ಮುಂಬೈ ಅ 11 : ನಟ ಅಮಿತಾಭ್ ಬಚ್ಚನ್ ಅವರು ಇಂದು 79ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ ಈ ಹಿನ್ನಲೆಯಲ್ಲಿ ಅವರಿಗೆ ಅಭಿಮಾನಿಗಳು, ಸೆಲೆಬ್ರಿಟಿಗಳು ಮತ್ತು ಸ್ನೇಹಿತರು ಶುಭಾಶಯ ಕೋರುತ್ತಿದ್ದಾರೆ. ಈ ವಯಸ್ಸಿನಲ್ಲೂ ಹದಿಹರೆಯದ ಯುವಕನಂತೆ ಆ್ಯಕ್ಟೀವ್ ಆಗಿರುವ ಅಮಿತಾಭ್ ಬಚ್ಚನ್ ಎಲ್ಲರಿಗೂ ಸ್ಫೂರ್ತಿ. ಈಗಲೂ ಅವರು ಬಹುಬೇಡಿಕೆಯ ನಟನಾಗಿ ಬಾಲಿವುಡ್ನಲ್ಲಿ ತಮ್ಮ ಸ್ಥಾನ ಭದ್ರಪಡಿಸಿಕೊಂಡಿದ್ದಾರೆ. ಹೊಸ ಹೀರೋಗಳಿಗೆ ಭರ್ಜರಿ ಪೈಪೋಟಿ ನೀಡುವಂತಹ ಚಾರ್ಮ್ ಈಗಲೂ ಅವರಲ್ಲಿದೆ. ಪ್ರಸ್ತುತ ಹಲವು ಸಿನಿಮಾಗಳಲ್ಲಿ ಅಮಿತಾಭ್ ಬಚ್ಚನ್ ನಟಿಸುತ್ತಿದ್ದಾರೆ.
ಅತಿ ಹೆಚ್ಚು ಬ್ಯುಸಿ ಆಗಿರುವ ನಟರ ಪೈಕಿ ಅಮಿತಾಭ್ ಬಚ್ಚನ್ ಹೆಸರು ಕೂಡ ಮುಂಚೂಣಿಯಲ್ಲಿದೆ. ನಟನೆ ಮಾತ್ರವಲ್ಲದೆ, ಕಿರುತೆರೆಯ ‘ಕೌನ್ ಬನೇಗಾ ಕರೋಡ್ಪತಿ’ (KBC) ಕಾರ್ಯಕ್ರಮದ ನಿರೂಪಣೆಯಲ್ಲೂ ಬಿಗ್ ಬಿ ತೊಡಗಿಕೊಂಡಿದ್ದಾರೆ. ಈ ಕಾರ್ಯಕ್ರಮದ 13ನೇ ಸೀಸನ್ ಪ್ರಸಾರ ಆಗುತ್ತಿದೆ. ಸಿನಿಮಾ ಶೂಟಿಂಗ್ಗಳ ನಡುವೆ ‘ಕೌನ್ ಬನೇಗಾ ಕರೋಡ್ಪತಿ’ ಶೋ ಸಲುವಾಗಿಯೂ ಅವರು ಸಮಯ ಹೊಂದಿಸಿಕೊಳ್ಳುತ್ತಾರೆ.
ನಿರ್ಮಾಪಕ ಆನಂದ್ ಪಂಡಿತ್ ಅವರ ಮನೆಯಲ್ಲಿ ಈ ಬಾರಿ ಅಮಿತಾಭ್ ಬಚ್ಚನ್ ಜನ್ಮದಿನವನ್ನು ಆಚರಿಸಲಾಗಿದೆ. ಈ ಪಾರ್ಟಿಗೆ ತೆರಳುತ್ತಿರುವಾಗ ಕ್ಲಿಕ್ಕಿಸಿದ ಫೋಟೋವನ್ನು ಬಿಗ್ ಬಿ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ‘80ರ ಕಡೆಗೆ ಪಯಣ’ ಎಂದು ಅವರು ಈ ಪೋಟೋಗೆ ಕ್ಯಾಪ್ಷನ್ ನೀಡಿದ್ದಾರೆ. ಕೆಲವೇ ಗಂಟೆ ಕಳೆಯುವುದರೊಳಗೆ ಇನ್ಸ್ಟಾಗ್ರಾಮ್ನಲ್ಲಿ ಈ ಫೋಟೋಗೆ 7 ಲಕ್ಷಕ್ಕೂ ಅಧಿಕ ಮಂದಿ ಲೈಕ್ ಬಟನ್ ಒತ್ತಿದ್ದಾರೆ. ಅನೇಕ ಸೆಲೆಬ್ರಿಟಿಗಳು ಕಮೆಂಟ್ಗಳ ಮೂಲಕ ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದಾರೆ.
