ಅಪರಾತ್ರಿಯಲ್ಲಿ ಅಪರಿಚಿತ ಕರೆ ಬಂದರೆ ಎಚ್ಚರ!?

ಬೆಂಗಳೂರು, ಡಿ. 15: ಅಪರಿಚಿತ ಫೇಸ್​ಬುಕ್, ವಾಟ್ಸಾಪ್ ಖಾತೆಯಿಂದ ರಾತ್ರಿ ವೇಳೆ ವಿಡಿಯೋ ಕರೆ ಬಂದರೆ ಸ್ವೀಕರಿಸುವ ಮುನ್ನ ಎಚ್ಚರ! ಅಪ್ಪಿತಪ್ಪಿ ಕರೆ ಸ್ವೀಕರಿಸಿದರೆ, ಬೆತ್ತಲಾಗಿರುವ ಹುಡುಗಿ ಜತೆ ಮಾತನಾಡುತ್ತಿರುವ ವಿಡಿಯೋ ರೆಕಾರ್ಡ್ ಆಗಿ ಬಿಡುತ್ತದೆ. ನಂತರ ಅದನ್ನು ತೋರಿಸಿ ಹಣಕ್ಕಾಗಿ ಬ್ಲ್ಯಾಕ್​ಮೇಲ್​ ಮಾಡುವ ಸಾಧ್ಯತೆ ಇದೆ.

ಸೈಬರ್ ಖದೀಮರು ದುಡ್ಡು ಮಾಡುವುದಕ್ಕೆ ಕಂಡುಕೊಂಡಿರುವ ಹೊಸ ವಿಧಾನ ಇದು. ಫೇಸ್​ಬುಕ್, ಟ್ವಿಟರ್, ಇನ್​ಸ್ಟಾಗ್ರಾಂನಲ್ಲಿ ಫ್ರೆಂಡ್ ರಿಕ್ವೆಸ್ಟ್ ಕಳುಹಿಸುತ್ತಾರೆ. ಬಳಿಕ ಸ್ನೇಹ ಬಯಸಿ ವಾಟ್ಸಾಪ್ ನಂಬರ್ ಪಡೆಯುತ್ತಾರೆ. ನಿಮಗೆ ಗೊತ್ತಿಲ್ಲದೆ ನಿಮ್ಮ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ವೈಯಕ್ತಿಕ, ಸ್ನೇಹಿತರ, ಕುಟುಂಬ ಸದಸ್ಯರ ಮೊಬೈಲ್ ನಂಬರ್ ಮತ್ತು ಫೋಟೋಗಳನ್ನು ಸಂಗ್ರಹಿಸುತ್ತಾರೆ. ವಾಟ್ಸಾಪ್ ಅಥವಾ ಮೆಸೆಂಜರ್​ನಲ್ಲಿ ವಿಡಿಯೋ ಕಾಲ್ ಮಾಡಿ ಸಂಭಾಷಣೆ ನಡೆಸುತ್ತಾರೆ.

ಪತ್ರಕರ್ತನಿಗೂ ಧಮಕಿ:

ಬೆಂಗಳೂರಿನ ಪತ್ರಕರ್ತನ ಜತೆ ಫೇಸ್​ಬುಕ್ ನಲ್ಲಿ ಸ್ನೇಹ ಬೆಳೆಸಿದ್ದ ಮಹಿಳೆ, ನಗ್ನಸ್ಥಿತಿಯಲ್ಲಿ ವಿಡಿಯೋ ಕರೆ ಮಾಡಿದ್ದಳು. ಗಾಬರಿಗೊಂಡ ಪತ್ರಕರ್ತ ಕರೆ ನಿಷ್ಕ್ರಿಯಗೊಳಿಸಿದ್ದ. ಆಕೆ ವ್ಯಾಟ್ಸ್‌ಆಪ್​ಗೆ ಸಂದೇಶ ಕಳುಹಿಸಿದಾಗ ಪತ್ರಕರ್ತ ಸೈಬರ್ ಕ್ರೈಂ ಠಾಣೆಗೆ ದೂರು ಕೊಟ್ಟಿದ್ದಾರೆ.

