New Delhi : ಜಮ್ಮು ಮತ್ತು ಕಾಶ್ಮೀರ (Jammu and Kashmir) ವಿವಾದ ಅಂದಿನ ಪ್ರಧಾನಿ ಜವಾಹರಲಾಲ್ ನೆಹರೂ ಅವರು ಎಸಗಿದ ಮಹಾಅಪರಾಧ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಸಂಸತ್ತಿನಲ್ಲಿ ವಾಗ್ದಾಳಿ ನಡೆಸಿದ್ದು, ತೀವ್ರ ಗದ್ದಲಕ್ಕೆ ಕಾರಣವಾಗಿದೆ. ಅಮಿತ್ ಶಾ (Amit Shah) ಹೇಳಿಕೆಯನ್ನು ಖಂಡಿಸಿ ಪ್ರತಿಪಕ್ಷಗಳು ಕಲಾಪವನ್ನು ಬಹಿಷ್ಕರಿಸಿ ಮಾಡಿ ಹೊರ ನಡೆದಿವೆ.
ಲೋಕಸಭೆಯಲ್ಲಿ ಜಮ್ಮು ಮತ್ತು ಕಾಶ್ಮೀರಕ್ಕೆ ಸಂಬಂಧಿಸಿದ ಜಮ್ಮು ಮತ್ತು ಕಾಶ್ಮೀರ ಮರುಸಂಘಟನೆ ಮಸೂದೆ-2023 ಮತ್ತು ಜಮ್ಮು ಮತ್ತು ಕಾಶ್ಮೀರ ಮೀಸಲಾತಿ (ತಿದ್ದುಪಡಿ) ಮಸೂದೆ -2023ಗಳನ್ನು ಮಂಡಿಸಿ ಮಾತನಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಅವರು, ನೆಹರೂ ಅವರು ಕೈಗೊಂಡ ಎರಡು ತಪ್ಪು ನಿರ್ಧಾರಗಳಿಂದ ಕಾಶ್ಮೀರ ವಿವಾದ ಸೃಷ್ಟಿಯಾಯಿತು. ಸೇನೆಯ ಕಾರ್ಯಾಚರಣೆಯನ್ನು ತಡೆ ಹಿಡಿದಿದ್ದು ಮತ್ತು ಕಾಶ್ಮೀರ ವಿವಾದವನ್ನು ವಿಶ್ವಸಂಸ್ಥೆಗೆ ತೆಗೆದುಕೊಂಡು ಹೋಗಿದ್ದು ಮಹಾಅಪರಾಧ. ದೇಶದ ಆಂತರಿಕ ವಿಷಯವನ್ನು ವಿಶ್ವಸಂಸ್ಥೆಗೆ ತೆಗೆದುಕೊಂಡ ಹೋದ ಪರಿಣಾಮವನ್ನು ಇಂದು ನಾವು ಅನುಭವಿಸುತ್ತಿದ್ದೇವೆ ಎಂದು ಶಾ ಹೇಳಿದ್ದಾರೆ.
ಇನ್ನು ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಯಲ್ಲಿ 24 ಸ್ಥಾನಗಳನ್ನು ಪಾಕ್ (Pak) ಆಕ್ರಮಿತ ಕಾಶ್ಮೀರಕ್ಕೆ (ಪಿಒಕೆ) ಮೀಸಲಿಡಲಾಗಿದೆ ಎಂದು ಘೋಷಿಸಿರುವ ಅಮಿತ್ ಶಾ ಅವರು, ಈ ಹಿಂದೆ ಜಮ್ಮು 37 ಸ್ಥಾನಗಳನ್ನು ಹೊಂದಿತ್ತು ಆದರೆ ಈಗ 43 ಸ್ಥಾನಗಳನ್ನು ಹೊಂದಿದೆ. ಪಾಕ್ ಆಕ್ರಮಿತ ಕಾಶ್ಮೀರಕ್ಕೆ 24 ಸ್ಥಾನಗಳನ್ನು ಮೀಸಲಿಡಲಾಗಿದೆ. ಇನ್ನು ಕಾಶ್ಮೀರಿ ಪಂಡಿತರು ಸ್ಥಳಾಂತರಗೊಂಡಾಗ, ಅವರು ತಮ್ಮದೇ ದೇಶದಲ್ಲಿ ನಿರಾಶ್ರಿತರಾಗಿ ಬದುಕಬೇಕಾಯಿತು. ಸುಮಾರು 46,631 ಕುಟುಂಬಗಳು ತಮ್ಮದೇ ದೇಶದಲ್ಲಿ ನಿರಾಶ್ರಿತರಾಗಿದ್ದಾರೆ. ಈ ಮಸೂದೆ ಅವರಿಗೆ ಹಕ್ಕುಗಳನ್ನು ಪಡೆಯಲು , ಅವರಿಗೆ ಪ್ರಾತಿನಿಧ್ಯವನ್ನು ನೀಡುತ್ತದೆ. ಕಳೆದ 70 ವರ್ಷಗಳಿಂದ ವಂಚಿತರಾಗಿರುವ ಜನರಿಗೆ ನ್ಯಾಯ ಒದಗಿಸುವ ಉದ್ದೇಶವನ್ನು ಈ ಮಸೂದೆಗಳು ಹೊಂದಿವೆ, ಜಮ್ಮು ಮತ್ತು ಕಾಶ್ಮೀರದ ಎರಡು ಮಸೂದೆಗಳಲ್ಲಿ ಮಹಿಳೆ ಸೇರಿದಂತೆ ಇಬ್ಬರು ಕಾಶ್ಮೀರಿ ವಲಸಿಗ ಸಮುದಾಯದ ಸದಸ್ಯರನ್ನು ವಿಧಾನಸಭೆಗೆ ನಾಮನಿರ್ದೇಶನ ಮಾಡಲು ಅವಕಾಶ ನೀಡುತ್ತದೆ ಎಂದು ಶಾ ಹೇಳಿದ್ದಾರೆ.