Bengaluru: ಬೆಂಗಳೂರಿನಲ್ಲಿ (Bengaluru) ಬಿಜೆಪಿಗೆ ಭಾರೀ ಶಾಕ್ ನೀಡಲಾಗಿದ್ದು, ಮಹತ್ವದ ಬೆಳವಣಿಗೆಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ (D.K Shivakumar) ಅವರ ಸಮ್ಮುಖದಲ್ಲಿ ಹಲವು ಬಿಜೆಪಿ ನಾಯಕರು ಕಾಂಗ್ರಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ಧಾರೆ. ಬೆಂಗಳೂರಿನ ಕೆಪಿಸಿಸಿ (KPCC) ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಸಚಿವ ರಾಮಲಿಂಗಾರೆಡ್ಡಿ, ಮಾಜಿ ಶಾಸಕಿ ಸೌಮ್ಯರೆಡ್ಡಿ ಸಮ್ಮುಖದಲ್ಲಿ ಪದ್ಮನಾಭ ನಗರ ವಿಧಾನಸಭಾ ಕ್ಷೇತ್ರದ 11 ಪ್ರಮುಖ ನಾಯಕರು ಕಾಂಗ್ರೆಸ್ಗೆ ಸೇರ್ಪಡೆಗೊಂಡಿದ್ದಾರೆ.

ಜೆಡಿಎಸ್ (JDS) ನಾಯಕ ಪ್ರಸಾದ್ ಬಾಬು, ಬಿಜೆಪಿಯ ಮಾಜಿ ಪಾಲಿಕೆ ಸದಸ್ಯರಾದ ಎಲ್.ಶ್ರೀನಿವಾಸ್, ಆಂಜನಪ್ಪ, ಶೋಭಾ ಅಂಜನಪ್ಪ, ನಾರಾಯಣ್, ಹೆಚ್.ಸುರೇಶ್, ವೆಂಕಟಸ್ವಾಮಿ ನಾಯ್ಡು, ಸುಪ್ರಿಯ ಶೇಖರ್ ಹಾಗೂ ಕೃಷ್ಣಮೂರ್ತಿ, ಬಾಲಕೃಷ್ಣ ಮತ್ತು ಸುಗುಣ ಬಿಜೆಪಿ (BJP) ತೊರೆದು ಕಾಂಗ್ರೆಸ್ ಸೇರ್ಪಡೆಯಾದ ನಾಯಕರಾಗಿದ್ಧಾರೆ. ಈ ಎಲ್ಲ ನಾಯಕರು ಬಿಜೆಪಿ ನಾಯಕ ಆರ್. ಅಶೋಕ್ (R Ashok) ಅವರ ಬೆಂಬಲಿಗರಾಗಿದ್ದವರು. ಈ ಎಲ್ಲ ನಾಯಕರು ಕಾಂಗ್ರೆಸ್ಗೆ ಸೇರ್ಪಡೆಯಾಗಿರುವುದರಿಂದ ಪದ್ಮನಾಭ ನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಇದೀಗ ಆರ್. ಅಶೋಕ್ ಶಕ್ತಿ ಕ್ಷಿಣಿಸಿದೆ ಎಂಬ ಮಾತುಗಳು ಕೇಳಿ ಬಂದಿವೆ.
ಇನ್ನು ಈ ಕುರಿತು ಟ್ವೀಟ್ ಮಾಡಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು, ಕೆಪಿಸಿಸಿ ಕಚೇರಿಯಲ್ಲಿ ನಡೆದ ನೂತನ ಸದಸ್ಯರ ಕಾಂಗ್ರೆಸ್ (Congress) ಪಕ್ಷಕ್ಕೆ ಸೇರ್ಪಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದೆ. ಇಂದು ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನವನ್ನು ವಿಶ್ವದಾದ್ಯಂತ ಆಚರಿಸಲಾಗುತ್ತಿದೆ. ಇಂತಹ ಪವಿತ್ರವಾದ ದಿನದಂದು ಈ ಕಾರ್ಯಕ್ರಮ ನಡೆಯುತ್ತಿದೆ. 2028ರ ವಿಧಾನಸಭಾ ಚುನಾವಣೆಗೆ ಪದ್ಮನಾಭನಗರದಿಂದ ಕಾಂಗ್ರೆಸ್ ಪಕ್ಷದ ಶಾಸಕರಾಗಿ ಆಯ್ಕೆಯಾಗುವ ಸುಸಂದರ್ಭಕ್ಕೆ ಇಂದು ಪೀಠಿಕೆ ಪ್ರಾರಂಭವಾಗಿದೆ. ಕಾಲ ಬದಲಾವಣೆ ಆಗುತ್ತಿದೆ.
ಸರಿಯಾದ ಸಂದರ್ಭದಲ್ಲಿ ಸೂಕ್ತ ನಿರ್ಧಾರ ತೆಗೆದುಕೊಂಡಾಗ ಬೆಟ್ಟದಷ್ಟು ಬದಲಾವಣೆ ಆಗುತ್ತದೆ. ರಾಜ್ಯದಲ್ಲಿ ನಡೆದ ಚುನಾವಣೆ ಸಂದರ್ಭದಲ್ಲಿ ನಮ್ಮ ಪಕ್ಷ 136 ಕ್ಷೇತ್ರವನ್ನು ಗೆಲ್ಲುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದೆ. ಪದ್ಮನಾಭನಗರದಲ್ಲಿ ನೀವು ಕೊಟ್ಟಿರುವ ಕಾಂಗ್ರೆಸ್ ಅಭ್ಯರ್ಥಿ ಗೆದ್ದೆ ಗೆಲ್ತಾರೆ ಎಂದು ಇಂದು ಪ್ರಜಾಪ್ರಭುತ್ವ ದಿನದಂದು ಹೇಳುತ್ತಿದ್ದೇನೆ. ಪದ್ಮನಾಭನಗರದ ಸ್ಥಳೀಯ ಚುನಾವಣೆಯಿಂದ ವಿಧಾನಸಭೆ ಚುನಾವಣೆವರೆಗೂ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸುವ ಗುರಿಯನ್ನು ನಮ್ಮ ಕಾರ್ಯಕರ್ತರಲ್ಲಿ ಇರಬೇಕು. ಕಾಂಗ್ರೆಸ್ ಪಕ್ಷ ನಿಮ್ಮೊಂದಿಗೆ ಜೊತೆಗಿದೆ ಎಂದು ತಿಳಿಸಿದೆ ಎಂದು ಹೇಳಿದ್ದಾರೆ.