ಇಮ್ರಾನ್ ಹಷ್ಮಿ ಜೊತೆ ಅಮಿತಾಭ್ ನಟಿಸಿದ್ದ ‘ಜೆಹ್ರೆ’ ಚಿತ್ರ ಆ.27ರಂದು ತೆರೆಕಂಡಿತು. ಈಗ ಅವರ ಕೈಯಲ್ಲಿ ಹಲವು ಸಿನಿಮಾಗಳಿಗೆ ರಶ್ಮಿಕಾ ಮಂದಣ್ಣ ಜೊತೆ ‘ಗುಡ್ ಬೈ’ ಸಿನಿಮಾದಲ್ಲಿ ಬಿಗ್ ಬಿ ನಟಿಸುತ್ತಿದ್ದಾರೆ. ‘ಜುಂಡ್’, ‘ಬ್ರಹ್ಮಾಸ್ತ್ರ’, ‘ಮೇಡೇ’, ‘ಊಂಚಾಯಿ’ ಮುಂತಾದ ಚಿತ್ರಗಳಲ್ಲಿ ಅವರು ಬ್ಯುಸಿ ಆಗಿದ್ದಾರೆ. ‘ಮಹಾನಟಿ’ ಖ್ಯಾತಿಯ ನಿರ್ದೇಶಕ ನಾಗ್ ಅಶ್ವಿನ್ ಜೊತೆಗೂ ಅಮಿತಾಭ್ ಒಂದು ಸಿನಿಮಾ ಮಾಡುತ್ತಿದ್ದು, ಅದರ ಶೀರ್ಷಿಕೆ ಇನ್ನೂ ಬಹಿರಂಗ ಆಗಿಲ್ಲ.
ಬಿಗ್ ಬಿ ಹುಟ್ಟುಹಬ್ಬದ ಆಚರಣೆಗಳು ಒಂದು ದಿನ ಮುಂಚಿತವಾಗಿ ಆರಂಭವಾಗಿದ್ದು, ಅವರು ‘ಚೆಹ್ರೆ’ ನಿರ್ಮಾಪಕ ಆನಂದ್ ಪಂಡಿತ್ ಅವರ ಸಮ್ಮುಖದಲ್ಲಿ ಕೇಕ್ ಕತ್ತರಿಸಿದ್ದಾರೆ. ಅದೇ ಚಿತ್ರದ ನಿರ್ಮಾಪಕರು ಪ್ರತಿ ವರ್ಷವೂ ನಾನು ನಿಮ್ಮನ್ನು ಬಿಗ್ ಸ್ಕ್ರೀನ್‌ನಲ್ಲಿ ನೋಡುತ್ತಾ ಕಳೆದ ಪ್ರತಿ ವರ್ಷವೂ ನಾನು ನಿಮ್ಮನ್ನು ವೈಯಕ್ತಿಕವಾಗಿ ಭೇಟಿಯಾಗಿ ನಿಮ್ಮೊಂದಿಗೆ ಕೆಲಸ ಮಾಡುತ್ತಿದ್ದೇನೆ, ಪ್ರತಿ ಕ್ಷಣವೂ ನಿಮ್ಮೊಂದಿಗೆ ಸ್ಪೂರ್ತಿದಾಯಕವಾಗಿದೆ! ನಮ್ಮ ಪ್ರಾಜೆಕ್ಟ್‌ನಲ್ಲಿ ನೀವು ನಮ್ಮನ್ನು ಭೇಟಿ ಮಾಡಿದ್ದಕ್ಕೆ, ಒಂದು ದಿನ ಮುಂಚಿತವಾಗಿ ನಾವು ಸೆಲೆಬ್ರೇಟ್ ಮಾಡಲು ಆರಂಭಿಸಬಹುದೆಂದು ನನಗೆ ತುಂಬಾ ಸಂತೋಷವಾಗಿದೆ. ಅಮಿತ್ ಜೀ, ನೀವು ನಿಜವಾಗಿಯೂ ಸ್ಫೂರ್ತಿಯಾಗಿದ್ದೀರಿ. ಮತ್ತೊಮ್ಮೆ ನಿಮಗೆ ಜನ್ಮದಿನದ ಶುಭಾಶಯಗಳನ್ನು ಕೋರುತ್ತೇವೆ! ಎಂದು ಬರೆದಿದ್ದಾರೆ