ಆನಂತರ ತಡರಾತ್ರಿ ವಿಡಿಯೋ ಕಾಲ್ ಮಾಡಿ ಏಕಾಏಕಿ ಬೆತ್ತಲೆ ದೃಶ್ಯವನ್ನು ತೋರಿಸುತ್ತಾರೆ. ತಕ್ಷಣ ವಿಡಿಯೋ ಕಾಲ್​ನ ಸ್ಕ್ರೀನ್ ಶಾಟ್ ಅಥವಾ ವಿಡಿಯೋ ರೆಕಾರ್ಡ್ ಮಾಡಿಕೊಳ್ಳುತ್ತಾರೆ. ಕರೆ ಸ್ವೀಕರಿಸಿದವರ ಫೊಟೋ ಜತೆಗೆ ಕರೆ ಮಾಡಿದವರ ಬೆತ್ತಲೆ ಪೋಟೋ ಸಹ ಸೆರೆಯಾಗಿರುತ್ತದೆ. ಇದನ್ನೇ ಬಂಡವಾಳ ಮಾಡಿಕೊಳ್ಳುವ ಮೋಸಗಾರರು ಕರೆ ಸ್ವೀಕರಿಸಿದ ವ್ಯಕ್ತಿಯ ವಾಟ್ಸ್​ಆಪ್​ಗೆ ಅಶ್ಲೀಲ ಫೊಟೋ ಕಳುಹಿಸಿ ಬ್ಲ್ಯಾಕ್​ಮೇಲ್​ ಮಾಡುತ್ತಾರೆ. ಫೋನ್ ಪೇ, ಗೂಗಲ್ ಪೇ ಅಥವಾ ನೆಟ್ ಬ್ಯಾಂಕಿಂಗ್​ನಲ್ಲಿ ಹಣ ಕಳುಹಿಸುವಂತೆ ಬೆದರಿಕೆ ಒಡ್ಡುತ್ತಾರೆ.

ಇಲ್ಲವಾದರೆ, ನಿಮ್ಮ ಸ್ನೇಹಿತರು, ಕುಟುಂಬ ಸದಸ್ಯರ ಫೇಸ್​ಬುಕ್ ಖಾತೆಗೆ ಟ್ಯಾಗ್ ಮಾಡುತ್ತೇವೆ ಅಥವಾ ವಾಟ್ಸ್​ಆಪ್​ಗೆ ಫೋಟೋ ಕಳುಹಿಸಿ ತನ್ನ ಬೆತ್ತಲೆ ದೃಶ್ಯ ನೋಡಿರುವ ಬಗ್ಗೆ ತಿಳಿಸಿ ಮರ್ಯಾದೆ ತೆಗೆಯುತ್ತೇನೆ ಎಂದು ಬ್ಲ್ಯಾಕ್​ಮೇಲ್ ಮಾಡಿ ಸುಲಿಗೆ ಮಾಡುತ್ತಾರೆ. ಇಂತಹ ಸೈಬರ್ ಬ್ಲ್ಯಾಕ್​ಮೇಲ್​ ಪ್ರಕರಣಗಳು ದಿನೇದಿನೆ ಹೆಚ್ಚಾಗುತ್ತಿವೆ. ಕೆಲವರು ಮರ್ಯಾದೆಗೆ ಅಂಜಿ ಹಣ ಕೊಟ್ಟು ಸುಮ್ಮನಾಗುತ್ತಿದ್ದಾರೆ. ಅಂತಹವರ ಬಳಿ ಮತ್ತೆ ಮತ್ತೆ ಬೆದರಿಸಿ ಸುಲಿಗೆ ಮಾಡುತ್ತಿದ್ದಾರೆ. ಇನ್ನು ಹಲವರು ಪೊಲೀಸ್ ಠಾಣೆಗೆ ದೂರು ಕೊಟ್ಟು ಆರೋಪಿಗಳ ಬಂಧನಕ್ಕೆ ಮನವಿ ಮಾಡಿದ್ದಾರೆ ಎಂದು ಸೈಬರ್ ಕ್ರೈಂ ವಿಭಾಗದ ಪೊಲೀಸರು ತಿಳಿಸಿದ್ದಾರೆ.

ಖಾಕಿಗೇ ಬ್ಲ್ಯಾಕ್ಮೇಲ್​!

