ದೇಶದ ಎಲ್ಲಾ ನಾಗರೀಕರು ಬ್ಯಾಂಕ್ ಖಾತೆ ಹೊಂದಿರಲೇ ಬೇಕು. ಆಗ ಮಾತ್ರ ಸರ್ಕಾರದ ಯೋಜನೆಗಳು ಜನರಿಗೆ ತಲುಪುತ್ತೆ: ನಿರ್ಮಲಾ ಸೀತಾರಾಮನ್

ಸರ್ಕಾರದ ಯೋಜನೆಗಳು ಜನರನ್ನು ತಲುಪಲು ಬ್ಯಾಂಕ್​ಗಳು ಡಿಜಿಟಲ್ ವ್ಯವಸ್ಥೆ ಬಳಸಿಕೊಳ್ಳಬೇಕು. ಹಾಗಾಗಿ ದೇಶದ ಎಲ್ಲ ನಾಗರಿಕರು ಬ್ಯಾಂಕ್ ಖಾತೆ ಹೊಂದಿರಬೇಕು. ರುಪೇ ಕಾರ್ಡ್​ಗಳ ಮೂಲಕ ಸುಲಭದಲ್ಲಿ ವಹಿವಾಟು ನಡೆಸಲು ಎಲ್ಲರಿಗೂ ಸಾಧ್ಯವಾಗಬೇಕು ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದರು.

ಟ್ಯುಟಿಕೊರಿನ್: ಖಾಸಗಿ ವಲಯದಲ್ಲಿರುವ ಬ್ಯಾಂಕ್​ಗಳೂ ಸೇರಿದಂತೆ ಎಲ್ಲಾ ಬ್ಯಾಂಕ್​ಗಳೂ ಡಿಜಿಟಲ್ ಅವಕಾಶಗಳನ್ನು ಸಮರ್ಥವಾಗಿ ಬಳಸಿಕೊಳ್ಳುವ ಮೂಲಕ ಸರ್ಕಾರದ ಯೋಜನೆಗಳನ್ನು ಬಡವರು ಮತ್ತು ತಳವರ್ಗದ ಜನರಿಗೆ ಸುಲಭವಾಗಿ ತಲುಪಿಸಬೇಕು. ಆರ್ಥಿಕವಾಗಿ ಎಲ್ಲರನ್ನೂ ಒಳಗೊಳ್ಳುವ ಕಾರ್ಯಕ್ರಮದ ವ್ಯಾಪ್ತಿಯನ್ನು ವಿಸ್ತರಿಸಬೇಕು ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸಲಹೆ ಮಾಡಿದರು.

ಬ್ಯಾಂಕಿಂಗ್ ವಲಯದ ಡಿಜಿಟಲ್ ಸಾಧ್ಯತೆಗಳು ಕೊವಿಡ್ ಸಮಯದಲ್ಲಿ ಉಪಯುಕ್ತ ಎನಿಸಿದವು. ಅಗತ್ಯ ಇರುವವರಿಗೆ ನೆರವು ನೀಡಲೆಂದು ಸರ್ಕಾರ ಘೋಷಿಸುತ್ತಿದ್ದ ಆರ್ಥಿಕ ಪರಿಹಾರ ನಿಧಿಯನ್ನು ವಿತರಿಸಲು ಡಿಜಿಟಲ್ ಸಾಧನಗಳು ಸಹಾಯಕ್ಕೆ ಬಂದವು. ಫಲಾನುಭವಿಗಳ ಪೂರ್ವಾಪರ ಪರಿಶೀಲನೆಗೂ ಡಿಜಿಟಲ್ ಸಾಧನಗಳು ನೆರವಾದವು ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ತಮಿಳ್​ನಾಡು ಮರ್ಕಂಟೈಲ್ ಬ್ಯಾಂಕ್​ನ ಶತಮಾನೋತ್ಸವ ಸಮಾರಂಭದಲ್ಲಿ ಮಾತನಾಡುತ್ತಾ ತಿಳಿಸಿದ್ರು.

ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬ್ಯಾಂಕಿಂಗ್ ವ್ಯವಸ್ಥೆಯ ಪ್ರಾಮುಖ್ಯತೆ ಅರಿವು ಚೆನ್ನಾಗಿದೆ. ಹೀಗಾಗಿಯೇ ಜನ್​ಧನ್ ಯೋಜನೆಯಡಿ ತೆರೆದ ಅಕೌಂಟ್​ಗಳಲ್ಲಿ ಶೂನ್ಯ ಠೇವಣಿಯಿದ್ದರೂ ಖಾತೆಗಳನ್ನು ಚಾಲ್ತಿಯಲ್ಲಿಡಬೇಕು ಎಂದು ಸಲಹೆ ಮಾಡಿದ್ದಾರೆ. ದೇಶದ ಎಲ್ಲ ನಾಗರಿಕರು ಬ್ಯಾಂಕ್ ಖಾತೆ ಹೊಂದಿರಬೇಕು. ರುಪೇ ಕಾರ್ಡ್​ಗಳ ಮೂಲಕ ಸುಲಭದಲ್ಲಿ ವಹಿವಾಟು ನಡೆಸಲು ಎಲ್ಲರಿಗೂ ಸಾಧ್ಯವಾಗಬೇಕು ಎಂದು ಅವರು ತಿಳಿಸಿದರು.

Exit mobile version