Benefits of Sweet Potato: ಆರೋಗ್ಯಕ್ಕೆ ಸಿಹಿ ಗೆಣಸು (Sweet Potato) ಒಂದು ಔಷಧವೇ ಸರಿ. ಇದರ ಆರೋಗ್ಯ ಪ್ರಯೋಜನಗಳು ನಿಮಗೆ ತಿಳಿದರೆ ಕೇವಲ ಸಂಕ್ರಾಂತಿ ಹಬ್ಬದಲ್ಲಿ ಮಾತ್ರವಲ್ಲ, ಆಗಾಗ ತೆಗೆದುಕೊಂಡು ತಿನ್ನುತ್ತೀರಿ. ಮಾರುಕಟ್ಟೆಯಲ್ಲಿ ಯಾವಾಗಲೂ ಸಿಗುವ ಸಿಹಿ ಗೆಣಸು ಒಂದು ತರಹ ಆರೋಗ್ಯಕ್ಕೆ ಧನ್ವಂತರಿ ಎಂದು ಹೇಳಬಹುದು. ಏಕೆಂದರೆ ಇದರಲ್ಲಿ ಅಂತಹ ಆರೋಗ್ಯಕರ (Health) ಗುಣಗಳು ಅಡಗಿವೆ. ಬಹುತೇಕ ಎಲ್ಲಾ ಆಯಾಮಗಳಲ್ಲೂ ಇದು ಜನರ ಆರೋಗ್ಯವನ್ನು ಅಚ್ಚುಕಟ್ಟಾಗಿ ಕಾಪಾಡುವ ಸಾಮರ್ಥ್ಯ ಪಡೆದಿದೆ.

ಹಲವಾರು ಕಾಯಿಲೆಗಳಿಗೆ ರಾಮಬಾಣ ಎನ್ನುವುದರಿಂದ ಆಯುರ್ವೇದ (Ayurveda) ಪದ್ಧತಿಯಲ್ಲೂ ಸಹ ಇದರ ಬಗ್ಗೆ ಮಾತನಾಡುತ್ತಾರೆ. ಯಾರು ಆಗಾಗ ಸಿಹಿ ಗೆಣಸು ತಿನ್ನುವ ಅಭ್ಯಾಸ ಇಟ್ಟುಕೊಂಡಿರುತ್ತಾರೆ ಅಂತಹವರಿಗೆ ಕಣ್ಣಿನ (Eye) ಸಮಸ್ಯೆ, ಕರುಳಿನ ಸಮಸ್ಯೆ ಸೇರಿದಂತೆ ಇನ್ನಿತರ ಹಲವಾರು ಆರೋಗ್ಯ ತೊಂದರೆಗಳು ದೂರ ಆಗುತ್ತವೆ. ಬನ್ನಿ ಈ ಲೇಖನದಲ್ಲಿ ಸಿಹಿ ಗೆಣಸಿನ ಆರೋಗ್ಯ ಪ್ರಯೋಜನಗಳ ಬಗ್ಗೆ ತಿಳಿದುಕೊಳ್ಳೋಣ.
ಸಿಹಿಗೆಣಸು ತನ್ನಲ್ಲಿ ಬೀಟಾ ಕ್ಯಾರೋಟಿನ್ (Beta Carotene) ಪ್ರಮಾಣವನ್ನು ಹೇರಳವಾಗಿ ಹೊಂದಿದ್ದು, ಇದರ ಸೇವನೆಯಿಂದ ಬೀಟಾ ಕ್ಯಾರೋಟಿನ್ ನಮ್ಮ ದೇಹದಲ್ಲಿ ವಿಟಮಿನ್ ಎ (Vitamin A) ಆಗಿ ಬದಲಾಗುತ್ತದೆ ಮತ್ತು ಅದು ಕಣ್ಣುಗಳ ದೃಷ್ಟಿಯನ್ನು ಹೆಚ್ಚಿಸುತ್ತದೆ. ಇದರಿಂದ ರಾತ್ರಿ ಕುರುಡು ಸಮಸ್ಯೆ ಕೂಡ ದೂರವಾಗುತ್ತದೆ. ದೀರ್ಘಕಾಲದವರೆಗೆ ಕಣ್ಣಿನ ಪೊರೆ ಅಥವಾ ದೃಷ್ಟಿ ಮುಂಜಾಗುವ ಸಾಧ್ಯತೆ ಕೂಡ ಇರುವುದಿಲ್ಲ.

