ಎಸೆಯುವುದು ತೀರ ಅನಪೇಕ್ಷಿತ ಮತ್ತು ಆತಂಕಕಾರಿ ವಿಷಯ ಎಂದು ಕೇಂದ್ರ ಸರ್ಕಾರ ಹೇಳಿದೆ. ಗಂಗಾನದಿ ಸ್ವಚ್ಛತೆಗೆಂದೇ ನಮಾಮಿ ಗಂಗಾ ಮಿಷನ್ ರಚಿತವಾಗಿದೆ. ಆದರೆ ಹೀಗೆ ಮತ್ತೆ ಶವಗಳು ತೇಲುವುದು ನಿಜಕ್ಕೂ ಆತಂಕ ತರಿಸಿದೆ. ನೀರಿನ ಶುದ್ಧತೆಯೆಡೆಗೆ ಗಮನಹರಿಸುವುದು ತೀರ ಅಗತ್ಯ ಎಂದು ಹೇಳಿದೆ.