ಅತ್ಯಾಚಾರ ಪ್ರಕರಣಕ್ಕೆ: ಕೇವಲ ಒಂದೇ ದಿನದಲ್ಲಿ ತೀರ್ಪು ಪ್ರಕಟಿಸಿದ ಬಿಹಾರ ಕೋರ್ಟ್

ಪಾಟ್ನಾ ನ 30 : ಬಾಲಕಿಯ ಮೇಲಿನ ಅತ್ಯಾಚಾರ ಪ್ರಕರಣದ ವಿಚಾರಣೆಯನ್ನು ಬಿಹಾರದ ಅರಾರಿಯಾ ಪಿಒಎಸ್‌ಸಿ ನ್ಯಾಯಾಲಯ ಒಂದೇ ದಿನದಲ್ಲಿ ಪೂರ್ಣಗೊಳಿಸಿದೆ. ಅಕ್ಟೋಬರ್ 4 ರಂದು ನ್ಯಾಯಾಲಯದ ತೀರ್ಪಿನ ಹೊರತಾಗಿಯೂ, ತೀರ್ಪಿನ ಸಂಪೂರ್ಣ ಪಠ್ಯವು ಅಕ್ಟೋಬರ್ 26 ರಂದು ಲಭ್ಯವಾಯಿತು.

ಈ ವರ್ಷ ಜುಲೈ 22 ರಂದು ದಿಲೀಪ್ ಕುಮಾರ್ ಯಾದವ್ ಎಂಬ ವ್ಯಕ್ತಿ ಎಂಟು ವರ್ಷದ ಬಾಲಕಿಯ ಮೇಲೆ ಅಮಾನುಷವಾಗಿ ಅತ್ಯಾಚಾರ ನಡೆಸಿದ್ದ. ಘಟನೆಯ ಮರುದಿನ ಜುಲೈ 23 ರಂದು ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.

ಅರಾರಿಯಾ ಮಹಿಳಾ ಪೊಲೀಸ್ ಠಾಣೆಯ ಪ್ರಭಾರಿ ರೀಟಾ ಕುಮಾರಿ ವಿಶೇಷವಾಗಿ ಪ್ರಕರಣವನ್ನು ಅನುಸರಿಸಿದರು. ತ್ವರಿತ ಮತ್ತು ನಿರ್ಣಾಯಕ ಸಾಕ್ಷ್ಯವನ್ನು ಸಂಗ್ರಹಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು. ನ್ಯಾಯಾಧೀಶ ಶಶಿಕಾಂತ್ ರಾಯ್ ಅವರು ಅಕ್ಟೋಬರ್ 4 ರಂದು ಪ್ರಕರಣದ ವಿಚಾರಣೆಯನ್ನು ಒಂದು ದಿನದೊಳಗೆ ಪೂರ್ಣಗೊಳಿಸಿದರು.

ಒಟ್ಟು 10 ಸಾಕ್ಷಿಗಳನ್ನು ವಿಚಾರಣೆ ನಡೆಸಲಾಯಿತು. ಎರಡೂ ಕಡೆಯ ವಾದ-ಪ್ರತಿವಾದಗಳು ಒಂದೇ ದಿನದಲ್ಲಿ ಮುಗಿದವು. ಪ್ರಾಸಿಕ್ಯೂಷನ್ ಸಾಕ್ಷ್ಯದಿಂದ ತೃಪ್ತರಾದ ನ್ಯಾಯಾಲಯವು ಆರೋಪಿ ದಿಲೀಪ್ ಕುಮಾರ್ ಯಾದವ್ ಗೆ ಜೀವಾವಧಿ ಶಿಕ್ಷೆ ಮತ್ತು 50,000 ರೂಪಾಯಿ ದಂಡ ವಿಧಿಸಿದೆ.

ಬಾಲಕಿಯ ಭವಿಷ್ಯಕ್ಕಾಗಿ ಸಂತ್ರಸ್ತರ ಪರಿಹಾರ ನಿಧಿಯಿಂದ 7 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ನ್ಯಾಯಾಧೀಶರು ಆದೇಶಿಸಿದ್ದಾರೆ. ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಸ್ಕೋ) ಕುರಿತ ಅರಾರಿಯಾ ನ್ಯಾಯಾಲಯದ ತೀರ್ಪು ದೇಶದಲ್ಲೇ ಅತ್ಯಂತ ವೇಗವಾಗಿದೆ ಎಂದು ಪ್ರಕರಣದ ಪಬ್ಲಿಕ್ ಪ್ರಾಸಿಕ್ಯೂಟರ್ ಶ್ಯಾಮಲಾ ಯಾದವ್ ಹೇಳಿದ್ದಾರೆ.

Exit mobile version