`ಬ್ಲ್ಯಾಕ್‌ ಮೇಲ್‌ ಕುಮಾರಸ್ವಾಮಿʼ ; ಕಣ್ಣೀರ ಕೋಡಿಯಿಂದ ಕುಟುಂಬಕ್ಕೆ ಲಾಭವೇ ಹೊರತು ಜನತೆಗೇನು ಲಾಭ? : ಅಶ್ವಥ್ ನಾರಾಯಣ್‌

hdk

ಬ್ಲ್ಯಾಕ್‌ ಮೇಲ್‌ ಕುಮಾರಸ್ವಾಮಿ ಅವರ ಕಣ್ಣೀರ ಕೋಡಿಯಿಂದ ಕುಟುಂಬಕ್ಕೆ ಲಾಭವೇ ಹೊರತು ಜನತೆಗೇನು ಲಾಭ? ಸಾಮಾನ್ಯ ಕಾರ್ಯಕರ್ತರಿಗೆ ಅಧಿಕಾರ ನೀಡುವ ಧೈರ್ಯ ಇದೆಯೇ? ಕುಮಾರಸ್ವಾಮಿಯವರ ಬುಟ್ಟಿಯಲ್ಲಿ ಯಾವ ಹಾವಿದೆ ಎಂದು ನಾಡಿನ ಜನತೆಗೇ ಗೊತ್ತಿದೆ. ಸುಮ್ಮನೆ ಹಾವಿದೆ, ಹಾವಿದೆ ಎಂದು ಊರೆಲ್ಲಾ ಡಂಗುರ ಸಾರಿ ಹೆದರಿಸುವ ತಂತ್ರವೇಕೆ? ಎಲ್ಲಿಟ್ಟಿದ್ದೀರಿ ನಿಮ್ಮ ದಾಖಲೆಗಳನ್ನು?

ಗೆದ್ದಲು ಹಿಡಿಯುವ ಮುನ್ನ ಬಹಿರಂಗಪಡಿಸಿ ಸ್ವಾಮಿ. ನೀವು ಈವರೆಗೆ ಹೇಳಿದ ಸುಳ್ಳುಗಳನ್ನು ಎಣಿಸಲು ಸಾಧ್ಯವೇ? ಎಂದು ಸಚಿವ(Minister) ಅಶ್ವಥ್‌ ನಾರಾಯಣ್(Ashwath Narayan) ಪ್ರಶ್ನಿಸಿದ್ದಾರೆ. ಎಚ್.ಡಿ.ಕುಮಾರಸ್ವಾಮಿ(HD Kumarswamy) ಅವರ ವಿರುದ್ದ ತೀವ್ರ ವಾಗ್ದಾಳಿ ನಡೆಸಿರುವ ಅವರು‌, ರಾಮನಗರ(Ramanagar) ಜಿಲ್ಲೆಯ ಕೇತೋಹಳ್ಳಿಯಲ್ಲಿ ಎಷ್ಟು ಭೂಮಿಯನ್ನು ಲಪಟಾಯಿಸಿದ್ದೀರಿ ಕುಮಾರಸ್ವಾಮಿ ಅವರೇ? ತನ್ನದು ರಾಮನಗರದ್ದು, ತಾಯಿ ಮಗನ ಸಂಬಂಧ ಎನ್ನುವ ತಾವು ರಾಮನಗರವನ್ನು ನಿರ್ಲಕ್ಷ್ಯ ಮಾಡಿದ್ದೇಕೆ?

ಇದು ತಾಯಿಗೇ ಮೋಸ ಮಾಡಿದಂತಲ್ಲವೇ? ಈ ರೀತಿ ಮಾಡಲು ಆತ್ಮಸಾಕ್ಷಿ ಒಪ್ಪುತ್ತದೆಯೇ? ರಾಜಕೀಯ(Politics) ಜೀವನಕ್ಕೆ ನೆಲೆ ಕಲ್ಪಿಸಿದ ರಾಮನಗರಕ್ಕೆ ಏನು ಕೊಡುಗೆ ನೀಡಿದ್ದೀರಿ? ಸುಸಜ್ಜಿತ ಜಿಲ್ಲಾಸ್ಪತ್ರೆ ನಿರ್ಮಿಸಿದ್ದೀರಾ? ಕೊಳಗೇರಿಯ ಅಭಿವೃದ್ಧಿ ಮಾಡಿದ್ದೀರಾ? ಎಲ್ಲಿದ್ದೀರಿ ಎಂದು ಜನತೆ ಕೇಳುವಾಗ ಕ್ಯಾಸಿನೋದಲ್ಲಿದ್ದವರು, ನಮ್ಮ ಸರ್ಕಾರ ರಾಮನಗರದ ಅಭಿವೃದ್ಧಿಗೆ ಕೈಗೊಂಡ ಕ್ರಮಗಳನ್ನು ಸಹಿಸಲಾರದೇ ಬೊಬ್ಬೆ ಹೊಡೆಯುತ್ತಿರುವುದೇಕೆ? ಎಂದು ಪ್ರಶ್ನಿಸಿದ್ದಾರೆ.

