ಢಾಕಾ, ಮಾ. 16: ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಂದು ಬಾಂಗ್ಲಾದೇಶದ ಸುದ್ದಿಮಾಧ್ಯಮದ ಕ್ಷೇತ್ರದಲ್ಲಿ ಒಂದು ಮಹತ್ವದ ಬೆಳವಣಿಗೆಯಾಗಿದ್ದು, ಆ ದೇಶದ ಮೊದಲ ತೃತೀಯಲಿಂಗಿ ಸುದ್ದಿ ನಿರೂಪಕಿಯಾಗಿ ತಶ್ನುವಾ ಅನನ್ ಶಿಶಿರ್ ಅವರು ವೃತ್ತಿ ಜೀವನ ಪ್ರಾರಂಭಿಸಿದ್ದಾರೆ. ಮಾರ್ಚ್ 8ರಂದು ಖಾಸಗಿ ಚಾನೆಲ್ವೊಂದರಲ್ಲಿ ತಮ್ಮ ಮೊದಲ ನ್ಯೂಸ್ ಬುಲೆಟಿನ್ನ್ನು ಪ್ರಸ್ತುತ ಪಡಿಸಿದ್ದು, ಅವರ ಸಂತೋಷದಲ್ಲಿ ಇದೀಗ ಇಡೀ ಜಗತ್ತು ಪಾಲ್ಗೊಂಡಿದೆ.
೨೯ ವರ್ಷದ ತಶ್ನುವಾ ಬಾಂಗ್ಲಾ ಸುದ್ದಿವಾಹಿನಿ ಬೋಯಿಶಾಖಿಯಲ್ಲಿ ಮಾರ್ಚ್ 8ರಂದು ಸಂಜೆ 4 ಗಂಟೆಗೆ ತಶ್ನುವಾ ತಮ್ಮ ಮೊದಲ ಸುದ್ದಿ ಓದಿದ್ದಾರೆ. ಆನ್ ಏರ್ನಲ್ಲಿ ಮಾತನಾಡುತ್ತ, ಇದೊಂದು ಕ್ರಾಂತಿಕಾರಿ ಬೆಳವಣಿಗೆಯಾಗಿ ಜನರ ಯೋಚನೆಗಳಿಗೆ ಒಂದು ಹೊಸ ಆಯಾಮವನ್ನೇ ನೀಡಬಹುದು ಎಂದು ಹೇಳಿದ್ದಾರೆ.
ಶಿಶಿರ್ ಅವರ ಸುದ್ದಿ ನಿರೂಪಕಿಯಾಗುವ ಆಸೆಗೆ ನೀರೆರೆದಿದ್ದು ಬೋಯಿಶಾಖಿ ನ್ಯೂಸ್ ಚಾನಲ್. ಈ ಮೀಡಿಯಾ ಸಂಸ್ಥೆಯಲ್ಲೇ ಹಲವು ವಾರಗಳಿಂದ ತರಬೇತಿ ಪಡೆಯುತ್ತಿದ್ದ ಶಿಶಿರ್ ಇತ್ತೀಚೆಗೆ ಕೆಲಸಕ್ಕೆ ಆಯ್ಕೆಯಾಗಿದ್ದಾರೆ. ಮೊದಲದಿನದ ನ್ಯೂಸ್ ಬುಲೆಟಿನ್ ಮುಗಿದ ನಂತರ, ಮಾತನಾಡಿದ ಬೋಯಿಶಾಖಿ ಸುದ್ದಿವಾಹಿನಿಯ ಚೀಫ್ ಎಡಿಟರ್ ಟಿಪು ಅಲಾಂ, ಖಂಡಿತ ಇದನ್ನು ಜನರು ಒಪ್ಪಿಕೊಳ್ಳುತ್ತಾರೆಂಬ ಭರವಸೆ ಇದೆ. ಹಾಗೇ, ತೃತೀಯಲಿಂಗಿ ಸಮುದಾಯವನ್ನು ಜನರು ನೋಡುವ ದೃಷ್ಟಿಕೋನ ಬದಲಾಗಲಿದೆ ಎಂಬ ಆಶಯವೂ ಇದೆ ಎಂದು ಹೇಳಿದ್ದಾರೆ.
ಶಿಶಿರ್ ನಡೆದು ಬಂದ ದಾರಿ ತುಂಬ ಕಷ್ಟದ್ದಾಗಿತ್ತು. ಬಾಲ್ಯದಿಂದಲೂ ಲೈಂಗಿಕ ದೌರ್ಜನ್ಯ, ಶೋಷಣೆ, ಹಿಂಸೆಯನ್ನು ಅನುಭವಿಸುತ್ತಲೇ ಬಂದರು. 16ನೇ ವಯಸ್ಸಿಗೆ ಮನೆಯನ್ನು ಬಿಟ್ಟರು. ಆದರೆ ಧೈರ್ಯದಿಂದ ವಿದ್ಯಾಭ್ಯಾಸ ಮುಂದುವರಿಸಿದರು. ಇತ್ತೀಚೆಗಷ್ಟೇ ಬಾಂಗ್ಲಾದೇಶದ ಉನ್ನತ ವಿಶ್ವವಿದ್ಯಾಲಯವೊಂದರಲ್ಲಿ ಪಬ್ಲಿಕ್ ಹೆಲ್ತ್ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆಯಲು ಸ್ಕಾಲರ್ಶಿಪ್ ಕೂಡ ಪಡೆದಿದ್ದಾರೆ. ಕಷ್ಟಗಳೆನ್ನೆಲ್ಲ ಮೆಟ್ಟಿನಿಂತು ಮಾಡೆಲಿಂಗ್ ಕ್ಷೇತ್ರದಲ್ಲಿ ತೊಡಗಿಕೊಂಡಿದ್ದರು. ಈಗಾಗಲೇ ಎರಡು ಸಿನಿಮಾಗಳಲ್ಲಿ ನಟಿಸಲು ಸಹಿ ಮಾಡಿದ್ದು, ಶೀಘ್ರವೇ ಬಾಂಗ್ಲಾದೇಶ ಅವರನ್ನು ತೆರೆಯ ಮೇಲೆ ನೋಡಲಿದೆ.