ಬಿಜೆಪಿ ಅಭ್ಯರ್ಥಿ ಖುಷ್ಬೂ ಸುಂದರ್ ಒಟ್ಟು ಆಸ್ತಿ 22.55 ಕೋ

ಚೆನ್ನೈ, ಮಾ. 19: ತಮಿಳುನಾಡು ವಿಧಾನಸಭೆ ಚುನಾವಣೆಗೆ ಥೌಸಂಡ್ ಲೈಟ್ಸ್ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ನಟಿ ಖುಷ್ಬೂ ಸುಂದರ್ ಗುರುವಾರ ನಾಮಪತ್ರ ಸಲ್ಲಿಸಿದ್ದಾರೆ. ಈ ವೇಳೆ ತಮ್ಮ ಆಸ್ತಿ ₹22.55 ಕೋಟಿ ಎಂದು ಖುಷ್ಬೂ ಘೋಷಿಸಿಕೊಂಡಿದ್ದಾರೆ.

ತಮಿಳುನಾಡಿನ ಬಿಜೆಪಿ ಘಟಕದ ಅಧ್ಯಕ್ಷ ಎಲ್. ಮುರುಗನ್ ಅವರು ಧಾರಾಪುರಂ ಚುನಾವಣಾ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದು 1.53 ಕೋಟಿ ರೂಪಾಯಿ (ಚರಾಸ್ತಿ ಮತ್ತು ಸ್ಥಿರಾಸ್ತಿ) ಮೌಲ್ಯದ ಆಸ್ತಿ ಹೊಂದಿದ್ದಾರೆ. ಪತ್ನಿ ಹೆಸರಲ್ಲಿ 1.09 ಕೋಟಿ ಮೌಲ್ಯದ ಆಸ್ತಿ ಇದೆ ಎಂದು ಮುರುಗನ್ ಘೋಷಿಸಿಕೊಂಡಿದ್ದಾರೆ.

ಆದಾಗ್ಯೂ, ಖುಷ್ಬೂ ಅವರ ಬಳಿ 17.99 ಕೋಟಿ ಮೌಲ್ಯದ ಸ್ಥಿರಾಸ್ತಿ ಇದ್ದು, ಪತಿ ಸಿ.ಸುಂದರ್ ಹೆಸರಲ್ಲಿ 16.57 ಕೋಟಿ ಮೌಲ್ಯದ ಆಸ್ತಿ ಇದೆ. ಖುಷ್ಬೂ ಅವರು ₹4.55 ಕೋಟಿ ಮತ್ತು ಸಿ. ಸುಂದರ್ ₹1.83 ಕೋಟಿ ಚರಾಸ್ತಿ ಹೊಂದಿದ್ದಾರೆ. ಖುಷ್ಬೂ ಹೆಸರಲ್ಲಿ ₹3.45 ಕೋಟಿ ಸಾಲ ಇದ್ದು, ಅವರ ಪತಿ ಹೆಸರಲ್ಲಿ ₹5.55 ಕೋಟಿ ಮೊತ್ತದ ಸಾಲ ಇದೆ ಎಂದು ಅಫಿಡವಿಟ್​ನಲ್ಲಿ ಹೇಳಲಾಗಿದೆ. ಆರು ವರ್ಷಗಳ ಕಾಲ ಕಾಂಗ್ರೆಸ್ ಪಕ್ಷದಲ್ಲಿದ್ದ ಖುಷ್ಬೂ ಕಳೆದ ವರ್ಷ ಅಕ್ಟೋಬರ್ ತಿಂಗಳಲ್ಲಿ ಬಿಜೆಪಿ ಸೇರಿದ್ದರು. ಇವರಿಗೆ ತೆಲಂಗಾಣ, ಉದಕಮಂಡಲಂ (ಊಟಿ) ಸೇರಿದಂತೆ ಹಲವೆಡೆ ಜಮೀನು ಮತ್ತು ವಸತಿ ಕಟ್ಟಡಗಳಿವೆ. ಈಕೆಯ ವಿರುದ್ಧ 4 ಕ್ರಿಮಿನಲ್ ಆರೋಪಗಳಿವೆ.

ಗುರುವಾರ ಥೌಸಂಡ್ ಲೈಟ್ಸ್ ವಿಧಾನಸಭಾ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ್ದ ಖುಷ್ಬೂ ವಲ್ಲುವಾರ್ ಕೋಟ್ಟಂನಿಂದ ಮೆರವಣಿಗೆಯಲ್ಲಿ ಬಂದಿದ್ದರು. ಪ್ರಸ್ತುತ ಚುನಾವಣೆ ಕ್ಷೇತ್ರದಲ್ಲಿ ಸಾಮಾಜಿಕ ಕಾರ್ಯಕರ್ತ, ಕಾವೇರಿ ಆಸ್ಪತ್ರೆಯ ವೈದ್ಯ ಡಿಎಂಕೆ ಅಭ್ಯರ್ಥಿ ಡಾ. ಏಳಿಲನ್ ನಾಗನಾಥನ್ ಅವರ ವಿರುದ್ಧ ಖುಷ್ಬೂ ಸ್ಪರ್ಧಿಸುತ್ತಿದ್ದಾರೆ.

ತಮ್ಮ ಪ್ರತಿಸ್ಪರ್ಧಿ ಬಗ್ಗೆ ಮಾತನಾಡಿದ ಖುಷ್ಬೂ, ಯಾವುದೇ ಪ್ರತಿಸ್ಪರ್ಧಿಯನ್ನು ಹಗುರವಾಗಿ ತೆಗೆದುಕೊಳ್ಳಬಾರದು . ನಾವು ಊಹಿಸಿದ್ದಕ್ಕಿಂತಲೂ ಅವರು ಬಲಶಾಲಿಗಳಾಗಿರುತ್ತಾರೆ. ಆದರೂ ನೀವು ಗೆಲ್ಲಲೇ ಬೇಕು. ಮಹಿಳೆಯರು ಚಿಕ್ಕ ಪುಟ್ಟ ಕಾರ್ಯಗಳ ಬಗ್ಗೆಯೂ ಕಾಳಜಿ ವಹಿಸುತ್ತಾರೆ. ಅವರ ನಡುವೆ ನಾನು ಸಕ್ರಿಯವಾಗಿರಲಿದ್ದೇನೆ ಎಂದು ಹೇಳಿದ್ದಾರೆ.

Exit mobile version