ಸಿದ್ದರಾಮಯ್ಯರನ್ನ(Siddaramaiah) ಸೋಲಿಸಿದ ಜಿ.ಟಿ ದೇವೇಗೌಡ(GT Devegowda) ಅವರನ್ನೇ ಮೂಲೆಗುಂಪು ಮಾಡಿದ್ದೀರಿ. ಸೂಟ್ಕೇಸ್ ಕೊಟ್ಟರೆ ತಮ್ಮ ಪಕ್ಷದಿಂದ ಸ್ಪರ್ಧಿಸಲು ಟಿಕೆಟ್ ಸಿಗುತ್ತದೆಂದು ನಿಮ್ಮ ಸ್ವಂತ ಅಣ್ಣನ ಮಗನೇ ಹೇಳಿದ್ದು ನೆನಪಿದೆಯೇ? ಈ ಬಾರಿ ಸೂಟ್ಕೇಸ್ನಲ್ಲಿ ಎಷ್ಟಿದ್ದರೆ ಟಿಕೆಟ್ ಸಿಗುತ್ತದೆ ಸ್ವಾಮಿ? ಎಂದು ನಿಮ್ಮ ಪಕ್ಷದವರೇ ಕೇಳುತ್ತಿದ್ದಾರೆ. ಕುಟುಂಬ ರಾಜಕಾರಣ ಮಾಡಬೇಡಿ ಎಂದರೆ ಮೈಮೇಲೆ ಬಂದವರಂತೆ ವರ್ತಿಸುವುದೇಕೆ?

ಹೋದಲ್ಲೆಲ್ಲಾ ಕಣ್ಣೀರು ಸುರಿಸುವ ನಾಟಕವೇಕೆ? ಅಧಿಕಾರ ಸಿಗದಿದ್ದರೆ ಸಾಯುತ್ತೇನೆಂಬ ಮಾತೇಕೆ? ಕಾಂಗ್ರೆಸ್(Congress) ಜತೆ ಸೇರಿ ಶ್ರೀಮತಿ ಸುಮಲತಾ ಅಂಬರೀಷ್(Sumalatha Ambareesh) ಅವರನ್ನು ಸೋಲಿಸಲು ಹಣದ ಹೊಳೆಯನ್ನೇ ಹರಿಸಿದ ಕುಮಾರಸ್ವಾಮಿಯವರೆಷ್ಟು ಶುದ್ಧಹಸ್ತರು? ಅವರಾಡುವ ಮಾತೆಷ್ಟು ಸತ್ಯ ಎಂದು ಕೇಳಿದರೆ ಕಳ್ಳರಂತೆ ನುಣುಚಿಕೊಳ್ಳುವುದೇಕೆ? ಐಎಂಎ ಹಗರಣದಲ್ಲಿ(IMI Scam) ತಮಗೂ ಪಾಲು ನೀಡಲು ಹಣ ಸಂಗ್ರಹವಾಗಿತ್ತಂತೆ, ಎಷ್ಟು ತಲುಪಿದೆ? ಇನ್ನೆಷ್ಟು ಬರಬೇಕು?

