ಅಂಬಾನಿ ಕುಟುಂಬಕ್ಕೆ ಲಂಡನ್ ವಾಸ್ತವ್ಯದ ಆಲೋಚನೆಯಿಲ್ಲ: RIL ಸ್ಪಷ್ಟನೆ

ಮುಂಬೈ: ಅಂಬಾನಿ ಕುಟುಂಬವು ಲಂಡನ್​ಗೆ ಭಾಗಶಃ ವಾಸ್ತವ್ಯ ಬದಲಿಸುವ ಯಾವುದೇ ಆಸಕ್ತಿ ಹೊಂದಿಲ್ಲ ಎಂದು ರಿಲಯನ್ಸ್​ ಇಂಡಸ್ಟ್ರೀಸ್​ ಲಿಮಿಟೆಡ್ (RIL) ಮಾಧ್ಯಮ ಹೇಳಿಕೆಯಲ್ಲಿ ತಿಳಿಸಿದೆ.
ಲಂಡನ್​ನ ಸ್ಟೋಕ್ ಪಾರ್ಕ್​ಗೆ ಅಂಬಾನಿ ಕುಟುಂಬ ಭಾಗಶಃ ವಾಸ್ತವ್ಯ ಬದಲಿಸಲು ಆಲೋಚಿಸುತ್ತಿದೆ ಎಂದು ದಿನಪತ್ರಿಕೆಯೊಂದರಲ್ಲಿ ಪ್ರಕಟವಾಗಿರುವ ವರದಿಯು ಕೆಲ ಅನಗತ್ಯ ಮತ್ತು ಅನಪೇಕ್ಷಿತ ಆಧಾರ ರಹಿತ ಊಹಾಪೋಹಗಳಿಗೆ ಕಾರಣವಾಗಿದೆ ಎಂದು ರಿಲಯನ್ಸ್​ ಹೇಳಿದೆ.

ರಿಲಯನ್ಸ್​ನ ಅಧ್ಯಕ್ಷರು ಅಥವಾ ಅವರ ಕುಟುಂಬವು ಲಂಡನ್​ ಅಥವಾ ವಿಶ್ವದ ಬೇರೆ ಯಾವುದೇ ನಗರಕ್ಕೆ ವಾಸ್ತವ್ಯ ಬದಲಿಸುವ ಆಲೋಚನೆ ಹೊಂದಿಲ್ಲ ಎಂದು ಸ್ಪಷ್ಟಪಡಿಸಿದೆ

ರಿಲಯನ್ಸ್​ ಇಂಡಸ್ಟ್ರೀಸ್​ನ ಭಾಗವಾಗಿರುವ ಆರ್​ಐಐಎಚ್​ಎಲ್ ಲಂಡನ್​ನ ಸ್ಟೋಕ್ ಪಾರ್ಕ್ ಎಸ್ಟೇಟ್​ ಅನ್ನು ಈಚೆಗೆ ಖರೀದಿಸಿತ್ತು. ಪರಂಪರೆಯ ಮೌಲ್ಯ ಹೊಂದಿರುವ ಈ ಆಸ್ತಿಯನ್ನು ಉತ್ತಮ ಗಾಲ್ಫ್​ ಮತ್ತು ಕ್ರೀಡಾ ರೆಸಾರ್ಟ್​ ಆಗಿ ಅಭಿವೃದ್ಧಿಪಡಿಸುವುದು ಕಂಪನಿಯ ಉದ್ದೇಶವಾಗಿದೆ. ಪ್ಲಾನಿಂಗ್ ವೇಳೆ ಸ್ಥಳೀಯ ನಿಯಮಗಳನ್ನು ಸಂಪೂರ್ಣವಾಗಿ ಅನುಸರಿಸಲಾಗುವುದು ಎಂದು ಭರವಸೆ ನೀಡಿದೆ.

ಈ ಆಸ್ತಿಯನ್ನು ತನ್ನ ಸುಪರ್ದಿಗೆ ಪಡೆದುಕೊಂಡ ನಂತರ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಗ್ರಾಹಕ ವ್ಯವಹಾರವೊಂದು ರಿಲಯನ್ಸ್​ ಸಮೂಹದ ಭಾಗವಾದಂತೆ ಆಗಿದೆ. ಭಾರತವು ಹೆಸರುವಾಸಿಯಾಗಿರುವ ಆತಿಥ್ಯ ಉದ್ಯಮವನ್ನು ಜಾಗತಿಕ ಮಟ್ಟದಲ್ಲಿ ವಿಸ್ತರಿಸಲು ಈ ಪ್ರಯತ್ನ ನೆರವಾಗಲಿದೆ ಎಂದು ಆರ್​ಐಎಸ್ ಹೇಳಿದೆ.

Exit mobile version