ದೇಶದ ಜನತೆಗೆ ಮತ್ತೊಂದ್ ಶಾಕ್: ಎಲ್‌ಪಿಜಿ ಸಿಲಿಂಡರ್‌ ಬೆಲೆ ಮತ್ತೆ 25 ರೂ. ಏರಿಕೆ, ಮೂರು ತಿಂಗಳಲ್ಲಿ 200 ರೂ ಹೆಚ್ಚಳ

ಹೊಸದಿಲ್ಲಿ, ಫೆ. 25: ಕೇಂದ್ರ ಸರ್ಕಾರದ ಬೆಲೆ ಏರಿಕೆ ನೀತಿಯಿಂದ ಕಂಗೆಟ್ಟಿರುವ ದೇಶದ ಜನತೆಗೆ ಮತ್ತೊಂದು ಶಾಕ್ ನೀಡಿರುವ ಸರ್ಕಾರ, ಎಲ್‌ಪಿಜಿ ಸಿಲಿಂಡರ್‌ ಬೆಲೆಯಲ್ಲಿ 25ರೂ. ಮತ್ತೆ ಹೆಚ್ಚಳವಾಗುವ ಮೂಲಕ ತೈಲ ಕಂಪನಿಗಳು ಶ್ರೀ ಸಾಮಾನ್ಯನಿಗೆ ಮತ್ತೊಂದು ಹೊಡೆತ ನೀಡಿವೆ.

ಫೆಬ್ರವರಿ ತಿಂಗಳಲ್ಲಿ ಎಲ್‌ಪಿಜಿ ಸಿಲಿಂಡರ್‌ ಬೆಲೆ ಏರಿಕೆ ಮಾಡುತ್ತಿರುವುದು ಇದು ಮೂರನೇ ಬಾರಿ. ಹೊಸ ದರ ಏರಿಕೆಯ ನಂತರ ದಿಲ್ಲಿಯಲ್ಲಿ 14.2 ಕೆಜಿ ಸಿಲಿಂಡರ್‌ ಬೆಲೆ 794ರೂ. ಆಗಿದೆ. ಹಾಗೆ ನೋಡಿದರೆ ಒಟ್ಟಾರೆಯಾಗಿ ಫೆಬ್ರವರಿಯಲ್ಲಿ ಅಡುಗೆ ಸಿಲಿಂಡರ್‌ ಬೆಲೆಯು 100 ರೂಪಾಯಿ ಏರಿಕೆಯಾಗಿದೆ. ಹೊಸ ದರಗಳು ಇಂದಿನಿಂದಲೇ ಜಾರಿಗೆ ಬಂದಿವೆ.

ಫೆಬ್ರವರಿ 4ರಂದು ಸಿಲಿಂಡರ್‌ ಬೆಲೆ 25ರೂ. ಏರಿಕೆ ಮಾಡಲಾಯಿತು. ಫೆಬ್ರವರಿ 15ರಂದು 50 ರೂ. ಏರಿಕೆ ಮಾಡಲಾಗಿತ್ತು. ಇದಾದ ನಂತರ ಈಗ ಮತ್ತೆ 25 ರೂ. ಏರಿಕೆ ಮಾಡಲಾಗಿದೆ.

ಅಡುಗೆ ಸಿಲಿಂಡರ್‌ ಬೆಲೆಯು ಮೂರು ತಿಂಗಳಲ್ಲಿ 200 ರೂ. ಹೆಚ್ಚಾಗಿದೆ ಎಂಬುದು ಗಮನಾರ್ಹ ವಿಷಯವಾಗಿದೆ.
ಕಳೆದ ವರ್ಷ ಡಿಸೆಂಬರ್‌ನಲ್ಲಿ ಎರಡು ಬಾರಿ ಸಿಲಿಂಡರ್‌ ಬೆಲೆಯಲ್ಲಿ ಏರಿಕೆ ಮಾಡಿದ ನಂತರ 14.2 ಕೆಜಿ ಸಿಲಿಂಡರ್‌ ಬೆಲೆಯು 694ರೂ. ತಲುಪಿತ್ತು. ಫೆಬ್ರವರಿ 4ರಂದು ಬೆಲೆ ಏರಿಕೆ ಮಾಡಿದ ನಂತರ 719ರೂ.ಗೆ, ಫೆಬ್ರವರಿ 15ರ ದರ ಏರಿಕೆ ನಂತರ 769ರೂ. ಮೂರನೇ ಬಾರಿ ಏರಿಕೆ ಮಾಡಿದ ನಂತರ 794 ರೂ.ಗೆ ತಲುಪಿದೆ.

ಪ್ರತಿ ತಿಂಗಳ ಮೊದಲ ದಿನದಂದ ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್‌ನಲ್ಲಿ ಬದಲಾವಣೆಯಾಗುತ್ತದೆ.
ಅದೇ ರೀತಿ ಫೆ.1ರಂದು ವಾಣಿಜ್ಯ ಬಳಕೆಯ ಸಿಲಿಂಡರ್‌ ಬೆಲೆಯಲ್ಲಿ 190 ರೂ. ಏರಿಕೆಯಾಗಿದ್ದು ಇದರಿಂದಾಗಿ 19 ಕೆಜಿ ವಾಣಿಜ್ಯ ಬಳಕೆ ಸಿಲಿಂಡರ್‌ನ ಬೆಲೆಯು ದಿಲ್ಲಿಯಲ್ಲಿ 1533, ಕೋಲ್ಕೊತಾದಲ್ಲಿ 1598 ರೂ., ಮುಂಬೈನಲ್ಲಿ 1482.50 ಮತ್ತು ಚೆನ್ನೈನಲ್ಲಿ 1649.00 ರೂ ತಲುಪಿದೆ. ದೇಶದಲ್ಲಿ ಎಲ್‌ಪಿಜಿ ಸಿಲಿಂಡರ್‌ ಬಳಕೆ ಮಾಡುವವರ ಪ್ರಮಾಣವು ಶೇ. 99.5ಕ್ಕೆ ಏರಿಕೆಯಾಗಿದೆ.

Exit mobile version