ಡಿ.8ರ ರಾತ್ರಿ 8.30ರಲ್ಲಿ ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಇನ್​ಸ್ಪೆಕ್ಟರ್ ಸಿ. ದಯಾನಂದಗೆ ಯುವತಿಯೊಬ್ಬಳು ವಾಟ್ಸ್​ಆಪ್​ನಲ್ಲಿ ವಿಡಿಯೋ ಕಾಲ್ ಮಾಡಿದ್ದಾಳೆ. ಕರೆ ಸ್ವೀಕರಿಸಿದ ಇನ್​ಸ್ಪೆಕ್ಟರ್​ಗೆ ಅಶ್ಲೀಲ ದೃಶ್ಯ ತೋರಿಸಿದ್ದು, ದಯಾನಂದ್ ಕರೆ ಕಟ್ ಮಾಡುವಷ್ಟರಲ್ಲಿ ಸ್ಕ್ರೀನ್ ಶಾರ್ಟ್ ಮತ್ತು ವಿಡಿಯೋ ರೆಕಾರ್ಡ್ ಮಾಡಿಕೊಂಡು, 11,000 ರೂ.ಗೆ ಬ್ಲ್ಯಾಕ್​ಮೇಲ್​ ಮಾಡಿದ್ದಳು. ಈ ಕುರಿತು ಕೇಂದ್ರ ವಿಭಾಗ ಸಿಇಎನ್ ಠಾಣೆಗೆ ದೂರು ನೀಡಿದ್ದಾರೆ.

ಯುವಕನಿಗೆ 5 ಸಾವಿರ ರೂ. ವಂಚನೆ ಶಾಂತಿ ಎಂಬ ಹೆಸರಲ್ಲಿ ಯುವತಿಯೊಬ್ಬಳು ಡಿ. 9ರಂದು ವೈಟ್​ಫೀಲ್ಡ್​ನ ರಾಘವೇಂದ್ರ ಎಂಬಾತನ ವಾಟ್ಸ್​ಆಪ್ ನಂಬರ್ ಸಂಗ್ರಹಿಸಿದ್ದಳು. ವಿಡಿಯೋ ಕಾಲ್​ನಲ್ಲಿ ಬೆತ್ತಲೆ ದೃಶ್ಯ ತೋರಿಸಿ ಸ್ಕ್ರೀನ್ ಶಾರ್ಟ್ ಮತ್ತು ವಿಡಿಯೋ ರೆಕಾರ್ಡ್ ಮಾಡಿಕೊಂಡು ಬ್ಲ್ಯಾಕ್​ಮೇಲ್ ಮಾಡಿದ್ದಾಳೆ. ಯುವಕ ಮೊದಲು 4,900 ರೂ. ಪಾವತಿ ಮಾಡಿದ್ದಾನೆ. ಮತ್ತೆ ಹಣಕ್ಕೆ ಬೇಡಿಕೆ ಇಟ್ಟಾಗ ವೈಟ್​ಫೀಲ್ಡ್ ಸಿಇಎನ್ ಠಾಣೆಗೆ ದೂರು ನೀಡಿದ್ದಾನೆ.

ಪೊಲೀಸರ ಸಲಹೆಗಳು:

  1. ಫೇಸ್​ಬುಕ್, ಟ್ವಿಟರ್, ಇನ್​ಸ್ಟಾಗ್ರಾಂ ಖಾತೆ ಪ್ರೊಫೈಲ್ ಲಾಕ್ ಮಾಡಿ
  2. ಅಪರಿಚಿತರ ಗೆಳೆತನದಿಂದ ದೂರ ಇರುವುದು ಒಳಿತು
  3. ಅನಗತ್ಯವಾಗಿ ಮೊಬೈಲ್ ನಂಬರ್, ವೈಯಕ್ತಿಕ ವಿಚಾರ ಹಂಚಿಕೊಳ್ಳಬೇಡಿ
  4. ಅಪರಿಚಿತ ನಂಬರ್​ನಿಂದ ವಿಡಿಯೋ ಕಾಲ್ ಬಂದಾಗ ಎಚ್ಚರಿಕೆ ವಹಿಸಿ
  5. ಅನಾಮಧೇಯ ವಿಡಿಯೋ ಕಾಲ್ ಬಂದಾಗ ಮೊಬೈಲ್ ಹಿಂಬದಿ ಕ್ಯಾಮರಾ ಆನ್ ಮಾಡಿ
  6. ಜಾಲತಾಣದಲ್ಲಿ ಫೋಟೋ, ಮೊಬೈಲ್ ನಂಬರ್​ ಅಪ್​ಲೋಡ್ ಮಾಡದಿರುವುದು ಸುರಕ್ಷಿತ
  7. ಅಶ್ಲೀಲ ವಿಡಿಯೋ, ಫೋಟೋ ನೋಡುವುದು, ಚಾಟಿಂಗ್​ನಿಂದ ದೂರ ಉಳಿಯಿರಿ
Exit mobile version