ಗೆದ್ದಿದ್ದು ಮೂರು ಮತ್ತೊಂದು ಸೀಟ್, ಆದರೂ ಗೆದ್ದಲು ಕಟ್ಟಿದ ಹುತ್ತದಲ್ಲಿ ಸೇರಿಕೊಂಡ ಹಾವಿನಂತೆ ಕಳ್ಳದಾರಿಯಲ್ಲಿ ಸಿಎಂ ಆದದ್ದು ಯಾರು? ಅಧಿಕಾರ ದುರ್ಬಳಕೆ ಮಾಡಿಕೊಂಡು ಆದಿ ಚುಂಚನಗಿರಿ ಶ್ರೀಗಳ ಫೋನ್ ಕದ್ದಾಲಿಕೆ ಮಾಡಿದ ಕುಮಾರಸ್ವಾಮಿ ಅವರನ್ನು ಎಲ್ಲಿದ್ದೀರಿ ಎಂದು ಕೇಳಿದರೆ ವಿಷ ಸರ್ಪದಂತೆ ಬುಸುಗುಡುವುದೇಕೆ? ಎಂದು ಲೇವಡಿ ಮಾಡಿದ್ದಾರೆ. ಜನರೇ ಬಹಿಷ್ಕಾರ ಹಾಕಿ, ಅಧಿಕಾರದಿಂದ ದೂರವಿಟ್ಟಿದ್ದ ಕಾಂಗ್ರೆಸ್ ಪಕ್ಷದ ಜತೆ ಮೈತ್ರಿ ಮಾಡಿಕೊಂಡು, ತಂತಿಯ ಮೇಲೆ ನಡೆಯುತ್ತಿದ್ದೇನೆ ಎನ್ನುವಾಗ,

ನಾಡಿನ ಜನತೆಗೆ ಮೋಸ ಮಾಡಿದ್ದೇನೆಂಬ ಪಾಪ ಪ್ರಜ್ಞೆ ಕಾಡಲಿಲ್ಲವೇ? ಕುರ್ಚಿಯಾಸೆಗೆ ಕಳ್ಳರ ಜತೆಗೂ ಸೇರುತ್ತೇನೆಂಬುದನ್ನು ಸಾಬೀತುಪಡಿಸಿದ ತಮ್ಮ ಕಳ್ಳಾಟಗಳನ್ನು ಎಷ್ಟು ದಿನ ಬಚ್ಚಿಡಬಲ್ಲಿರಿ? ಇದೇ ಕುಮಾರಸ್ವಾಮಿಯವರನ್ನು 2006 ರಲ್ಲಿ ನಮ್ಮ ಭಾರತೀಯ ಜನತಾ ಪಕ್ಷ ಮುಖ್ಯಮಂತ್ರಿಯನ್ನಾಗಿ ಮಾಡಿತ್ತು. ಅಧಿಕಾರದಾಸೆಗೆ ಕೊಟ್ಟ ಮಾತು ತಪ್ಪಿ ನಡೆವಾಗ ನಾಚಿಕೆ ಆಗಲಿಲ್ಲವೇ? ಮುಂದಿನಿಂದ ನಂಬಿಸಿ, ಹಿಂದಿನಿಂದ ಚೂರಿ ಹಾಕುವ ಕಲೆಯನ್ನು ಎಲ್ಲಿ ಕಲಿತಿರಿ ಕುಮಾರಸ್ವಾಮಿಯವರೇ?

ಕೆಂಗಲ್ ಹನುಮಂತಯ್ಯ(Kengal Hanumanthaiah) ಅವರು ಭವ್ಯ ವಿಧಾನಸೌಧ ಕಟ್ಟಿಕೊಟ್ಟರೂ, ತಾಜ್ ವೆಸ್ಡ್ ಎಂಡ್ನಲ್ಲಿ(Taj West End) ಕುಳಿತು ಸರ್ಕಾರ ನಡೆಸಿದ ಕುಮಾರಸ್ವಾಮಿ ಅವರೇ, ಅಂದು ತಮ್ಮನ್ನು ವಿಧಾನಸೌಧದಲ್ಲಿ ಹುಡುಕಿದರೆ ಸಿಗಲಿಲ್ಲ, ಕಷ್ಟ ಹೇಳಿಕೊಳ್ಳಲು ಬಂದ ಜನತೆಗೆ ತಾಜ್ ವೆಸ್ಟ್ ಎಂಡ್ ಒಳಗೆ ಬಿಡಲಿಲ್ಲ. ಎಲ್ಲಿದ್ದೀರಿ ಎಂದು ಜನ ಕೇಳಿದಾಗ ಉತ್ತರಿಸಲಿಲ್ಲ ಎಂದು ಟೀಕಿಸಿದ್ದಾರೆ.

Exit mobile version