ಸಚಿವರ ಪುತ್ರನಿಗೆ ಬ್ಲಾಕ್‌ಮೇಲ್‌ : ಸ್ಪಷ್ಟನೆ ಕೊಟ್ಟ ಯಶವಂತರಾಯಗೌಡ ಪಾಟೀಲ್‌

ಬೆಂಗಳೂರು ಜ 10 : ಸಚಿವರ ಪುತ್ರನಿಗೆ ಬ್ಲಾಕ್‌ಮೇಲ್‌ ಮಾಡಿರುವ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಈ ಬಗ್ಗೆ ಸಾಕಷ್ಟು ಕೂತುಹಲ ಕೆರಳಿಸಿದೆ. ಸಹಕಾರ ಸಚಿವ ಎಸ್.ಟಿ ಸೋಮಶೇಖರ್ ಪುತ್ರ ನಿಶಾಂತ್ ಅವರ ಮೊಬೈಲ್‌ಗೆ ಅಶ್ಲೀಲ ವಿಡಿಯೋ ಕಳಿಸಿರುವ ಪ್ರಕರಣದಲ್ಲಿ ವಿಜಯಪುರದ ಇಂಡಿ ಶಾಸಕನ ಪುತ್ರಿಯ ಹೆಸರು ಜೋರಾಗಿ ಕೇಳಿಬರುತ್ತಿದೆ. ಇದರ ಬೆನ್ನಲ್ಲೇ ಪತ್ರಿಕಾಗೋಷ್ಠಿ ನಡೆಸಿರುವ ಶಾಸಕ ಯಶವಂತರಾಯಗೌಡ ಪಾಟೀಲ್, ಸುಖಾಸುಮ್ಮನೆ ಈ ಕೇಸ್‌ನಲ್ಲಿ ತಮ್ಮ ಮಗಳ ಹೆಸರನ್ನು ಎಳೆದುತರಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪತ್ರಿಕಾಗೋಷ್ಠಿ ವೇಳೇ ನನ್ನ ಮಗಳಿನ್ನೂ ಚಿಕ್ಕವಳು. ಅವಳಿಗೆ ಏನೂ ತಿಳಿಯುವುದಿಲ್ಲ. ಸುಮ್ಮನೇ ಅವಳ ಹೆಸರನ್ನು ಎಳೆದು ತರಲಾಗುತ್ತಿದೆ ಎಂದರು. ಸಚಿವ ಎಸ್.ಟಿ.ಸೋಮಶೇಖರ್ ಹಾಗೂ ನಾನೂ ಉತ್ತಮ ಸ್ನೇಹಿತರು. ನಾವಿಬ್ಬರೂ ಮುಖ್ಯಮಂತ್ರಿಯನ್ನು ಭೇಟಿ ಮಾಡಿ ಸೂಕ್ತ ತನಿಖೆ ನಡೆಸುವಂತೆ ಮನವಿ ಮಾಡಿದ್ದೇವೆ. ಏನೋ ತಪ್ಪಾಗಿ ಹೀಗೆಲ್ಲಾ ಆಗಿದೆ. ಪ್ರಕರಣದ ಹಿಂದೆ ಇರುವವರನ್ನು ಬಯಲಿಗೆಳೆಯಲಿ, ರಾಜಕಾರಣ ಮಾಡುವವರು ನೇರವಾಗಿ ನನ್ನ ವಿರುದ್ಧ ರಾಜಕಾರಣ ಮಾಡಲಿ. ಮನೆಯವರು, ಮಕ್ಕಳನ್ನು ಇದರಲ್ಲಿ ಯಾಕೆ ತರುತ್ತಾರೆ ಎಂದು ಅಸಮಾಧಾನ ಹೊರಹಾಕಿದರು.

ಘಟನೆ ಕುರಿತು ಸ್ಪಷ್ಟನೆ ನೀಡಿರುವ ಪಾಟೀಲ್ ಅವರು, ನನ್ನ ಮಗಳು ಇಂಗ್ಲೆಂಡ್ಗೆ ಎಂಎಸ್ ಕಲಿಯಲು ಹೋಗಿದ್ದು ಸದ್ಯ ಊರಿಗೆ ಬಂದಿದ್ದಾಳೆ. ಆಕೆ ಕಳೆದ ಡಿಸೆಂಬರ್ 25ಕ್ಕೆ ತನ್ನ ಸ್ನೇಹಿತ ರಾಕೇಶ್ ಅಣ್ಣಪ್ಪ ಎಂಬಾತನಿಗೆ ಒಂದು ಬಿಸಿನೆಸ್ ಕಾಂಟ್ಯಾಕ್ಸ್ ಸಲುವಾಗಿ ಮೊಬೈಲ್‌ನ ಒಟಿಪಿ ಕೊಟ್ಟಿದ್ದಳು. ನಂತರ ಆ ಒಟಿಪಿಯನ್ನು ಆತ ಬೆಂಗಳೂರಿನಲ್ಲಿರುವ ರಾಹುಲ್‌ ಭಟ್‌ಗೆ ಕೊಟ್ಟಿರುವುದಾಗಿ ತಿಳಿದುಬಂದಿದೆ. ಇಲ್ಲೇ ಏನೋ ಎಡವಟ್ಟು ಆಗಿರುವ ಸಾಧ್ಯತೆ ಇದೆ ಎಂದರು.

ಈಗ ಸುದ್ದಿಯಾಗುತ್ತಿರುವಂತೆ ಸೋಮಶೇಖರ್ ಅವರ ಪುತ್ರ ನಿಶಾಂತ್ ಮತ್ತು ನನ್ನ ಕ್ಲಾಸ್‌ಮೇಟ್ ಕೂಡ ಅಲ್ಲ, ಇಬ್ಬರಿಗೂ ಕನೆಕ್ಷನ್ನೂ ಇಲ್ಲ. ನನ್ನ ಮಗಳು ಸಣ್ಣವಳು, ಓಟಿಪಿ ಶೇರ್ ಮಾಡಿದ್ರೆ ಇಷ್ಟೆಲ್ಲಾ ಆಗುತ್ತಿ ಎಂದು ಆಕೆಗೂ ಗೊತ್ತಿಲ್ಲ ಪಾಪ, ಸುಮ್ಮನೇ ಅದನ್ನೇ ದೊಡ್ಡದು ಮಾಡಲಾಗುತ್ತಿದೆ. ಅವಳೊಂದಿಗೆ ಪೊಲೀಸರು ಸಂಪರ್ಕದಲ್ಲಿ ಇದ್ದಾರೆ. ಆದ್ದರಿಂದ ಇಂಗ್ಲೆಂಡ್‌ನಿಂದ ಅವಳು ಬಂದಿದ್ದು, ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು, ತನಿಖೆಯ ನಂತರ ಸತ್ಯ ಹೊರಬೀಳಲಿದೆ ಎಂದು ಸ್ಷಷ್ಟನೆ ನೀಡಿದರು.

Exit mobile version