ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಟಿ. ನಟರಾಜನ್, ವಾಷಿಂಗ್ಟನ್ ಸುಂದರ್ ಪಾದಾರ್ಪಣೆ

ಬ್ರಿಸ್ಬೇನ್, ಜ. 15: ಅತಿಥೇಯ ಆಸ್ಟ್ರೇಲಿಯಾ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಪರ ವೇಗದ ಬೌಲರ್ ಟಿ.‌ನಟರಾಜನ್ ಹಾಗೂ ಬೌಲಿಂಗ್ ಆಲ್ರೌಂಡರ್ ವಾಷಿಂಗ್ಟನ್ ಸುಂದರ್, ಟೆಸ್ಟ್ ಕ್ರಿಕೆಟಿಗೆ ಪಾದಾರ್ಪಣೆ ಮಾಡಿದರು.

ಗಾಬಾದಲ್ಲಿ ಶುಕ್ರವಾರದಿಂದ ಆರಂಭಗೊಂಡ ಟೆಸ್ಟ್ ಪಂದ್ಯಕ್ಕೆ ಟೀಂ ಇಂಡಿಯಾ ಗಾಯದ ಸಮಸ್ಯೆಯಲ್ಲಿ ಸಿಲುಕಿದ್ದು, ಪ್ರಮುಖ ಆಟಗಾರರ ಅನುಪಸ್ಥಿತಿ ಹಿನ್ನೆಲೆಯಲ್ಲಿ ಈ ಇಬ್ಬರು ಯುವ ಆಟಗಾರರು ಅಂತಾರಾಷ್ಟ್ರೀಯ ಟೆಸ್ಟ್ ಪಂದ್ಯಕ್ಕೆ ಪಾದಾರ್ಪಣೆ ಮಾಡುವ ಅವಕಾಶ ಪಡೆದರು.

ಪ್ರಸಕ್ತ ಆಸ್ಟ್ರೇಲಿಯಾ ಪ್ರವಾಸದಲ್ಲಿ ಏಕದಿನ ಹಾಗೂ ಟಿ೨೦ ಕ್ರಿಕೆಟಿಗೆ ಪಾದಾರ್ಪಣೆ ಮಾಡುವ ಮೂಲಕ ಗಮನ ಸೆಳೆದಿದ್ದ ನಟರಾಜನ್, ಭಾರತದ 300ನೇ ಆಟಗಾರನಾಗಿ ಟೆಸ್ಟ್ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದರೆ. 301ನೇ ಆಟಗಾರನಾಗಿ ವಾಷಿಂಗ್ಟನ್‌ ಸುಂದರ್, ತಮ್ಮ ಚೊಚ್ಚಲ ಟೆಸ್ಟ್ ಪಂದ್ಯದಲ್ಲಿ ಆಡುವ ಅವಕಾಶ ಪಡೆದರು.

ಕಳೆದ ಐಪಿಎಲ್ ಟೂರ್ನಿಯಲ್ಲಿ ತಮ್ಮ ಅದ್ಭುತ ಬೌಲಿಂಗ್ ಮೂಲಕ ಗಮನ ಸೆಳೆದಿದ್ದ ವೇಗಿ ನಟರಾಜನ್, ಆಸ್ಟ್ರೇಲಿಯಾ ಪ್ರವಾಸಕ್ಕೆ ಆಯ್ಕೆಯಾಗಿದ್ದರು. ಅಲ್ಲದೇ ಮೊದಲ ಪ್ರವಾಸದಲ್ಲಿ ಟೀಂ ಇಂಡಿಯಾ ಪರ ಆಡುವ ಅವಕಾಶ ಪಡೆದ ನಟರಾಜನ್, ಆ ಮೂಲಕ ಒಂದೇ ಪ್ರವಾಸದಲ್ಲಿ ಮೂರು ಮಾದರಿಯ ಕ್ರಿಕೆಟ್‌ ಸರಣಿಯಲ್ಲಿ ಪಾದಾರ್ಪಣೆ ಮಾಡಿದ ಮೊದಲ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆ ಪಡೆದರು.

Exit mobile version