ಡಿಕೆ ವಿರುದ್ದ ಈಶ್ವರಪ್ಪ ; ಈಶ್ವರಪ್ಪ ವಿರುದ್ದ ದಿನೇಶ್ ಗುಂಡೂರಾವ್ ಗರಂ!

assembly

ಕೆಂಪು ಕೋಟೆಯ ಮೇಲೆ ರಾಷ್ಟ್ರಧ್ವಜ ಹಾರಿಸುವ ಕುರಿತಾದ ಈಶ್ವರಪ್ಪನವರ ವಿವಾದಾತ್ಮಕ ಹೇಳಿಕೆಯು ಸಂವಿಧಾನದ ವಿರೋಧಿ ನಡೆಯ ಜೊತೆಗೆ ರಾಷ್ಟ್ರದ್ರೋಹವೂ ಕೂಡ ಹೌದು ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಇಡೀ ದೇಶವನ್ನು ಕೇಸರಿಕರಣಗೊಳಿಸುವ ವ್ಯವಸ್ಥಿತ ಹುನ್ನಾರವೊಂದು ಆರ್ಎಸ್ಎಸ್ ಪಡಸಾಲೆಯಲ್ಲಿ ನಡೆಯುತ್ತಿದೆ. ಈಶ್ವರಪ್ಪ ಆ ಆರ್ಎಸ್ಎಸ್ ಕಾರ್ಯತಂತ್ರವನ್ನು ತಪ್ಪಿ ಬಾಯಿಬಿಟ್ಟಿದ್ದಾರೆ. ಧ್ವಜ ವಿವಾದ ಆರ್ಎಸ್ಎಸ್ ಕಾರ್ಯಸೂಚಿಯ ಒಂದು ಭಾಗ ಎಂದು ಆರೋಪಿಸಿದ್ದಾರೆ.


ನಾಜಿ ಸಂತತಿಯ ಅನ್ಎಡಿಟೆಡ್ ವರ್ಷನ್ ಆಗಿರುವ ಆರ್ಎಸ್ಎಸ್ ಪ್ರಾರಂಭದಿಂದಲೂ ಸಂವಿಧಾನ ವಿರೋಧಿ. ತ್ರಿವರ್ಣ ಧ್ವಜವನ್ನು ಒಪ್ಪಿಕೊಳ್ಳುವ ಮನಃಸ್ಥಿತಿ ಆರ್ಎಸ್ಎಸ್ಗೆ ಆಗಲೂ ಇರಲಿಲ್ಲ, ಈಗಲೂ ಇಲ್ಲ. ತ್ರಿವರ್ಣ ಧ್ವಜದ ಬದಲು ಭಾಗಧ್ವಜವನ್ನು ರಾಷ್ಟ್ರೀಯ ಧ್ವಜವನ್ನಾಗಿ ಮಾಡುವ ಹಿಡನ್ ಅಜೆಂಡಾ ಆರ್ಎಸ್ಎಸ್ನದ್ದು. ಆರ್ಎಸ್ಎಸ್ನ ಈ ಅಜೆಂಡಾವೇ ಈಶ್ವರಪ್ಪ ಬಾಯಿಂದ ಹೊರಬಂದಿದೆಯಷ್ಟೆ. ಬಿಜೆಪಿ ನಾಯಕರಿಗೆ ಸಂವಿಧಾನ ಹಾಗೂ ರಾಷ್ಟ್ರಧ್ವಜದ ಮೇಲೆ ನಿಜವಾದ ಗೌರವವಿದ್ದರೆ ಸಚಿವ ಈಶ್ವರಪ್ಪ ಹೇಳಿಕೆ ಖಂಡಿಸಬೇಕು. ಜೊತೆಗೆ ಅವರನ್ನು ಸಚಿವ ಸ್ಥಾನದಿಂದ ವಜಾ ಮಾಡಬೇಕು. ಇಲ್ಲದೇ ಹೋದರೆ ರಾಷ್ಟ್ರದ್ರೋಹಿ ಈಶ್ವರಪ್ಪ ಮತ್ತು ಅವರ ಬೆಂಬಲಿತ ಬಿಜೆಪಿ ವಿರುದ್ಧ ನಮ್ಮ ಹೋರಾಟ ಉಗ್ರವಾಗಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.


ಡಿಕೆ ವಿರುದ್ದ ಈಶ್ವರಪ್ಪ ಗರಂ : ರಾಷ್ಟ್ರಧ್ವಜ ಇಲ್ಲದೇ ಇರುವುದನ್ನು ಇದೆ ಎಂದು ಹೇಳಿ ಸಮಸ್ಯೆ ಸೃಷ್ಟಿಸಿದವರು ಡಿ.ಕೆ ಶಿವಕುಮಾರ್ ರಾಷ್ಟ್ರ ಧ್ವಜಕ್ಕೆ ಅಪಮಾನ ಮಾಡಿದ ಡಿಕೆಶಿ ರಾಜೀನಾಮೆ ಕೊಡಲಿ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯಿತ್ ಸಚಿವ ಕೆ.ಎಸ್.ಈಶ್ವರಪ್ಪ ಆರೋಪಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿ , ರಾಷ್ಟ್ರದ್ರೋಹ ಯಾರು ಮಾಡಿದ್ದಾರೋ ಅವರು ರಾಜೀನಾಮೆ ಕೊಡಲಿ. ಹೀಗಾಗಿ ಡಿಕೆಶಿಯ ರಾಜೀನಾಮೆ ಕೊಡಲಿ ನಾನು ರಾಷ್ಟ್ರಭಕ್ತ ಎಂದರು.
ತಿರಂಗ ಯಾತ್ರೆ ಮಾಡಿದವನು ನಾನು, ತುರ್ತು ಪರಿಸ್ಥಿತಿ ವೇಳೆ ಜೈಲಿಗೆ ಹೋಗಿ ಬಂದವನು ನಾನು, ಕೆಂಪು ಕೋಟೆಯಲ್ಲಿ ಕೇಸರಿ ಧ್ವಜ 300 ರಿಂದ 500 ವರ್ಷದಲ್ಲಿ ಹಾರಿಸಬಹುದು ಎಂದು ಹೇಳಿದ್ದೀವಿ ಅಷ್ಟೇ ಎಂದು ಹೇಳಿದ್ದಾರೆ. ಕಾಶ್ಮೀರದ ಲಾಲ್ ಚೌಕ್ ನಲ್ಲಿ ಉಗ್ರಗಾಮಿಗಳ ಭಯವಿಲ್ಲದೇ ಮುರಳಿ ಮನೋಹರ ಜೋಷಿ, ನರೇಂದ್ರ ಮೋದಿ ನೇತೃತ್ವದಲ್ಲಿ ರಾಷ್ಟ್ರಧ್ವಜ ಹಾರಿಸಿಬಂದವನು ನಾನು. ರಾಷ್ಟ್ರಭಕ್ತನಾದ ನಾನು ರಾಜೀನಾಮೆ ಕೊಡೋ ಪ್ರಶ್ನೆಯೇ ಇಲ್ಲ. ಇವರು ಲೂಟಿ ಮಾಡಿದ್ದಾರೆ. ಬೇಲ್ ಮೇಲೆ ಇದ್ದಾರೆ, ಅವರೇ ರಾಜೀನಾಮೆ ಕೊಡಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

Exit mobile version