Bengaluru: ಬಿಜೆಪಿ (BJP) ಟಿಕೆಟ್ ಕೊಡಿಸುವುದಾಗಿ ಉದ್ಯಮಿಗೆ ಕೋಟ್ಯಂತರ ರೂಪಾಯಿ ವಂಚಿಸಿರುವ ಆರೋಪದಲ್ಲಿ ಚೈತ್ರಾ ಕುಂದಾಪುರ ಬಂಧನವಾಗಿದ್ದು, ಈ ಬಗ್ಗೆ ಮೊದಲ ಪ್ರತಿಕ್ರಿಯೆ ನೀಡಿರುವ ಚೈತ್ರಾ ಕುಂದಾಪುರ (Chaitra Kundapura) ಸ್ವಾಮೀಜಿ ಬಂಧನವಾಗಲಿ ಮುಂದೆ ಎಲ್ಲ ದೊಡ್ಡ ದೊಡ್ಡವರ ಹೆಸರು ಬರುತ್ತೆ ನೋಡ್ತೀರಿ ಎಂದು ಹೊಸ ಬಾಂಬ್ ಸಿಡಿಸಿದ್ದಾಳೆ. ಆದರೆ, ವಿಜಯನಗರ (Vijayanagar) ಜಿಲ್ಲೆಯ ಹಾಲಸ್ವಾಮೀಜಿ ಅಜ್ಞಾತ ಸ್ಥಳಕ್ಕೆ ತೆರಳಿದ್ದು, ಅವರಿಗಾಗಿ ಪೊಲೀಸರು ಶೋಧ ನಡೆಸಿದ್ದಾರೆ.

ಉದ್ಯಮಿ ಗೋವಿಂದ ಬಾಬು ಪೂಜಾರಿಗೆ (Govinda Babu Poojari) 5 ಕೋಟಿ MLA ಟಿಕೆಟ್ ಹೆಸರಲ್ಲಿ ಪಂಗನಾಮ ಹಾಕಿರುವ ಚೈತ್ರಾ ಕುಂದಾಪುರಳು ವಿಚಾರಣೆ ವೇಳೆ ದೊಡ್ಡ ಬಾಂಬನ್ನೇ ಹಾಕಿದ್ದಾಳೆ. ಯಾವುದಕ್ಕೂ ಹಾಲಶ್ರೀ ಸ್ವಾಮೀಜಿ (Halashree Swamiji) ಬಂಧನವಾಗಲಿ, ಆಗ ದೊಡ್ಡ ದೊಡ್ಡವರ ಹೆಸರೇ ಹೊರಗೆ ಬರುತ್ತೆ ನೋಡ್ತೀರಿ ಅಂತ ಟಾಂಗ್ ಕೊಡುವ ಮೂಲಕ ಸಂಚಲನ ಸೃಷ್ಠಿಸಿದ್ದಾಳೆ.
ಸ್ವಾಮೀಜಿ ಬಂಧನವಾಗಲಿ ನೋಡ್ತೀರಿ:
ಹಿಂದೂಪರ ಹೋರಾಟಗಾರ್ತಿ ಚೈತ್ರಾ ಕುಂದಾಪುರಳು ಬೈಂದೂರಿನ ಆಹಾರ ಉದ್ಯಮಿಯಾಗಿರುವ ಪೂಜಾರಿಗೆ ಬಿಜೆಪಿ ಟಿಕೆಟ್ ಕೊಡಿಸುತ್ತೇನೆ ಅಂತ ಹೇಳಿ ನಂಬಿಸಿದ್ದು, ಕಬಾಬ್ ಮಾರುವವನಿಗೆ ಹಾಗೂ ಸಲೂನ್ ಇಟ್ಟುಕೊಂಡವನಿಗೆ ಬಿಜೆಪಿ ಪ್ರಚಾರಕ ಸಮಿತಿಯ ಹೈಕಮಾಂಡ್ನ (Highcommand) ವೇಷವನ್ನು ಹಾಕಿಸಿ ತದ ಬಳಿಕ 5 ಕೋಟಿ ರೂಪಾಯಿ ವಂಚನೆ ಮಾಡಿರುವ ಆರೋಪದ ಹಿನ್ನೆಲೆಯಲ್ಲಿ ಆಕೆಯನ್ನು ಸಿಸಿಬಿ (CCB) ಪೊಲೀಸರು ಬಂಧಿಸಿದ್ದರು. ಇನ್ನು ಈ ಪ್ರಕರಣದ ಮತ್ತೊಬ್ಬ ಪ್ರಮುಖ ಆರೋಪಿ ಹಿರೇ ಹಡಗಲಿಯ ಹಾಲು ಮಠದ ಅಭಿನವ ಹಾಲಶ್ರೀ ಸ್ವಾಮೀಜಿ, ಚೈತ್ರಾ ಬಂಧನವಾಗುತ್ತಿದ್ದಂತೆ ತಲೆಮರೆಸಿಕೊಂಡಿದ್ದಾರೆ.
