ಮೋದಿ ಸಂಪುಟ ಸೇರುತ್ತಾರಾ ಈ ಸಚಿವರು?

ನವದೆಹಲಿ, ಜೂ. 30: ಸುಮಾರು ಎರಡು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಕೇಂದ್ರ ಸಚಿವ ಸಂಪುಟ ಪುನರ್ರಚನೆ ಈಗ ಆಗುವ ಲಕ್ಷಣಗಳು ಗೋಚರಿಸಿವೆ. ಇದೇ ಹಿನ್ನೆಲೆಯಲ್ಲಿ‌ ರಾಜ್ಯದ 10ಕ್ಕೂ ಹೆಚ್ಚು ಸಂಸದರು ಕೇಂದ್ರ ಸಚಿವ ಸ್ಥಾನ ಸಿಗಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ. ತಮಗೆ ಈ ಎಲ್ಲಾ ಕಾರಣಗಳಿಗೆ ಸಚಿವ ಸ್ಥಾನ ಸಿಗಬಹುದು ಎಂಬ ಲೆಕ್ಕಾಚಾರವನ್ನೂ ಹಾಕಿಕೊಂಡಿದ್ದಾರೆ. ಅದರ ಸಂಪೂರ್ಣ ವಿವರ ಈ ರೀತಿ ಇದೆ.

ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ, ಹಾವೇರಿ ಸಂಸದ ಶಿವಕುಮಾರ್ ಉದಾಸಿ, ಕೊಪ್ಪಳ ಸಂಸದ ಕರಡಿ‌ ಸಂಗಣ್ಣ, ಗುಲ್ಬರ್ಗ ಸಂಸದ ಉಮೇಶ್ ಜಾಧವ್, ಬೆಂಗಳೂರು ಸೆಂಟ್ರಲ್ ಸಂಸದ ಪಿ.ಸಿ. ಮೋಹನ್, ಬೀದರ್ ಸಂಸದ ಭಗವಂತ ಖೂಬಾ, ಬಾಗಲಕೋಟೆ ಸಂಸದ ಪಿ.ಸಿ. ಗದ್ದೀಗೌಡರ್, ಚಿತ್ರದುರ್ಗದ ಸಂಸದ ಎ. ನಾರಾಯಣಸ್ವಾಮಿ, ಉಡುಪಿ ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಹಾಗೂ ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಪ್ರಮುಖ ಆಕಾಂಕ್ಷಿಗಳು. ಈ ಪೈಕಿ ಇಬ್ಬರು ಸಂಸದರಿಗೆ ಮಾತ್ರ ಅವಕಾಶ ಸಿಗುವ ಸಾಧ್ಯತೆ.‌ ರಾಜ್ಯದಿಂದ ಕೇಂದ್ರ ಸಚಿವರಾಗುವ ಅದೃಷ್ಟ ಯಾರಿಗೆ ಸಿಗಲಿದೆ? ಇವರು ಯಾವ ಆಧಾರದ ಮೇಲೆ ತಮಗೆ ಅವಕಾಶ ಸಿಗಲಿದೆ ಎಂದುಕೊಂಡಿದ್ದಾರೆ ಎಂಬ ವಿವರ ಹೀಗಿದೆ.

ರಾಜ್ಯದಲ್ಲಿ ಈಗ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನಾಯಕತ್ವ ಬದಲಾವಣೆ ವಿಚಾರ ವ್ಯಾಪಕವಾಗಿ ಚರ್ಚೆ ಆಗುತ್ತಿದೆ. ಒಂದೊಮ್ಮೆ ಬಿಜೆಪಿ ಹೈಕಮಾಂಡ್ ಯಡಿಯೂರಪ್ಪ ಅವರನ್ನು ಬದಲಿಸಲು ತೀರ್ಮಾನಿಸಿದರೆ ಅವರ ಪುತ್ರ ಬಿ.ವೈ ರಾಘವೇಂದ್ರ ಅವರಿಗೆ ಸಚಿವ ಸ್ಥಾನ ಸಿಗುವ ಸಂಭವ ಇದೆ ಎನ್ನಲಾಗುತ್ತಿದೆ.

