ಈದ್ಗಾ ಮೈದಾನ ಬಿಬಿಎಂಪಿ ಆಸ್ತಿ : ಆಯುಕ್ತರಿಂದ ಸ್ಪಷ್ಟನೆ!

ಬೆಂಗಳೂರಿನ(Bengaluru) ಚಾಮರಾಜಪೇಟೆಯಲ್ಲಿರುವ(Chamrajpete) ಈದ್ಗಾ ಮೈದಾನವೂ(Edga Ground) ಆಟದ ಮೈದಾನವಾಗಿದ್ದು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ(BBMP) ಆಸ್ತಿಯಾಗಿದೆ ಎಂದು ಬಿಬಿಎಂಪಿ ವಿಶೇಷ ಆಯುಕ್ತ ಹರೀಶ್ ಕುಮಾರ್ ಹೇಳಿದ್ದಾರೆ.


ಮಾದ್ಯಮಗಳೊಂದಿಗೆ ಮಾತನಾಡಿದ ಅವರು, ಬಿಬಿಎಂಪಿ ಆಸ್ತಿಯಾಗಿರುವ ಈದ್ಗಾ ಮೈದಾನದಲ್ಲಿ ಮುಸ್ಲಿಂ ಸಮುದಾಯ(Muslim Community) ಪ್ರಾರ್ಥನೆ ಮಾಡಲು, ನ್ಯಾಯಾಲಯದ ಆದೇಶದಂತೆ ವರ್ಷಕ್ಕೆ ಎರಡು ಬಾರಿ ಅವಕಾಶ ನೀಡುತ್ತೇವೆ. ನ್ಯಾಯಾಲಯ ನೀಡಿರುವ ಎರಡು ಅವಕಾಶಗಳನ್ನು ಬಿಟ್ಟು, ಬೇರೆ ಚಟುವಟಿಕೆ ನಡೆಸಲು ಅವಕಾಶ ಕೇಳಿದರೆ ಸಾಮಾನ್ಯವಾಗಿ ಕೊಡಲಾಗುತ್ತದೆ. ಆದರೆ ಅಲ್ಲಿ ನಡೆಯುವ ಚಟುವಟಿಕೆಯಿಂದ ಕೋಮುಸೌಹಾರ್ದತೆಗೆ ಧಕ್ಕೆಯಾಗುವ ಅಥವಾ ಶಾಂತಿ-ಸುವ್ಯವಸ್ಥೆಗೆ ತೊಂದರೆಯಾದರೆ ಪೊಲೀಸರ ಮೋರೆ ಹೋಗುತ್ತೇವೆ ಎಂದು ತಿಳಿಸಿದರು.

ಈದ್ಗಾ ಮೈದಾನ ಬಿಬಿಎಂಪಿ ಆಸ್ತಿಯಾಗಿದ್ದು, ಹಿಂದೂಗಳಿಗೂ ಇಲ್ಲಿ ಇತರೆ ಕಾರ್ಯಕ್ರಮಗಳನ್ನು ನಡೆಸಲು ಅನುಮತಿ ನೀಡಬೇಕು. ಈ ಮೈದಾನ ಮುಸ್ಲಿಂ ಸಮುದಾಯಕ್ಕೆ ಮಾತ್ರ ಸೀಮಿತವಾಗಿಲ್ಲ ಎಂದು ‘ವಂದೇ ಮಾತರಂ’ ಸಂಘಟನೆಯ ರಾಜ್ಯಾಧ್ಯಕ್ಷ ಶಿವಕುಮಾರ್ ನಾಯ್ಕ ಮತ್ತು ಅವರ ಬೆಂಬಲಿಗರು ಈದ್ಗಾ ಮೈದಾನದಲ್ಲಿ ಧರಣಿ ನಡೆಸಿದ್ದರು. ಈ ಧರಣಿಯಲ್ಲಿ ಸ್ಥಳೀಯರು ಕೂಡಾ ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದ ಕಾರಣ, ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದರು.

ಇದಕ್ಕೂ ಮುನ್ನ ‘ಸನಾತನ ಹಿಂದೂ ಪರಿಷತ್’ ಕೂಡಾ ಬಿಬಿಎಂಪಿ ವಿರುದ್ದ ಆಕ್ರೋಶ ವ್ಯಕ್ತಪಡಿಸಿತ್ತು. ನಮಗೂ ಕೂಡಾ ಚಾಮರಾಜಪೇಟೆಯ ಈದ್ಗಾ ಮೈದಾನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲು ಮತ್ತು ರಾಷ್ಟ್ರೀಯ ದಿನಾಚರಣೆ ದಿನ ರಾಷ್ಟ್ರಧ್ವಜ ಹಾರಿಸಲು ಅನುಮತಿ ನೀಡಬೇಕು ಎಂದು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದರು. ಇನ್ನು ಬಿಬಿಎಂಪಿ ಆಸ್ತಿಯನ್ನು ಕೇವಲ ಒಂದು ಸಮುದಾಯಕ್ಕೆ ಮಾತ್ರ ಬಳಸಲು ಅನುಮತಿ ನೀಡುವುದು ತಾರತಮ್ಯವಾಗುತ್ತದೆ.

ಎಲ್ಲ ಸಮುದಾಯಗಳಿಗೂ ಸಮಾನ ಅವಕಾಶ ನೀಡಬೇಕು ಎಂದು ಕನ್ನಡಪರ ಸಂಘಟನೆಗಳು ಕೂಡಾ ಆಗ್ರಹಿಸಿವೆ.

Exit mobile version