ಬೆಂಗಳೂರಿನಲ್ಲಿ ಜೀವಂತ ಮದ್ದು ಗುಂಡು ಪತ್ತೆ

ಬೆಂಗಳೂರು ಡಿ 22 : ಹೋಟೆಲ್‌ ಒಂದರ ಬಳಿ ಜೀವಂತ ಮದ್ದುಗುಂಡು ಸಿಕ್ಕಿದ್ದ ಪರಿಣಾಮ ಸ್ಥಳೀಯರು ಕೆಲ ಕಾಲ ಆತಂಕಗೊಂಡ ಘಟನೆ ನಗರದಲ್ಲಿ ನಡೆದಿದೆ.   ಮಗನ ಸಂಸಾರದಲ್ಲಿ ಕಲಹ ಉಂಟಾಗಲು ಕಾರಣಾವಾಗಿವೆ ಎಂದು ನಂಬಿ ಮನೆಯಲ್ಲಿದ್ದ ಸಜೀವ ಮದ್ದು ಗುಂಡುಗಳನ್ನು ಯಲಹಂಕದ ಖಾಸಗಿ ಹೋಟೆಲ್ ನ ವಾಹನ ನಿಲುಗಡೆ ಸ್ಥಳದಲ್ಲಿ ಏರ್ ಫೋರ್ಸ್ ನಿವೃತ್ತ ಗ್ರೂಪ್ ಕ್ಯಾಪ್ಟನ್ ವೊಬ್ಬರ ಪತ್ನಿ ಹೂತಿಟ್ಟಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಹೌಸ್ ಕೀಪಿಂಗ್ ಕೆಲಸ ಮಾಡುವ ಫಯಾಝ್ ಅಹ್ಮದ್ ಕಳೆದ ಡಿ. 17 ರಂದು ಮಧ್ಯಾಹ್ನ ಜಕ್ಕೂರು ವಾಯುನೆಲೆ ಬಳಿಯ ಖಾಸಗಿ ಹೋಟೆಲ್ ಸ್ವಚ್ಛಗೊಳಿಸಬೇಕಾದರೆ ಹೂತಿಟ್ಟಿದ್ದ ಮದ್ದುಗುಂಡು ಸಿಕ್ಕಿದ್ದು,ಅದನ್ನು ಮಾಲೀಕರಿಗೆ ತಿಳಿಸಿದ್ದರು.

ಇದನ್ನು ಗಂಭೀರವಾಗಿ ಪರಿಗಣಿಸಿದ ಮಾಲೀಕ ಶ್ರೀನಿವಾಸ್ ಪೊಲೀಸರಿಗೆ ಮಾಹಿತಿ ನೀಡಿದ್ದು ಸ್ಥಳಕ್ಕೆ ಬಂದ ಪೊಲೀಸರು ತಪಾಸಣೆ ನಡೆಸಿ ಪರಿಶೀಲಿಸಿದಾಗ ಸಿಂಗಲ್ ಬ್ಯಾರಲ್ ಗನ್ನೆ ಬಳಸುವ ಮದ್ದುಗುಂಡು ಎಂಬುದನ್ನು ಪತ್ತೆ ಹಚ್ಚಿದ್ದಾರೆ. ಅನುಮಾನಾಸ್ಪದವಾಗಿ ಗುಂಡು ದೊರೆತಿರುವ ಬಗ್ಗೆ ಬಾಂಬ್ ನಿಷ್ಕ್ರಿಯ ತಂಡ ಹಾಗೂ ಶ್ವಾನದಳ ಬಂದು ತಪಾಸಣೆ ನಡೆಸಿದಾಗ ಮತ್ತೊಂದು ಗುಂಡು ಪತ್ತೆಯಾಗಿತ್ತು ಎಂದು ಡಿಸಿಪಿ ಸಿಕೆ ಬಾಬಾ ತಿಳಿಸಿದ್ದಾರೆ.

