ಉಚಿತ ಪಡಿತರ ಮಾರ್ಚ್ 2022ರ ವರೆಗೆ ವಿಸ್ತರಣೆ – ಅನುರಾಗ್‌ ಠಾಕೂರ್

ನವದೆಹಲಿ: ಮಾರ್ಚ್ 2022 ರವರೆಗೆ ಉಚಿತ ಪಡಿತರ ನೀಡುವ ‘ಪಿಎಂ ಗರೀಬ್ ಕಲ್ಯಾಣ್ ಅನ್ನ ಯೋಜನೆ’ಯನ್ನು ವಿಸ್ತರಿಸಲು ಕೇಂದ್ರ ಸಚಿವ ಸಂಪುಟ ಬುಧವಾರ ನಿರ್ಧರಿಸಿದೆ ಎಂದು ಕೇಂದ್ರ ಸಚಿವ ಅನುರಾಗ್ ಠಾಕೂರ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಕಳೆದ ವರ್ಷ, ಕೋವಿಡ್ -19ನಿಂದ ಉಂಟಾದ ಆರ್ಥಿಕ ಹಿನ್ನಡೆಗಳ ಹಿನ್ನೆಲೆಯಲ್ಲಿ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ (ಎನ್‌ಎಫ್‌ಎಸ್‌ಎ) ವ್ಯಾಪ್ತಿಗೆ ಬರುವ ಎಲ್ಲಾ ಫಲಾನುಭವಿಗಳಿಗೆ ಪಿಎಂ-ಜಿಕೆವೈ ಅನ್ನು ಸರ್ಕಾರ ಘೋಷಿಸಿತ್ತು.

ಯೋಜನೆಯು ನವೆಂಬರ್ 30 ರಂದು ಕೊನೆಗೊಳ್ಳಬೇಕಿತ್ತು. ಆದರೆ ಅದು ಮುಂದಿನ ವರ್ಷದ ಮಾರ್ಚ್ ವರೆಗೆ ವಿಸ್ತರಣೆಯಾಗಲಿದೆ. ಈ ಯೋಜನೆಯಡಿಯಲ್ಲಿ, ಸುಮಾರು 80 ಕೋಟಿ NFSA ಫಲಾನುಭವಿಗಳಿಗೆ ಸರ್ಕಾರವು 5 ಕೆಜಿ ಆಹಾರ ಧಾನ್ಯಗಳನ್ನು ಉಚಿತವಾಗಿ ನೀಡುತ್ತದೆ.

ದೇಶೀಯ ಮಾರುಕಟ್ಟೆಯಲ್ಲಿ ಲಭ್ಯತೆಯನ್ನು ಸುಧಾರಿಸಲು ಮತ್ತು ಬೆಲೆಗಳನ್ನು ಪರಿಶೀಲಿಸಲು ಅನ್ನ ಯೋಜನೆ ಅಡಿಯಲ್ಲಿ ಸರ್ಕಾರವು ಗ್ರಾಹಕರಿಗೆ ಅಕ್ಕಿ ಮತ್ತು ಗೋಧಿಯನ್ನು ನೀಡುತ್ತಿದೆ.

ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸುವ ಔಪಚಾರಿಕತೆಯನ್ನು ಸಂಪುಟವು ಪೂರ್ಣಗೊಳಿಸಿದೆ ಎಂದು ಅನುರಾಗ್ ಠಾಕೂರ್ ಹೇಳಿದರು. ಸಂಸತ್ತಿನ ಮುಂಬರುವ ಅಧಿವೇಶನದಲ್ಲಿ, ಈ ಮೂರು ಕಾನೂನುಗಳನ್ನು ಹಿಂಪಡೆಯುವುದು ನಮ್ಮ ಆದ್ಯತೆಯಾಗಿದೆ ಎಂದು ಠಾಕೂರ್ ಹೇಳಿದರು.

Exit mobile version