ಲಿಂಗಾಯತ, ವಿದ್ಯಾವಂತ ಮತ್ತು ಸಂಸದೀಯ ಸ್ಥಾಯಿ ಸಮಿತಿಗಳಲ್ಲಿ ಸಕ್ರೀಯ ಎನ್ನುವ ಕಾರಣಕ್ಕೆ ಶಿವಕುಮಾರ್ ಉದಾಸಿಗೆ ಅವಕಾಶ ಸಿಗಬಹುದು. ತಮ್ಮ ವಿರುದ್ಧ ಬಂಡಾಯ ಎದ್ದಿರುವ ಪಂಚಮಸಾಲಿಗಳನ್ನು ವಿಶ್ವಾಸಕ್ಕೆ ಪಡೆಯಲು ಕರಡಿ ಸಂಗಣ್ಣ ಅವರ ಪರವಾಗಿ ಸಿಎಂ ಯಡಿಯೂರಪ್ಪ ಲಾಭಿ ಮಾಡುತ್ತಿದ್ದಾರೆ ಎನ್ನಲಾಗಿದೆ.

ಹಿರಿಯ ನಾಯಕ, ಮುತ್ಸದಿ ರಾಜಕಾರಣಿ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸೋಲಿಸಿದ ಕಾರಣಕ್ಕೆ ಉಮೇಶ್ ಜಾಧವ್ ಅವರಿಗೆ ಅವಕಾಶ ಲಭಿಸುವ ಸಾಧ್ಯತೆ ಇದೆ. ಹಿಂದುಳಿದ ವರ್ಗಗಳಿಗೆ ಪ್ರಾತಿನಿಧ್ಯ ನೀಡಬೇಕೆನಿಸಿದರೆ ಪಿ.ಸಿ. ಮೋಹನ್ ಗೆ ಅವಕಾಶ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಬಾಬಾ ರಾಮದೇವ್ ಶಿಫಾರಸು ಫಲಿಸಿದರೆ ಭಗವಂತ ಖೂಬಾಗೆ ಅವಕಾಶ ಸಿಗುವ ಸಾಧ್ಯತೆ ಇದೆ. ಲಿಂಗಾಯತ, ಹಿರಿತರನ, ಉತ್ತರ ಕರ್ನಾಟಕದವರು ಎಂಬ ಕಾರಣಗಳಿಂದ ಪಿ.ಸಿ. ಗದ್ದೀಗೌಡರ್ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಎಡಗೈ ದಲಿತ ಸಮಯದಾಯದ ರಮೇಶ್ ಜಿಗಜಿಣಗಿ ಸ್ಥಾನ ತುಂಬಲು ತಮ್ಮನ್ನು ಪರಿಗಣಿಸಬಹುದೆಂದು ಎ. ನಾರಾಯಣಸ್ವಾಮಿ ಅವರ ಲೆಕ್ಕಾಚಾರವಾಗಿದೆ.

ಸದಾನಂದಗೌಡರಿಗೆ ಕೋಕ್ ನೀಡಿದರೆ ತಮಗೆ ಅವಕಾಶ ಸಿಗಬಹುದೆಂಬುದು ಶೋಭಾ ಕರಂದ್ಲಾಜೆ ಅವರ ನಿರೀಕ್ಷೆ, ಪುದುಚೇರಿಯಲ್ಲಿ ಎನ್ ಡಿಎ ಗೆಲುವಿಗೆ ಕಾರ್ಯತಂತ್ರ ರೂಪಿಸಿದ ಕಾರಣಕ್ಕೆ ತನಗೆ ಸಚಿವ ಸ್ಥಾನ ನೀಡಬಹುದೆಂಬುದು ರಾಜೀವ್ ಚಂದ್ರಶೇಖರ್ ಅವರ ನಿರೀಕ್ಷೆ.

Exit mobile version