ಮಹಿಳಾ ದಿನಾಚರಣೆಯಂದು ವೃತ್ತಿ ಆರಂಭಿಸಿದ ಬಾಂಗ್ಲಾದೇಶದ ಮೊದಲ ಮಂಗಳಮುಖಿ ಸುದ್ದಿ ನಿರೂಪಕಿ

ಢಾಕಾ, ಮಾ. 16: ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಂದು ಬಾಂಗ್ಲಾದೇಶದ ಸುದ್ದಿಮಾಧ್ಯಮದ ಕ್ಷೇತ್ರದಲ್ಲಿ ಒಂದು ಮಹತ್ವದ ಬೆಳವಣಿಗೆಯಾಗಿದ್ದು, ಆ ದೇಶದ ಮೊದಲ ತೃತೀಯಲಿಂಗಿ ಸುದ್ದಿ ನಿರೂಪಕಿಯಾಗಿ ತಶ್ನುವಾ ಅನನ್ ಶಿಶಿರ್ ಅವರು ವೃತ್ತಿ ಜೀವನ ಪ್ರಾರಂಭಿಸಿದ್ದಾರೆ. ಮಾರ್ಚ್​ 8ರಂದು ಖಾಸಗಿ ಚಾನೆಲ್​ವೊಂದರಲ್ಲಿ ತಮ್ಮ ಮೊದಲ ನ್ಯೂಸ್​ ಬುಲೆಟಿನ್​ನ್ನು ಪ್ರಸ್ತುತ ಪಡಿಸಿದ್ದು, ಅವರ ಸಂತೋಷದಲ್ಲಿ ಇದೀಗ ಇಡೀ ಜಗತ್ತು ಪಾಲ್ಗೊಂಡಿದೆ.

೨೯ ವರ್ಷದ ತಶ್ನುವಾ ಬಾಂಗ್ಲಾ ಸುದ್ದಿವಾಹಿನಿ ಬೋಯಿಶಾಖಿಯಲ್ಲಿ ಮಾರ್ಚ್​ 8ರಂದು ಸಂಜೆ 4 ಗಂಟೆಗೆ ತಶ್ನುವಾ ತಮ್ಮ ಮೊದಲ ಸುದ್ದಿ ಓದಿದ್ದಾರೆ. ಆನ್​ ಏರ್​​ನಲ್ಲಿ ಮಾತನಾಡುತ್ತ, ಇದೊಂದು ಕ್ರಾಂತಿಕಾರಿ ಬೆಳವಣಿಗೆಯಾಗಿ ಜನರ ಯೋಚನೆಗಳಿಗೆ ಒಂದು ಹೊಸ ಆಯಾಮವನ್ನೇ ನೀಡಬಹುದು ಎಂದು ಹೇಳಿದ್ದಾರೆ.

ಶಿಶಿರ್​ ಅವರ ಸುದ್ದಿ ನಿರೂಪಕಿಯಾಗುವ ಆಸೆಗೆ ನೀರೆರೆದಿದ್ದು ಬೋಯಿಶಾಖಿ ನ್ಯೂಸ್​ ಚಾನಲ್. ಈ ಮೀಡಿಯಾ ಸಂಸ್ಥೆಯಲ್ಲೇ ಹಲವು ವಾರಗಳಿಂದ ತರಬೇತಿ ಪಡೆಯುತ್ತಿದ್ದ ಶಿಶಿರ್​ ಇತ್ತೀಚೆಗೆ ಕೆಲಸಕ್ಕೆ ಆಯ್ಕೆಯಾಗಿದ್ದಾರೆ. ಮೊದಲದಿನದ ನ್ಯೂಸ್​ ಬುಲೆಟಿನ್ ಮುಗಿದ ನಂತರ, ಮಾತನಾಡಿದ ಬೋಯಿಶಾಖಿ ಸುದ್ದಿವಾಹಿನಿಯ ಚೀಫ್​ ಎಡಿಟರ್ ಟಿಪು ಅಲಾಂ, ಖಂಡಿತ ಇದನ್ನು ಜನರು ಒಪ್ಪಿಕೊಳ್ಳುತ್ತಾರೆಂಬ ಭರವಸೆ ಇದೆ. ಹಾಗೇ, ತೃತೀಯಲಿಂಗಿ ಸಮುದಾಯವನ್ನು ಜನರು ನೋಡುವ ದೃಷ್ಟಿಕೋನ ಬದಲಾಗಲಿದೆ ಎಂಬ ಆಶಯವೂ ಇದೆ ಎಂದು ಹೇಳಿದ್ದಾರೆ.

ಶಿಶಿರ್​ ನಡೆದು ಬಂದ ದಾರಿ ತುಂಬ ಕಷ್ಟದ್ದಾಗಿತ್ತು. ಬಾಲ್ಯದಿಂದಲೂ ಲೈಂಗಿಕ ದೌರ್ಜನ್ಯ, ಶೋಷಣೆ, ಹಿಂಸೆಯನ್ನು ಅನುಭವಿಸುತ್ತಲೇ ಬಂದರು. 16ನೇ ವಯಸ್ಸಿಗೆ ಮನೆಯನ್ನು ಬಿಟ್ಟರು. ಆದರೆ ಧೈರ್ಯದಿಂದ ವಿದ್ಯಾಭ್ಯಾಸ ಮುಂದುವರಿಸಿದರು. ಇತ್ತೀಚೆಗಷ್ಟೇ ಬಾಂಗ್ಲಾದೇಶದ ಉನ್ನತ ವಿಶ್ವವಿದ್ಯಾಲಯವೊಂದರಲ್ಲಿ ಪಬ್ಲಿಕ್ ಹೆಲ್ತ್​ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆಯಲು ಸ್ಕಾಲರ್​ಶಿಪ್​ ಕೂಡ ಪಡೆದಿದ್ದಾರೆ. ಕಷ್ಟಗಳೆನ್ನೆಲ್ಲ ಮೆಟ್ಟಿನಿಂತು ಮಾಡೆಲಿಂಗ್ ಕ್ಷೇತ್ರದಲ್ಲಿ ತೊಡಗಿಕೊಂಡಿದ್ದರು. ಈಗಾಗಲೇ ಎರಡು ಸಿನಿಮಾಗಳಲ್ಲಿ ನಟಿಸಲು ಸಹಿ ಮಾಡಿದ್ದು, ಶೀಘ್ರವೇ ಬಾಂಗ್ಲಾದೇಶ ಅವರನ್ನು ತೆರೆಯ ಮೇಲೆ ನೋಡಲಿದೆ.

Exit mobile version