ಇನ್ನು ಜೀರ್ಣಾಂಗ ವ್ಯವಸ್ಥೆಗೆ ಸಿಹಿ ಗೆಣಸು ಸಕಾರಾತ್ಮಕ ಪರಿಣಾಮ ಉಂಟು ಮಾಡುತ್ತದೆ ಎಂದು ಹೇಳಬಹುದು. ಏಕೆಂದರೆ ಇದರಲ್ಲಿ ನಾರಿನ ಅಂಶ ಹೆಚ್ಚಾಗಿರುವುದರಿಂದ ಕರುಳಿನ ಆರೋಗ್ಯವನ್ನು ಉತ್ತಮಪಡಿಸುವುದು ಮಾತ್ರವಲ್ಲದೆ ನಿಮ್ಮ ಧೀರ್ಘಕಾಲದ ಮಲಬದ್ಧತೆ ಸಮಸ್ಯೆಯನ್ನು ಇಲ್ಲವಾಗಿಸುತ್ತದೆ. ಹೀಗಾಗಿ ಆರೋಗ್ಯಕರ ಜೀರ್ಣ ಶಕ್ತಿ ನಿಮಗೆ ಸಿಕ್ಕಂತೆ ಆಗುತ್ತದೆ.
ಸಿಹಿ ಗೆಣಸಿನಲ್ಲಿ ಸಿಹಿ ಸೂಚ್ಯಂಕ ಕಡಿಮೆ ಇದ್ದು, ರಕ್ತದಲ್ಲಿ ನಿಧಾನವಾಗಿ ಗ್ಲುಕೋಸ್ (Glucose) ಬಿಡುಗಡೆ ಆಗುವಂತೆ ನೋಡಿಕೊಳ್ಳುತ್ತದೆ. ಇದು ರಕ್ತದ ಹರಿವಿನಲ್ಲಿ ಹೆಚ್ಚಾಗದಂತೆ ರಕ್ಷಣೆ ಮಾಡಿ ಬ್ಲಡ್ ಶುಗರ್ ಲೆವೆಲ್ (Blood Sugar Level) ಏರಿಕೆ ಆಗದಂತೆ ತಡೆಯುತ್ತದೆ. ಹೀಗಾಗಿ ಮಧುಮೇಹ ಹೊಂದಿರುವವರು ಆಗಾಗ ಸಿಹಿ ಗೆಣಸು ಸೇವನೆ ಮಾಡುವ ಅಭ್ಯಾಸ ಇಟ್ಟುಕೊಳ್ಳಬೇಕು.
ಮಾರುಕಟ್ಟೆಯಲ್ಲಿ ಸಿಗುವ ನೆರಳೆ ಬಣ್ಣದ ಸಿಹಿ ಗೆಣಸು ಕ್ಯಾನ್ಸರ್ (Cancer) ಕಾಯಿಲೆ ಬರದಂತೆ ತಡೆಗಟ್ಟುವ ಗುಣ ಹೊಂದಿದೆ ಎಂಬುದು ಸಂಶೋಧನೆಯಿಂದ ತಿಳಿದುಬಂದಿದೆ. ಇದರಲ್ಲಿರುವ ಕ್ಯಾರೋಟಿನ್ ಅಂಶಗಳು ಕ್ಯಾನ್ಸರ್ ವಿರುದ್ಧ ಹೋರಾಡುವ ಸಾಮರ್ಥ್ಯ ಪಡೆದಿವೆ. ಹೀಗಾಗಿ ಕ್ಯಾನ್ಸರ್ ರೋಗ ನಿವಾರಕವಾಗಿ ಕೆಲಸ ಮಾಡುವುದು ಮಾತ್ರವಲ್ಲದೆ ಆರೋಗ್ಯಕರ ಜೀವಕೋಶಗಳ ಅಭಿವೃದ್ಧಿಯಲ್ಲಿ ಕೂಡ ನೆರವಾಗುತ್ತದೆ. ವಿಶೇಷವಾಗಿ ಪುರುಷರಲ್ಲಿ ಕಂಡುಬರುವ ಪ್ರೊಸ್ಟೆಟ್ ಕ್ಯಾನ್ಸರ್ (Prostate Cancer) ಸಮಸ್ಯೆಗಳಿಗೆ ಇದು ರಾಮಬಾಣವಾಗಿದೆ.