Bengaluru: ರಾಜ್ಯ ರಾಜಧಾನಿಯಲ್ಲಿ ಬಿಸಿಲಿನ ಬೇಗೆ ದಿನದಿಂದ ದಿನಕ್ಕೆ ಹೆಚ್ಚಾಗಿದೆ. ಒಂದೆಡೆ ಜನ ನೀರಿನ ಸಮಸ್ಯೆಯಿಂದ ಕಂಗೆಟ್ಟಿದ್ದರೆ ಮತ್ತೊಂದೆಡೆ ಲಗ್ಗು ಲಗಾಮಿಲ್ಲದೆ ಹರಡುತ್ತಿರುವ ಸಾಂಕ್ರಾಮಿಕ ರೋಗದಿಂದ ಬೆಂಗಳೂರಿನ (Bengaluru) ಜನ ಹೈರಾಣಾಗುತ್ತಿದ್ದಾರೆ. ಬಿರು ಬಿಸಿಲಿನ ಝಳ ಕ್ಕೆ ಎಲ್ಲೆಡೆ ಕಾಲರಾ ಹರಡುತ್ತಿದ್ದು ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಬಿಬಿಎಂಪಿ (BBMP) ಮಾರ್ಗಸೂಚಿ ಪ್ರಕಟಿಸಿದೆ.

ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಕಾಲರಾ ಪ್ರಕರಣಗಳು ಹೆಚ್ಚುತ್ತಿದೆ. ಈವರೆಗೆ ಕಾಲರಾದಿಂದ ಬಳಲುತ್ತಿರುವ 14 ಪ್ರಕರಣಗಳು ದಾಖಲಾಗಿದ್ದು, ವಾಂತಿ-ಭೇದಿ, ನಿರ್ಜಲೀಕರಣ, ಅತಿಸಾರದ ಲಕ್ಷಣಗಳು ಕಾಣಿಸಿಕೊಂಡಿದೆ. ಈಗಾಗಲೇ ಬಿಬಿಎಂಪಿ ವ್ಯಾಪ್ತಿಯಲ್ಲಿ 8 ಕಾಲರಾ ಪ್ರಕರಣಗಳು ದಾಖಲಾಗಿವೆ. ಕಾಲರಾ ಒಂದು ಸಾಂಕ್ರಾಮಿಕ ರೋಗವಾಗಿದ್ದು ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿದ್ದಲ್ಲಿ ಈ ಖಾಯಿಲೆಯನ್ನು ತಡೆಗಟ್ಟಬಹುದಾಗಿದೆ.
ಒಂದು ವೇಳೆ ವಾಂತಿ, ಭೇದಿ ಲಕ್ಷಣಗಳು ಕಂಡುಬಂದಲ್ಲಿ ತಕ್ಷಣವೇ ಹತ್ತಿರದ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಂಪರ್ಕಿಸಿ ಎಂದು ಬಿಬಿಎಂಪಿ ಸೂಚನೆ ನೀಡಿದೆ. ನೀರನ್ನು ಬಳಸುವಾಗ ಜಾಗೃತೆ ವಹಿಸಬೇಕು. ಕೊಳಕು ಕಲುಷಿತ ನೀರು ಸೇವನೆ ಮಾಡದಿರುವುದು. ಕುದಿಸಿ, ಆರಿಸಿದ ನೀರನ್ನು ಕುಡಿಯುವುದು. ಸಾರ್ವಜನಿಕ ನೀರಿನ ಕೊಳಾಯಿ ಮತ್ತು ಸ್ಥಳವನ್ನು ಸ್ವಚ್ಛವಾಗಿಡುವುದು ಮತ್ತು ಕಂಡ ಕಂಡಲ್ಲಿ ನೀರು ಸೇವಿಸದಿರುವುದು.

ಬೀದಿ ಬದಿಯ ನೀರು ಆಹಾರವನ್ನು ಕಡಿಮೆ ಮಾಡುವುದು. ಪಾನಿಪುರಿ, ಕಪ್ ಐಸ್ (Panipuri, Cup Ice) ನಂತಹ ತಳ್ಳು ಗಾಡಿಯಲ್ಲಿ ಬರುವ ಆಹಾರ ಪದಾರ್ಥಗಳನ್ನು ಸೇವಿಸದೆ ಇರುವುದು. ಕಸ ಮತ್ತು ಇತರೆ ತ್ಯಾಜ್ಯ ವಸ್ತುಗಳನ್ನು ರಸ್ತೆಬದಿ, ಪಾದಚಾರಿ ರಸ್ತೆ ಮೋರಿಯಲ್ಲಿ ಹಾಕಬಾರದು. ಹಾಕಿದಲ್ಲಿ ಕ್ರೀಮಿಕೀಟಗಳು ಆಕರ್ಷಿಸಿ ಕರುಳು ಬೇನೆ/ಕಾಲರ ಬರುವ ಸಂಭವವಿರುತ್ತದೆ. ಹಾಗಾಗಿ ಕಸದ ತೊಟ್ಟಿಯಲ್ಲಿ ವಿಂಗಡಿಸಿ ಹಾಕಬೇಕು ಎಂದು ಬಿಬಿಎಂಪಿ ತಿಳಿಸಿದೆ.