ವಿಜಯನಗರ ಜಿಲ್ಲೆಯ ಹಾಲಶ್ರೀ ಸ್ವಾಮೀಜಿ ಅಜ್ಞಾತ ಸ್ಥಳಕ್ಕೆ ತೆರಳಿದ್ದು, ಅವರಿಗಾಗಿ ಪೊಲೀಸರು ಶೋಧ ನಡೆಸುತ್ತಿರುವುದಲ್ಲದೆ ಸ್ವಾಮೀಜಿ ಬಂಧನಕ್ಕೂ ಪೊಲೀಸರು ಬಲೆ ಬೀಸಿದ್ದಾರೆ. ಈ ಮಧ್ಯೆ ಸಿಸಿಬಿ ಪೊಲೀಸರ ವಿಚಾರಣೆ ವೇಳೆ ಚೈತ್ರಾ ಕುಂದಾಪುರ ರೋಚಕ ಅಂಶಗಳನ್ನು ಬಹಿರಂಗಪಡಿಸಿದ್ದಾಳೆ. “ಸ್ವಾಮೀಜಿ ಬಂಧನವಾಗಲಿ ನೋಡ್ತೀರಿ, ಯಾರ ಯಾರ ಹೆಸರು ಹೊರಗೆ ಬರುತ್ತೆ” ಅಂತ ಹೇಳಿಕೆ ನೀಡಿ ವಂಚನಾ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ನೀಡಿದ್ದಾಳೆ.

A1 ಆರೋಪಿ ನೀವೇನಾ? ಪ್ರಶ್ನೆಗೆ ಉತ್ತರ ಕೇಳಿ:
ವಿಚಾರಣೆಗೆಂದು ಸಿಸಿಬಿ ಆಫೀಸಿಗೆ ಕರೆತಂದಾಗ ಮಾದ್ಯಮದವರು ಎ.ಒನ್ ಆರೋಪಿ ನೀವೇನಾ ಅಂತ ಪ್ರಶ್ನೆಗೆ ಉತ್ತರ ಕೊಟ್ಟ ಚೈತ್ರಾ ಎ ಒನ್ ಆರೋಪಿ ನಾನೇ ಆಗಿದ್ದರೂ ಸತ್ಯ ಹೊರಗಡೆ ಬರಲಿದೆ. ಸ್ವಾಮೀಜಿ ಬಂಧನದ ನಂತರ ಎಲ್ಲಾ ದೊಡ್ಡ ದೊಡ್ಡವರ ಹೆಸರುಗಳು ಹೊರಗೆ ಬರಲಿವೆ. ಸ್ವಾಮೀಜಿ ಸಿಕ್ಕಿ ಹಾಕಿಕೊಂಡ ಬಳಿಕ ಎಲ್ಲಾ ವಿಷಯಗಳು ಗೊತ್ತಾಗಲಿದೆ ಎಂದು ತಿಳಿಸಿದ್ದಾಳೆ.
