ಕಮ್ಯುನಿಸ್ಟ್ ನೀತಿಗಳು ಹಾಗೂ ಪಿಣರಾಯಿ ಸರ್ಕಾರದ ಉಚಿತ ಕೊಡುಗೆಗಳಿಂದ ಕೇರಳದ (Kerala) ಅಭಿವೃದ್ಧಿ ಸಂಪೂರ್ಣ ನೆಲಕಚ್ಚಿದ್ದು, ಕೇರಳ ಆರ್ಥಿಕವಾಗಿ ಸಂಪೂರ್ಣ ದಿವಾಳಿಯತ್ತ ಮುನ್ನುಗ್ಗುತ್ತಿದೆ. ಕೇರಳ ದಿವಾಳಿಯಾಗಿದೆ, ಕರ್ನಾಟಕ ದಿವಾಳಿಯಾಗುವ ಕ್ಯೂ ನಲ್ಲಿದೆ ಎಂದು ರಾಜ್ಯ ಬಿಜೆಪಿ, ಕಾಂಗ್ರೆಸ್ ಸರ್ಕಾರವನ್ನು ಟೀಕಿಸಿದೆ.

ಉಚಿತ ಕೊಡುಗೆಗಳಿಂದ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಕೇರಳ ರಾಜ್ಯವನ್ನು ಉಲ್ಲೇಖಿಸಿ ಸರಣಿ ಟ್ವೀಟ್ ಮಾಡಿರುವ ರಾಜ್ಯ ಬಿಜೆಪಿ (BJP), ಕಮ್ಯುನಿಸ್ಟ್ ನೀತಿಗಳು ಹಾಗೂ ಪಿಣರಾಯಿ ಸರ್ಕಾರದ ಉಚಿತ ಕೊಡುಗೆಗಳಿಂದ ಕೇರಳದ ಅಭಿವೃದ್ಧಿ ಸಂಪೂರ್ಣ ನೆಲಕಚ್ಚಿದ್ದು, ಕೇರಳ ಆರ್ಥಿಕವಾಗಿ ಸಂಪೂರ್ಣ ದಿವಾಳಿಯತ್ತ ಮುನ್ನುಗ್ಗುತ್ತಿದೆ. ಕೇರಳ ದಿವಾಳಿಯಾಗಿದೆ, ಕರ್ನಾಟಕ ದಿವಾಳಿಯಾಗುವ ಕ್ಯೂ ನಲ್ಲಿದೆ. ಕರ್ನಾಟಕದ (Karnataka) ಜನತೆಯ ಕಿವಿ ಮೇಲೆ ನಿರಂತರವಾಗಿ ಹೂವಿಟ್ಟು, ಕರ್ನಾಟಕವನ್ನು (Karnataka) ದಿವಾಳಿ ಮಾಡುತ್ತಿರುವ ಸ್ವಯಂಘೋಷಿತ ಆರ್ಥಿಕ ತಜ್ಞ ಸಿದ್ದರಾಮಯ್ಯನವರು.
ಉಂಡು ಹೋದ ಕೊಂಡು ಹೋದ ಗಾದೆಯ ಅಪರಾವತಾರವೇ ಈ “ದಿವಾಳಿ ಬ್ರದರ್ಸ್” ಕರ್ನಾಟಕದಲ್ಲಿ ಸಹ ಇದೇ ಕಥೆ. ಕರ್ನಾಟಕ ಸರ್ಕಾರದ ಅವಾಸ್ತವಿಕ ಆರ್ಥಿಕ ನೀತಿಗಳು ಹಾಗೂ ಮಿತಿ ಮೀರಿದ ಸಾಲ ಕರ್ನಾಟಕವನ್ನು ಸಹ ದಿವಾಳಿಯತ್ತ ತಳ್ಳಿದ್ದು, ಪ್ರತಿ ಕನ್ನಡಿಗನ ಮೇಲೆ ಬರೋಬ್ಬರಿ ₹1 ಲಕ್ಷದಷ್ಟು ಸಾಲವಿದೆ ಎಂದು ಟೀಕಿಸಿದೆ.

ಇನ್ನೊಂದು ಟ್ವೀಟ್ನಲ್ಲಿ, ಸ್ವಯಂಘೋಷಿತ ಆರ್ಥಿಕ ತಜ್ಞ ಸಿಎಂ ಸಿದ್ದರಾಮಯ್ಯ (CM Siddaramaiah) ಅವರು, ತಮ್ಮ ತುಘಲಕ್ ಆರ್ಥಿಕ ನೀತಿಗಳಿಂದ ಕರ್ನಾಟಕವನ್ನು ದಿವಾಳಿ ಮಾಡಿಯೇ “ಸಿದ್ದ” ಎನ್ನುತ್ತಾ, ಅಭಿವೃದ್ಧಿಗೆ ಬಿಡಿಗಾಸು ಹಣ ಬಿಡುಗಡೆ ಮಾಡದೆ, ಕಾಲಹರಣ ಮಾಡುತ್ತಿದ್ದಾರೆ. ತಮ್ಮ ಆಡಳಿತದ ದಯನೀಯ ವೈಫಲ್ಯವನ್ನು ಜನರಿಂದ ಮರೆ ಮಾಚಲು ಕಾಂಗ್ರೆಸ್ (Congress) ಎಂದಿನಂತೆ ಕೇಂದ್ರ ಸರ್ಕಾರದ ಮೇಲೆ ಇನ್ನಿಲ್ಲದ ಆರೋಪ ಮಾಡುತ್ತಿದೆ ಎಂದು ಲೇವಡಿ ಮಾಡಿದೆ.
ಇನ್ನು ಕೇರಳ ರಾಜ್ಯ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, ಕೇಂದ್ರ ಸರ್ಕಾರದ ನೆರವು ಕೋರಿದೆ. ಪಿಣರಾಯಿ ವಿಜಯನ್ (Pinarayi Vijayan) ನೇತೃತ್ವದ ಕೇರಳ ಸರ್ಕಾರ, ಆರ್ಥಿಕ ದಿವಾಳಿಯತ್ತ ಸಾಗುತ್ತಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳ ಸರ್ಕಾರಕ್ಕೆ ಸುಪ್ರೀಂಕೋರ್ಟ್ (Supreme Court) ಛೀಮಾರಿ ಹಾಕಿತ್ತು. ಸೂಕ್ತ ರೀತಿಯಲ್ಲಿ ಯೋಜನೆಗಳನ್ನು ರೂಪಿಸದೇ ಇರುವುದಕ್ಕೆ ಹಾಗೂ ಆರ್ಥಿಕ ಸ್ಥಿತಿಯನ್ನು ನಿರ್ವಹಣೆ ಮಾಡದಿರುವ ಕಾರಣಕ್ಕೆ ಪಿಣರಾಯಿ ವಿಜಯನ್ ಸರ್ಕಾರವನ್ನು ಸುಪ್ರೀಂಕೋರ್ಟ್ ತರಾಟೆಗೆ ತೆಗೆದುಕೊಂಡಿತ್ತು.