ಮುಸ್ಲಿಮರು ಕೆತ್ತನೆ ಮಾಡಿದ ವಿಗ್ರಹ ಪ್ರತಿಷ್ಠಾಪಿಸದಂತೆ ಅಭಿಯಾನ!

sculpture

ಹಿಜಾಬ್‍ಗಾಗಿ ಹೈಕೋರ್ಟ್ ತೀರ್ಪು ಪ್ರಶ್ನಿಸಿ ಒಂದು ದಿನದ ಬಂದ್ ಆಚರಿಸಿದ ಮುಸ್ಲಿಂ ಸಮುದಾಯಕ್ಕೆ ದಿನಕ್ಕೊಂದು ಸಮಸ್ಯೆ ಎದುರಾಗುತ್ತಿದೆ. ಹಿಜಾಬ್‍ನಿಂದ ಪ್ರಾರಂಭವಾಗಿ ಮಾವಿನ ಹಣ್ಣಿನವರೆಗೂ ಬಂದು ನಿಂತಿದ್ದ ವ್ಯಾಪಾರ ಬಹಿಷ್ಕಾರ, ಇದೀಗ ಮುಸ್ಲಿಂ ವಿಗ್ರಹ ಕೆತ್ತನೆಗಾರರಿಗೂ ತಟ್ಟಿದೆ. ಇದೀಗ ರಾಜ್ಯದಲ್ಲಿ ಮುಸ್ಲಿಮರು ಕೆತ್ತನೆ ಮಾಡಿದ ವಿಗ್ರಹಗಳನ್ನು ಪ್ರತಿಷ್ಠಾಪನೆ ಮಾಡದಂತೆ ಅಭಿಯಾನ ನಡೆಸಲು ಸಿದ್ದತೆ ನಡೆದಿದೆ.

ಹಲಾಲ್ ಪದಾರ್ಥಗಳ ಬಹಿಷ್ಕಾರ, ಜಾತ್ರೆಗಳಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ಬಹಿಷ್ಕಾರ, ಮಾವಿನ ಹಣ್ಣಿನ ವ್ಯಾಪಾರದಲ್ಲಿ ಮುಸ್ಲಿಮರಿಗೆ ಬಹಿಷ್ಕಾರ, ರೇಷ್ಮೆ ಮಾರುಕಟ್ಟೆಯಲ್ಲೂ ಮುಸ್ಲಿಮರಿಗೆ ಬಹಿಷ್ಕಾರ ಸೇರಿದಂತೆ ಸರಣಿ ಬಹಿಷ್ಕಾರಗಳನ್ನು ಮುಸ್ಲಿಂ ವ್ಯಾಪಾರಿ ಸಮುದಾಯ ಎದುರಿಸುತ್ತಿದೆ. ಇದೀಗ ಮುಸ್ಲಿಂ ವಿಗ್ರಹ ಕೆತ್ತನೆಗಾರರು ಕೆತ್ತನೆ ಮಾಡಿದ ವಿಗ್ರಹಗಳನ್ನು ಹಿಂದೂಗಳು ತಮ್ಮ ಮನೆಯಲ್ಲಿ ಅಥವಾ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸದಂತೆ ಮೇಲುಕೋಟೆಯ ಚೆಲುವನಾರಾಯಣಸ್ವಾಮಿ ದೇವಸ್ಥಾನದ ಸ್ಥಾನಿಕ ಶ್ರೀನಿವಾಸನ್ ಕರೆ ನೀಡಿದ್ದಾರೆ.


ಮುಸ್ಲಿಮರು ಹಿಂದೂ ದೇವರುಗಳ ವಿಗ್ರಹ ಕೆತ್ತನೆ ಮಾಡುವುದು ಸರಿಯಲ್ಲ. ಇದಕ್ಕೆ ನಮ್ಮ ಶಾಸ್ತ್ರದಲ್ಲೂ ಅವಕಾಶವಿಲ್ಲ. ನೂರಾರು ವರ್ಷಗಳಿಂದ ನಮ್ಮ ದೇಶದಲ್ಲಿ ಊರಿನ ಯಜಮಾನರ ಮಾರ್ಗದರ್ಶನದಲ್ಲಿ ವಿಗ್ರಹಗಳನ್ನು ಕೆತ್ತನೆ ಮಾಡುತ್ತಿದ್ದರು. ನೂರಾರು ವರ್ಷಗಳಿಂದ ನಮ್ಮ ನೆಲದಲ್ಲಿ ವಿಶ್ವಕರ್ಮ ಜನಾಂಗದವರು ವಿಗ್ರಹಗಳನ್ನು ಶಾಶ್ತ್ರೋಸ್ತ್ರವಾಗಿ ಕೆತ್ತನೆ ಮಾಡುತ್ತಿದ್ದಾರೆ. ಹೀಗಾಗಿ ಹಿಂದೂ ವಿಗ್ರಹಗಳನ್ನು ವಿಶ್ವಕರ್ಮ ಸೇರಿದಂತೆ ಹಿಂದೂ ಕೆತ್ತನೆಗಾರರು ಮಾಡಿದ ವಿಗ್ರಹಗಳನ್ನೇ ನಾವು ಬಳಸಬೇಕೆಂಬ ಅಭಿಯಾನವನ್ನು ರಾಜ್ಯಾದ್ಯಂತ ಮಾಡುತ್ತೇವೆ.

ಇದಕ್ಕಾಗಿ ರಾಜ್ಯಾದ್ಯಂತ ಪ್ರವಾಸ ಮಾಡಿ ಅರ್ಚಕ ಸಮುದಾಯದಲ್ಲಿ ಜಾಗೃತಿ ಮೂಡಿಸುತ್ತೇನೆ ಎಂದರು. ಇನ್ನು ಮುಸ್ಲಿಮರು ಕೆತ್ತನೆ ಮಾಡಿದ ವಿಗ್ರಹ ಬಹಿಷ್ಕಾರಕ್ಕೆ ಪರ-ವಿರೋಧ ಅಭಿಪ್ರಾಯ ವ್ಯಕ್ತವಾಗಿದೆ. “ಅಲ್ಲಾ ಮಾತ್ರ ದೇವರು ಎಂದು ನಂಬುವ ಮುಸ್ಲಿಮರು ಇನ್ನೊಂದು ಧರ್ಮದ ದೇವರನ್ನು ಹೇಗೆ ಕೆತ್ತನೆ ಮಾಡುತ್ತಾರೆ?” ಎಂದು ಸಾಗರ ಎಂಬುವವರು ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನಿಸಿದ್ರೆ,

ನವೀನ್ ಎಂಬುವವರು “ಬಹುದೇವತಾರಾಧನೆಯಲ್ಲಿ ನಂಬಿಕೆ ಇಲ್ಲದವರು ದೇವರ ವಿಗ್ರಹ ಕೆತ್ತನೆ ಮಾಡುವುದು ಸರಿಯಲ್ಲ” ಎಂದಿದ್ದಾರೆ. ಇನ್ನೊಂದೆಡೆ ಶಶಾಂಕ ಎಮ್.ಪಿ ಎಂಬುವವರು “ಕಲಾವಿದರಿಗೂ ತಟ್ಟಿತೇ ಧರ್ಮದ ತಾಪ..!’’ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.

Exit mobile version