ಗುಂಡುಗಳನ್ನು ಹೂತಿಟ್ಟ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು, ಹೋಟೆಲ್ ಬಳಿ ಮಹಿಳೆ ಕಾರಿನಲ್ಲಿ ಬಂದಿರುವ ಬಗ್ಗೆ ಮಾಹಿತಿ ಪಡೆದು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದಾರೆ. ಕಾರಿನ ನೋಂದಣಿ ಸಂಖ್ಯೆ ಮೂಲಕ ಜಾಡು ಹಿಡಿದು ಹೊರಟ ಪೊಲೀಸರಿಗೆ ಮಹಿಳೆಯ ಮನೆ ಯಲಹಂಕದಲ್ಲಿರುವುದು ಗೊತ್ತಾಗಿದೆ. ಅಲ್ಲಿಗೆ ಹೋದಾಗ ಮನೆ ಖಾಲಿ ಮಾಡಿರುವುದು ಕಂಡುಬಂದಿದ್ದು ಸಿಡಿಆರ್ ಹಾಗೂ ಮೊಬೈಲ್ ನೆಟ್ ವರ್ಕ್ ಮೂಲಕ ಶೋಧಿಸಿದಾಗ ಆಕೆ ಕೊಡಿಗೆಹಳ್ಳಿಯಲ್ಲಿ ವಾಸ್ತವ್ಯ ಹೂಡಿರುವುದು ತಿಳಿದುಬಂದಿದೆ. ಅಲ್ಲಿಗೆ ತೆರಳಿ ವಿಚಾರಣೆ ನಡೆಸಿದಾಗ ಸತ್ಯ ಅನಾವರಣಗೊಂಡಿದೆ.

ಭಾರತೀಯ ವಾಯುನೆಲೆಯಲ್ಲಿ ಕೆಲಸ ಮಾಡಿ ನಿವೃತ್ತಿಯಾಗಿರುವ ಗ್ರೂಪ್ ಕ್ಯಾಪ್ಟನ್ ವೊಬ್ಬರು ಕೆಲ ವರ್ಷಗಳ ಹಿಂದೆ ಮದ್ದು ಗುಂಡು ಸಮೇತ ರೈಫಲ್ ಖರೀದಿಸಿದ್ದರು. ಕಳೆದ ವರ್ಷ ಕಾನೂನು ಪ್ರಕಾರವಾಗಿ ಅನ್ಯ ವ್ಯಕ್ತಿಯೊಬ್ಬರಿಗೆ ಗನ್ ಮಾರಾಟ ಮಾಡಿದ್ದರು. ಆದರೆ 15 ಗುಂಡುಗಳನ್ನು ಮಾತ್ರ ಮಾರಾಟ ಮಾಡದೆ ಮನೆಯಲ್ಲಿ ಉಳಿಸಿಕೊಂಡಿದ್ದರು. ಮತ್ತೊಂದೆಡೆ, ಸಾಫ್ಟ್ ವೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಪುತ್ರ ಕೌಟುಂಬಿಕ ಕಲಹದಿಂದ ಬೇಸತ್ತಿದ್ದು ಅಂದುಕೊಂಡ ಕೆಲಸಗಳು ಆಗುತ್ತಿಲ್ಲ ಎಂದು ನೊಂದಿರುವುದನ್ನು ಕಂಡು ತಾಯಿ ದುಃಖಿತರಾಗಿದ್ದಳು.

ಮನೆಯಲ್ಲಿ ಮದ್ದುಗುಂಡುಗಳು ಇರುವುದರಿಂದಲೇ ಮಗನ ಜೀವನ ಹೀಗಾಗಿದೆ. ಜೀವಂತ ಗುಂಡುಗಳನ್ನು ಮನೆಯಿಂದ ಹೊರ ಸಾಗಿಸಿದರೆ ಮಗನಿಗೆ ಒಳ್ಳೆಯದಾಗಲಿದೆ ಎಂದು ಭಾವಿಸಿ ಮನೆಯಲ್ಲಿದ್ದ 15 ಗುಂಡುಗಳ ಪೈಕಿ ಎರಡು ಗುಂಡುಗಳನ್ನು ಖಾಸಗಿ ಹೋಟೆಲ್ ಕಾರ್ ಪಾರ್ಕಿಂಗ್ ಲಾಟ್ನಲ್ಲಿ ಹೂತಿಟ್ಟಿರುವುದಾಗಿ ಪೊಲೀಸರ ಮುಂದೆ ಮಹಿಳೆ ಹೇಳಿಕೆ ನೀಡಿದ್ದಾರೆ. ಈ ಬಗ್ಗೆ ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.

Exit mobile version