ಆಂಧ್ರದಲ್ಲಿ ಪತ್ತೆಯಾಯ್ತು ಮತ್ತೊಂದು ರೂಪಾಂತರಿ ಕೊರೋನಾ: ಹಿಂದಿಗಿಂತ ವೇಗವಾಗಿ ಹಬ್ಬುತ್ತದೆ ಎಂದ ತಜ್ಞರು

ವಿಶಾಖಪಟ್ಟಣಂ, ಮೇ. 05: ಭಾರತದಲ್ಲಿ ರೂಪಾಂತರಗೊಂಡ ಕೊರೊನಾದ ಎರಡನೇ ಅಲೆ ತಲ್ಲಣ ಸೃಷ್ಟಿಸಿದ್ದು ಆರೋಗ್ಯ ವ್ಯವಸ್ಥೆಯನ್ನೇ ಅಲುಗಾಡಿಸಿದೆ. ಮೊದಲ ಅಲೆಗಿಂತಲೂ ಅತ್ಯಂತ ಗಂಭೀರ ಸ್ವರೂಪದ ಪರಿಣಾಮ ಬೀರುತ್ತಿರುವ ಈ ವೈರಾಣುವಿನ ಇನ್ನೊಂದು ರೂಪಾಂತರಿ ಮಾದರಿ ನೆರೆ ರಾಜ್ಯ ಆಂಧ್ರ ಪ್ರದೇಶದಲ್ಲಿ ಪತ್ತೆಯಾಗಿದೆ ಎಂಬ ಆಘಾತಕಾರಿ ಸುದ್ದಿಯೊಂದು ತಜ್ಞರ ವಲಯದಲ್ಲಿ ಹರಿದಾಡಲಾರಂಭಿಸಿದೆ. ಸದ್ಯ ವಿಶಾಖಪಟ್ಟಣಂ ಸೇರಿದಂತೆ ಆಂಧ್ರ ಪ್ರದೇಶದ ಕೆಲವೆಡೆ ಕಾಡುತ್ತಿರುವುದು ಹೊಸ ಮಾದರಿಯ ವೈರಾಣು ಹೌದೋ? ಅಲ್ಲವೋ? ಎಂಬುದು ಇನ್ನೂ ಖಚಿತಗೊಂಡಿಲ್ಲವಾದರೂ N440K ಎಂಬ ರೂಪಾಂತರಿ ಕರ್ನೂಲ್​ನಲ್ಲಿ ಮೊದಲು ಕಾಣಿಸಿಕೊಂಡಿದ್ದರಿಂದ ಎಪಿ ಮಾದರಿ ವೈರಾಣು ಎಂದು ಗುರುತಿಸಲಾಗಿದೆ.

ಹೊಸ ಮಾದರಿಯ ರೂಪಾಂತರಿಗೆ ಸಂಬಂಧಿಸಿದಂತೆ ಚಿಂತೆಗೀಡು ಮಾಡುವ ಸಂಗತಿಯೆಂದರೆ ಇದು ಮೊದಲ ಮಾದರಿಗಿಂತಲೂ 15 ಪಟ್ಟು ಅಪಾಯಕಾರಿಯಾಗಿದೆ ಹಾಗೂ B.1.617 ಹಾಗೂ B.1.618 ಮಾದರಿಗಳಿಗಿಂತಲೂ ಶಕ್ತಿಶಾಲಿಯಾಗಿದೆ ಎಂದು ತಜ್ಞರು ಅನುಮಾನಿಸಿದ್ದಾರೆ. ಹೈದರಾಬಾದ್​ನಲ್ಲಿರುವ ಜೀವಕೋಶ ಹಾಗೂ ಆಣ್ವಿಕ ಜೀವಶಾಸ್ತ್ರ ಕೇಂದ್ರದ ವಿಜ್ಞಾನಿ ದಿವ್ಯಾ ತೇಜ್ ಸೌಪಾಠಿ ಹೇಳುವಂತೆ ಹೊಸ ಮಾದರಿಯು B.1.36 ಮಾದರಿಗೆ ಹತ್ತಿರವಾಗಿದೆ. ದಕ್ಷಿಣ ಭಾರತದ ಕೆಲ ರಾಜ್ಯಗಳಲ್ಲಿ ಈ ಹಿಂದೆ ಏಕಾಏಕಿ ಉಲ್ಬಣಿಸಲು ಕಾರಣವಾದ ಸೋಂಕಿನ ಜತೆ ತಳಕು ಹಾಕಿಕೊಂಡಂತಿದೆ. ಕಳೆದ ಬಾರಿ ಪತ್ತೆಯಾದ ಹಾಗೂ ಆಂಧ್ರದಲ್ಲಿ ಸೋಂಕು ಕ್ಷಿಪ್ರಗತಿಯಲ್ಲಿ ಹಬ್ಬಲು ಕಾರಣವಾದ N440K ಮಾದರಿಯ ಮುಂದುವರೆದ ಭಾಗ ಇದಾಗಿದೆ. ಈ ರೂಪಾಂತರಿ ಅತಿ ವೇಗವಾಗಿ ಹಬ್ಬುವ ಶಕ್ತಿ ಹೊಂದಿದೆಯಾದರೂ ಎಲ್ಲಾ ಪ್ರದೇಶಗಳಲ್ಲೂ ಒಂದೇ ರೀತಿ ವರ್ತಿಸುತ್ತದೆ ಎಂದು ಹೇಳಲಾಗುವುದಿಲ್ಲ ಎಂದಿದ್ದಾರೆ.

