ಅಂಜು ಬಾಬಿ ಜಾರ್ಜ್‌ಗೆ ‘ವರ್ಷದ ಮಹಿಳೆ’ ಪ್ರಶಸ್ತಿ

ನವದೆಹಲಿ ಡಿ 2 : ಏಷಿಯನ್‌ ಗೇಮ್ಸ್‌ನಲ್ಲಿ ಭಾರತಕ್ಕೆ ಮೊದಲ ಪದಕ ತಂದುಕೊಟ್ಟಿದ್ದಕೇರಳ ಮೂಲದ  ಭಾರತದ ಮಾಜಿ ಲಾಂಗ್ ಜಂಪ್ ತಾರೆ ಅಂಜು ಬಾಬಿ ಜಾರ್ಜ್ ಅವರಿಗೆ ವಿಶ್ವ ಅಥ್ಲೆಟಿಕ್ಸ್ ‘ವರ್ಷದ ಮಹಿಳೆ’ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಪ್ರತಿಭಾನ್ವೇಷಣೆ ಮತ್ತು ಲಿಂಗ ಸಮಾನತೆಯ ಪ್ರತಿಪಾದನೆಗಾಗಿ ಅವರಿಗೆ ಈ ಗೌರವ ಒಲಿದು ಬಂದಿದೆ.

ಪ್ರಪಂಚದಾದ್ಯಂತದ ವಿವಿಧ ಕ್ರೀಡಾಕೂಟಗಳಲ್ಲಿ ಭಾರತವನ್ನು ಪ್ರತಿನಿಧಿಸಿರುವ 44 ವರ್ಷದ ಕ್ರೀಡಾ ದಂತಕಥೆ ಅಂಜು ಬಾಬಿ ಜಾರ್ಜ್‌ ಅವರು ಭಾರತೀಯ ಅಥ್ಲೆಟಿಕ್ಸ್ ಫೆಡರೇಶನ್‌ನ ಹಿರಿಯ ಉಪಾಧ್ಯಕ್ಷೆಯಾಗಿದ್ದ ಸಂದರ್ಭದಲ್ಲಿ ಲಿಂಗ ಸಮಾನತೆಗಾಗಿ ಧ್ವನಿ ಎತ್ತಿದ್ದರು.

ಬುಧವಾರ ನಡೆದ ವರ್ಚುವಲ್ ಸಮಾರಂಭದಲ್ಲಿ ಅಂಜು ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸಮಾರಂಭವನ್ನು ಮ್ಯಾರಥಾನ್ ಪಟು ಪೌಲಾ ರಾಡ್‌ಕ್ಲಿಫ್ ಮತ್ತು ಲಾಂಗ್ ಜಂಪ್ ತಾರೆ ಜಾಜ್ಮಿನ್ ಸಾಯರ್ಸ್ ನಡೆಸಿಕೊಟ್ಟರು ಮತ್ತು ವರ್ಲ್ಡ್ ಅಥ್ಲೆಟಿಕ್ಸ್ ಯೂಟ್ಯೂಬ್ ಚಾನೆಲ್ ಮತ್ತು ಫೇಸ್‌ಬುಕ್ ಪುಟದಲ್ಲಿ ಸಮಾರಂಭವನ್ನು ನೇರ ಪ್ರಸಾರ ಮಾಡಲಾಗಿದೆ.

1996 ರಲ್ಲಿ, ಅಂಜು ಬಾಬಿ ಜಾರ್ಜ್ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. 2002 ರಲ್ಲಿ, ಬುಸಾನ್‌ನಲ್ಲಿ ನಡೆದ ಏಷ್ಯನ್ ಗೇಮ್ಸ್‌ನಲ್ಲಿ ಲಾಂಗ್ ಜಂಪ್ ಸ್ಪರ್ಧೆಯಲ್ಲಿ ಭಾರತಕ್ಕೆ ತನ್ನ ಮೊದಲ ಚಿನ್ನದ ಪದಕವನ್ನು ಗೆದ್ದು ತಂದರು. 2003 ರಲ್ಲಿ, ಅಂಜು ಅರ್ಜುನ ಪ್ರಶಸ್ತಿಯನ್ನು ಪಡೆದರು, ಮತ್ತು ಒಂದು ವರ್ಷದ ನಂತರ  ಪದ್ಮಶ್ರೀ ಪ್ರಶಸ್ತಿಯನ್ನು ಪಡೆದರು. ಅವರು 2004 ರಲ್ಲಿ ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿಯನ್ನು ಸಹ ಪಡೆದರು. ಅಂಜು ಅವರು ಈ ವರ್ಷದ ಆರಂಭದಲ್ಲಿ BBC ಯಿಂದ ಜೀವಮಾನದ ಸಾಧನೆ ಪ್ರಶಸ್ತಿಯನ್ನು ಪಡೆದಿದ್ದಾರೆ.

ಅವರು 2016 ರಲ್ಲಿ ತರಬೇತಿ ಅಕಾಡೆಮಿಯನ್ನು ಸ್ಥಾಪಿಸಿದ್ದು, ಅಲ್ಲಿ ಅವರು ಉನ್ನತ ಮಟ್ಟದ ಸ್ಪರ್ಧೆಗಾಗಿ ಯುವತಿಯರಿಗೆ ತರಬೇತಿಯನ್ನು ನೀಡುತ್ತಿದ್ದಾರೆ. 20 ವರ್ಷದೊಳಗಿನವರ ವಿಭಾಗದಲ್ಲಿ ಅವರ ಅಕಾಡೆಮಿಯಲ್ಲಿ ತರಬೇತಿ ಪಡೆದ 17 ವರ್ಷದ ಶೈಲಿ ಸಿಂಗ್  ವಿಶ್ವ ಬೆಳ್ಳಿ ಪದಕ ವಿಜೇತೆಯಾಗಿದ್ದಾರೆ.

Exit mobile version