ಚೈತ್ರಾಳಿಂದ ಮತ್ತೊಂದು ವರಸೆ:
ಇದೇ ವೇಳೆ ಚೈತ್ರಾ ಈ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್ ನೀಡಿದ್ದು, ಅದು ಏನೆಂದರೆ ಚೆಫ್ ಟಾಕ್ (Chef Talk) ಸಂಸ್ಥೆ ಮಾಲೀಕರಾದ ಗೋವಿಂದ ಬಾಬು ಪೂಜಾರಿ ಅವರು ಇಂದಿರಾ ಕ್ಯಾಂಟೀನ್ ಟೆಂಡರ್ ಪಡೆದು ಆಹಾರ ಸರಬರಾಜು ಮಾಡುತ್ತಿದ್ದರು. ಆದರೆ ಅವರಿಗೆ ಬಿಬಿಎಂಪಿ (BBMP) ಕೊಟ್ಯಾಂತರ ರೂಪಾಯಿ ಬಿಲ್ ಕೊಡದೆ ಸತಾಯಿಸುತ್ತಿದೆ ಎನ್ನುವ ಅಂಶ ತಿಳಿದಿರುವ ಚೈತ್ರಾ ಈಗ ಈ ವಂಚನಾ ಪ್ರಕರಣಕ್ಕೂ, ಇಂದಿರಾ ಕ್ಯಾಂಟಿನ್ ಬಿಲ್ ಪೆಂಡಿಂಗ್ ಪ್ರಕರಣಕ್ಕೂ, ಸಂಬಂಧ ಇದೆ ಅಂತ ಹೇಳುತ್ತಿದ್ದಾಳೆ. ಅಲ್ಲದೆ ಇಲ್ಲಿ ಷಡ್ಯಂತ್ರ ರೂಪಿಸಿ ನನ್ನನ್ನು ಸಿಲುಕಿಸಲಾಗುತ್ತಿದೆ ಎಂದು ಆಕೆ ಇನ್ನೊಂದು ಬಾಂಬ್ ಹಾಕಿದ್ದಾಳೆ.
ಇದೇ ವೇಳೆ ಗೋವಿಂದ ಬಾಬು ಪೂಜಾರಿ ಮೇಲೆ ನೇರ ಆರೋಪ ಮಾಡಿರುವ ಚೈತ್ರ, ಇಂದಿರಾ ಕ್ಯಾಂಟೀನ್ ಟೆಂಡರ್ (Indira Canteen Tender) ಹಣ ವಾಪಾಸ್ ಪಡೆಯೋಕೆ ಈ ಪ್ಲಾನ್ ಮಾಡಿದ್ದಾರೆಂದು ಆರೋಪ ಮಾಡಿದ್ದಾಳೆ.
ಚೈತ್ರಾ ಹೇಳಿಕೆಗಳಲ್ಲಿ ಸಾಕಷ್ಟು ಗೊಂದಲಗಳು ಕಾಣುತ್ತಿದ್ದು, ಕ್ಷಣಕ್ಕೊಂದು ಹೇಳಿಕೆಗಳನ್ನು ನೀಡುತ್ತಿದ್ದಾಳೆ. ಇನ್ನು ತಲೆ ಮರೆಸಿಕೊಂಡಿರುವ ಸ್ವಾಮೀಜಿಯ ಹುಡುಕಾಟದಲ್ಲಿ ಪೊಲೀಸರು ಸಕ್ರಿಯರಾಗಿದ್ದಾರೆ. ಸ್ವಾಮೀಜಿ ಸಿಕ್ಕ ನಂತರವೇ ಈ ಪ್ರಕರಣದ ಷಡ್ಯಂತ್ರದ ಇನ್ನಷ್ಟು ಮಾಹಿತಿಗಳು ಹೊರ ಬೀಳಲಿವೆ. ಆ ದೊಡ್ಡ ದೊಡ್ಡವರು ಯಾರು ಅನ್ನೋ ಸತ್ಯವೂ ಬಯಲಾಗಲಿವೆ.
ಭವ್ಯಶ್ರೀ ಆರ್.ಜೆ