ವಿಶಾಖಪಟ್ಟಣಂ ಜಿಲ್ಲಾಧಿಕಾರಿ ವಿ.ವಿನಯ್ ಚಾಂದ್ ಹೇಳುವಂತೆ ವಿಶಾಖಪಟ್ಟಣಂನಲ್ಲಿ ಪ್ರಸ್ತುತ ಸೋಂಕು ಹಬ್ಬಲು ಕಾರಣವಾದ ಮಾದರಿ ಕಳೆದ ಬಾರಿಗಿಂತಲೂ ಹೆಚ್ಚು ಭಿನ್ನವಾಗಿದೆ. ಆದರೆ, ಅದರ ಬಗ್ಗೆ ಸ್ಪಷ್ಟ ಚಿತ್ರಣ ಸಿಗುವುದಕ್ಕೆ ಇನ್ನೂ ಸಮಯ ಬೇಕಿದೆ ಎಂದಿದ್ದಾರೆ. ಇದರ ಬಗ್ಗೆ ಮಾತನಾಡಿರುವ ಆಂಧ್ರ ಮೆಡಿಕಲ್ ಕಾಲೇಜಿನ ಪ್ರಾಂಶುಪಾಲ ಪಿ.ವಿ.ಸುಧಾಕರ್, ಹೊಸ ಮಾದರಿಯು ಅತ್ಯಂತ ಕಡಿಮೆ ಅವಧಿಯಲ್ಲಿ ಅಭಿವೃದ್ಧಿ ಹೊಂದುವ ಶಕ್ತಿ ಹೊಂದಿದ್ದು, ಅತ್ಯಂತ ಕ್ಷಿಪ್ರಗತಿಯಲ್ಲಿ ಹರಡುವ ಗುಣವುಳ್ಳದ್ದಾಗಿದೆ. ಮೊದಲು ಸೋಂಕು ತಗುಲಿದ ಒಂದು ವಾರದ ನಂತರ ಸೋಂಕಿತರು ಅದರ ಪರಿಣಾಮಗಳನ್ನು ಅನುಭವಿಸುತ್ತಿದ್ದರು. ಆದರೆ, ಈಗ ಮೂರ್ನಾಲ್ಕು ದಿನದಲ್ಲೇ ಗಂಭೀರ ಸ್ಥಿತಿಗೆ ತಲುಪುತ್ತಿರುವುದನ್ನ ಗಮನಿಸಿದರೆ ರೂಪಾಂತರಿ ಎಷ್ಟು ಶಕ್ತಿಶಾಲಿ ಎಂದು ಅಂದಾಜಿಸಬಹುದು ಎಂದು ಹೇಳಿದ್ದಾರೆ.

Exit mobile version