ವೊಡಾಫೋನ್ ಐಡಿಯಾದ ಷೇರುಗಳನ್ನು ಖರೀದಿಸುವಂತೆ ಕೇಂದ್ರಕ್ಕೆ ಪತ್ರ ಬರೆದ ಬಿರ್ಲಾ

ಮುಂಬೈ, ಆ. 04: ತಮ್ಮ ಕಂಪನಿ ವೊಡಾಫೋನ್ ಐಡಿಯಾ (ವಿ) ಯನ್ನು ಉಳಿಸಿಕೊಳ್ಳಲು ಸಕಲ ಪ್ರಯತ್ನ ನಡೆಸುತ್ತಿರುವ ಕುಮಾರ್ ಮಂಗಲಂ ಬಿರ್ಲಾರವರು ತಮ್ಮ ಕಂಪನಿಯ ಷೇರುಗಳನ್ನು ಖರೀದಿಸಿ ಎಂದು ಕೇಂದ್ರಕ್ಕೆ ಪತ್ರ ಬರೆದಿದ್ದಾರೆ.

“ಕಂಪನಿಯಲ್ಲಿರುವ ತಮ್ಮ ಷೇರುಗಳನ್ನು ಮಾರಿ, ಅದನ್ನು ಸಾರ್ವಜನಿಕ ವಲಯಕ್ಕೆ ತರುವುದಕ್ಕೆ ನನಗೆ ಅಗತ್ಯಕ್ಕಿಂತಲೂ ಹೆಚ್ಚಿನ ಮನಸ್ಸಿದೆ” ಎಂದು ಅವರು ಕೇಂದ್ರೀಯ ಮಂತ್ರಿಮಂಡಲ ಕಾರ್ಯದರ್ಶಿ ರಾಜೀವ್ ಗೌಬಾ ಗೆ ಪತ್ರ ಬರೆದಿದ್ದಾರೆ.

ಭಾರತದ ಟೆಲಿಕಾಂ ಕ್ಷೇತ್ರದಲ್ಲಿ ವೊಡಾಫೋನ್ ಐಡಿಯಾ ದ ಪಾಲು ಒಟ್ಟು 27 ಶೇಕಡ ಇದೆ. ಆದರೂ ಕಂಪನಿ ಬಳಿ 1.8 ಲಕ್ಷ ಕೋಟಿ ರೂಪಾಯಿಗಳ ಸಾಲವಿದೆ. ಹೀಗಾಗಿ ತಮ್ಮ ಹೂಡಿಕೆದಾರರ ಕಡೆಯಿಂದ ಇನ್ನಷ್ಟು ಬಂಡವಾಳ ತರಿಸಿಕೊಳ್ಳಲು ಕಂಪನಿ ಪ್ರಯತ್ನಿಸುತ್ತಿದೆಯಾದರೂ, ಇದರಲ್ಲಿ ವಿಫಲವಾಗುತ್ತಿದೆ.

ವೊಡಾಫೋನ್ ಐಡಿಯಾ ಏಕೀಕರಣದ ನಂತರ ಕಂಪನಿಯಲ್ಲಿ ವೊಡಾಫೋನ್ ನ ಪಾಲು 44.39% ಇದ್ದರೆ, ಐಡಿಯಾ ದ ಪಾಲು 27.66% ಹಾಗೂ ಇತರರ ಪಾಲು 27.95% ಇದೆ. ಕೆಲವು ವಿಶ್ಲೇಷಕರ ಪ್ರಕಾರ ಕಂಪನಿಯ ನಷ್ಟವನ್ನು ಸರಿದೂಗಿಸಲು ಕಂಪನಿಯನ್ನು ಸರಕಾರಕ್ಕೆ ನೀಡಬೇಕು. ಏಕೆಂದರೆ 1.8 ಲಕ್ಷ ಕೋಟಿ ರೂಪಾಯಿಗಳ ಸಾಲದಲ್ಲಿ 1.2 ಲಕ್ಷ ರೂ.  ಸರಕಾರಕ್ಕೇ ಕಂಪನಿ ಪಾವತಿಸಬೇಕು. ಆದರೆ ಹೀಗಾಗುವುದು ಬಹುತೇಕ ಅಸಾದಧ್ಯವೆಂಬುವುದು ಅವರ ಅಭಿಪ್ರಾಯ.

ಸರಕಾರ ಇತ್ತೀಚೆಗೆ ತನ್ನ ಸ್ವಾಮ್ಯದ ಬಿ ಎಸ್ ಎನ್ ಎಲ್ ಅನ್ನು ನಷ್ಟದಿಂದ ಮೇಲೆತ್ತಲು 70 ಸಾವಿರ ಕೋಟಿ ಮೊತ್ತದ ಪ್ಯಾಕೇಜ್ ಘೋಷಿಸಿತ್ತು. ಹಾಗಾಗಿ ವಿ ನಲ್ಲಿ ಷೇರು ಖರೀದಿಸಲು ಸರಕಾರ ಸಮ್ಮತಿಸುವುದು ಸಾಧ್ಯವಿಲ್ಲ ಎಂದು ಹಣಕಾಸು ತಜ್ಞರು ಹೇಳುತ್ತಾರೆ.

Exit mobile version