ಮತಾತಂರ ನಿಷೇಧ ಮಸೂದೆಗೆ ಹಲವು ಬಿಷಪ್‌ಗಳ ವಿರೋಧ

ಬೆಂಗಳೂರು ಡಿ 23 : ಬಿಜೆಪಿ ಸರ್ಕಾರ ಜಾರಿಗೆ ತಂದಿದರುವ ಮತಾಂತರ ನಿಷೇಧ ಮಸೂದೆಯನ್ನು ಹಲವು ಮಂದಿ ಬಿಷಪ್ಪರು ವಿರೋಧಿಸಿದ್ದಾರೆ.  ರಾಜ್ಯ ಬಿಜೆಪಿ ಸರಕಾರ ಒಂದೆಡೆ ಮತಾಂತರ ವಿರುದ್ಧ ಪ್ರಬಲ ಕಾಯ್ದೆ ಜಾರಿಗೆ ತರಲು ಹೊರಟಿದ್ದರೆ, ಅದರ ವಿರುದ್ಧ ಕಾನೂನು ಹೋರಾಟ ನಡೆಸಲು ರಾಜ್ಯದ 14 ಚರ್ಚ್ ಧರ್ಮಪ್ರಾಂತ್ಯದ ಬಿಷಪ್ಪರು ಮುಂದಾಗಿದ್ದಾರೆ. ರಾಜ್ಯ ಸರಕಾರ ಕ್ರಿಸ್ತಿಯನ್ನರನ್ನು ಟಾರ್ಗೆಟ್ ಮಾಡಿಕೊಂಡು ಈ ರೀತಿಯ ಕಾಯ್ದೆ ತರುತ್ತಿದೆ ಎನ್ನುವ ಭಾವನೆ ಬಿಷಪರದ್ದಾಗಿದ್ದು, ಅದನ್ನು ಕೋರ್ಟಿನಲ್ಲಿ ಪ್ರಶ್ನೆ ಮಾಡುವ ಬಗ್ಗೆ ಸುಳಿವು ನೀಡಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿರುವ ಮೈಸೂರು ಧರ್ಮಪ್ರಾಂತ್ಯದ ಆರ್ಚ್ ಬಿಷಪ್ ಡಾ.ಕೆ.ಎ.ವಿಲಿಯಂ, ಕ್ರಿಶ್ಚಿಯನ್ನರು ಯಾವತ್ತೂ ಮತಾಂತರ ಕೆಲಸವನ್ನು ಮಾಡುತ್ತಿಲ್ಲ. ಹಾಗಾಗಿ ಈ ಕಾಯ್ದೆ ಬಗ್ಗೆ ಕ್ರಿಸ್ತಿಯನ್ನರು ಆತಂಕ ಪಡುವ ಅಗತ್ಯವೂ ಇಲ್ಲ. ಮೈಸೂರು ಧರ್ಮಪ್ರಾಂತ್ಯದಲ್ಲಿ 150ಕ್ಕೂ ಹೆಚ್ಚು ಸಂಸ್ಥೆಗಳನ್ನು ನಡೆಸುತ್ತಿದ್ದು, ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಶಿಕ್ಷಣ ಸೇವೆ ನೀಡುತ್ತಿದೆ. ಕೋವಿಡ್ ಬಿಕ್ಕಟ್ಟಿನ ಸಂದರ್ಭದಲ್ಲಿ ಬಹಳಷ್ಟು ಸೇವಾ ಕಾರ್ಯವನ್ನೂ ಮಾಡಿದ್ದೇವೆ. ಆದರೆ, ಯಾರಲ್ಲಿ ಕೂಡ ನಾವು ಅವರನ್ನು ಧರ್ಮ ಬದಲಿಸುವಂತೆ ಒತ್ತಡ ಹಾಕಿಲ್ಲ ಎಂದು ಹೇಳಿದ್ದಾರೆ.

ಆದರೆ, ಈಗ ಸಂದಿಗ್ಧ ಸನ್ನಿವೇಶ ಎದುರಾಗಲು ಕಾರಣವಾಗಿದ್ದು ಕೆಲವರು ಆಧಾರ ರಹಿತ ಆರೋಪ ಮಾಡಿರುವುದು, ಬಲವಂತದ ಮತಾಂತರ ಕೆಲಸ ಆಗುತ್ತಿದ್ದರೆ, ಅದನ್ನು ನಿಯಂತ್ರಿಸಲು, ಶಿಕ್ಷೆ ವಿಧಿಸಲು ಈಗಾಗಲೇ ಇರುವ ಕಾನೂನಿನಲ್ಲಿ ಅವಕಾಶಗಳಿವೆ. ಅದಕ್ಕಾಗಿ ಹೊಸ ಕಾಯ್ದೆ ತರಬೇಕಾದ ಅಗತ್ಯ ಇಲ್ಲ. ಆದರೆ, ಈಗ ರಾಜ್ಯ ಸರಕಾರ ಪ್ರಸ್ತಾವಿಸಿರುವ ಕಾಯ್ದೆ ಜಾರಿಗೆ ಬಂದರೆ ಆ ಬಗ್ಗೆ ನಾವು ಚರ್ಚೆ ನಡೆಸಬೇಕಾಗುತ್ತದೆ. ಅದರಿಂದ ಕ್ರಿಸ್ತಿಯನ್ನರನ್ನು ಟಾರ್ಗೆಟ್ ಮಾಡಿ, ಹತ್ತಿಕ್ಕುವ ಪ್ರಯಕ್ಕೆ ಆಗುತ್ತದೆಯೇ ಎಂಬ ಬಗ್ಗೆ ಚರ್ಚಿಸುತ್ತೇವೆ. ಈ ಬಗ್ಗೆ ಸದ್ಯದಲ್ಲೇ 14 ಧರ್ಮಪ್ರಾಂತ್ಯದ ಬಿಷಪ್ ಗಳು ಸೇರಿ ಸಭೆ ನಡೆಸುತ್ತೇವೆ. ಅಗತ್ಯ ಬಿದ್ದರೆ ಕಾನೂನು ಹೋರಾಟ ನಡೆಸುತ್ತೇವೆ ಎಂದು ಹೇಳಿದ್ದಾರೆ.

ಭಾರತದ ಸಂವಿಧಾನವು ಎಲ್ಲರಿಗೂ ಸಮಾನತೆ, ಸ್ವಾತಂತ್ರ್ಯ ಮತ್ತು ಭ್ರಾತೃತ್ವವನ್ನು ಅನುಸರಿಸಲು ಗ್ಯಾರಂಟಿ ಕೊಟ್ಟಿದೆ. ಯಾವುದೇ ಸರಕಾರ ಕೂಡ ಇದನ್ನು ಮೀರಿ ಹೋಗಲು ಸಾಧ್ಯವಿಲ್ಲ ಎಂದು ಬಿಷಪ್ ಡಾ.ಕೆ.ಎಂ.ವಿಲಿಯಂ ಹೇಳಿದ್ದಾರೆ.

Exit mobile version