ಯಡಿಯೂರಪ್ಪ ಅವರ ಬಜೆಟ್ ಸಂವಾದಕ್ಕೆ ಮಾಧ್ಯಮಗಳಿಗೆ ಕೊಟ್ಟಿದ್ದು 38.97 ಲಕ್ಷ !

ಬಿ.ಎಸ್. ಯಡಿಯೂರಪ್ಪ ಅವರು ಕಳೆದ ಮಾರ್ಚ್‌ನಲ್ಲಿ ಘೋಷಿಸಿರುವ ಬಜೆಟ್‌ ಮೇಲಿನ ಸಂವಾದಕ್ಕೆ ಮಾಧ್ಯಮಗಳಿಗೆ ಬರೋಬ್ಬರಿ 38.97 ಲಕ್ಷಗಳನ್ನು ನೀಡಿರುವುದು `ದಿಫೈಲ್‌’ ವೆಬ್‌ ಪೋರ್ಟಲ್‌ಗೆ ಲಭ್ಯವಾದ ಆರ್‌ಟಿಐ ವರದಿಯಿಂದ ಬಹಿರಂಗವಾಗಿದೆ.

ಸಾಮಾನ್ಯವಾಗಿ ಎಲ್ಲಾ ಸರ್ಕಾರಗಳು ಬಜೆಟ್‌ ಘೋಷಣೆಯಾದ ನಂತರ ಸುದ್ದಿಗೋಷ್ಟಿಯಲ್ಲಿ ಸಂವಾದ ನಡೆಸುವುದು ಸರ್ವೇ ಸಾಮಾನ್ಯ. ಆದರೆ ಈ ಸಂವಾದಕ್ಕೆ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸರ್ಕಾರ ಸುದ್ದಿವಾಹಿನಿಗಳಿಗೆ ಯಾವ ಉದ್ದೇಶಕ್ಕಾಗಿ ಲಕ್ಷಗಟ್ಟಲೆ ಹಣವನ್ನು ನೀಡಿದೆ ಎಂದು ಸ್ವತ: ಸರ್ಕಾರವೇ ತಿಳಿಸಬೇಕಿದೆ.

ಈ ಬಾರಿ ಮಾತ್ರವಲ್ಲದೆ ಕಳೆದ ಬಾರಿ 2020-21 ರ ಬಜೆಟ್‌ ಘೋಷಿಸಿದಾಗಲೂ ಕೂಡ ಸುದ್ದಿವಾಹಿನಿಗಳೊಂದಿಗೆ ನಡೆಸಿದ ಸಂವಾದಕ್ಕೂ ಕೂಡ ಸುಮಾರು 14,86,800 ರೂಗಳನ್ನು ಸರ್ಕಾರ ಮಾಧ್ಯಮದವರಿಗೆ ನೀಡಿರುವುದರ ಬಗ್ಗೆ ಆರ್‌ಟಿಐ ವರದಿಯಿಂದ ತಿಳಿದುಬಂದಿದೆ. ಯಡಿಯೂರಪ್ಪ ಮಂಡಿಸಿದ 2 ಬಜೆಟ್‌ಗೆ ಸುಮಾರು  52ಲಕ್ಷಕ್ಕೂ ಅಧಿಕ ಹಣವನ್ನು ಸುದ್ದಿವಾಹಿನಿಗಳಿಗೆ ವೆಚ್ಚಮಾಡಿದೆ

2021-22 ರ ಬಜೆಟ್‌  ಸಂವಾದಕ್ಕೆ ಸುದ್ದಿವಾಹಿನಿಗಳಿಗೆ ವಾರ್ತಾ ಇಲಾಖೆಯಿಂದ ನೀಡಿರುವ ಮೊತ್ತದ ವಿವರ :

ಟಿವಿ 5 ಕನ್ನಡ – 2,70,000

ಬಿ ಟಿವಿ    – 3,60,000

ಪಬ್ಲಿಕ್‌ ಟಿವಿ – 5,85,000

ನ್ಯೂಸ್ 18 ಕನ್ನಡ – 4,14,000

ಟಿವಿ 9 – 7,92,000

ಸುವರ್ಣ ನ್ಯೂಸ್ – 3,78,000

ರಾಜ್‌ ನ್ಯೂಸ್ – 2,70,000

ಪ್ರಜಾ ಟಿವಿ – 2,88,000

ದಿಗ್ವಿಜಯ ನ್ಯೂಸ್ – 3,60,000

ಅಷ್ಟು ಮಾತ್ರವಲ್ಲದೆ ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟು ಹಬ್ಬದ ಜಾಹೀರಾತು ಪ್ರಕಟಣೆಗೆ ರಾಜ್ಯ ಸರ್ಕಾರ 44 ಲಕ್ಷ ರೂಪಾಯಿ ಬಿಡುಗಡೆ ಮಾಡಿದೆ. ದೇಶ ಇಂಥಾ ಸಂಕಷ್ಟದ ಪರಿಸ್ಥಿತಿ ಎದುರಿಸುತ್ತಿರುವಾಗ ಸರ್ಕಾರಕ್ಕೆ ಇಷ್ಟೊಂದು ಪ್ರಚಾರದ ಹುಚ್ಚು ಬೇಕಾ ಅನ್ನೋದು ಪ್ರಜ್ಞಾವಂತರ ಪ್ರಶ್ನೆಯಾಗಿದೆ.

Exit mobile version