ಶ್ರಿನಗರ.ಜು.02: ಭಾರತದ ಗಡಿ ಪ್ರವೇಶಿಸಲು ಪ್ರಯತ್ನಿಸುತ್ತಿದ್ದ ಪಾಕಿಸ್ತಾನದ ಶಂಕಿತ ಕಣ್ಗಾವಲು ಡ್ರೋನ್ ಮೇಲೆ ಬಿಎಸ್ಎಫ್ ಯೋಧರು ಶುಕ್ರವಾರ ಗುಂಡು ಹಾರಿಸಿ, ಹಿಮ್ಮೆಟ್ಟಿಸಿರುವುದಾಗಿ ಬಿಎಸ್ಎಫ್ ವಕ್ತಾರರು ತಿಳಿಸಿದ್ದಾರೆ.
ನಸುಕಿನ ಜಾವ 4.25ರ ಸುಮಾರಿಗೆ ಜಮ್ಮುವಿನ ಹೊರವಲಯದಲ್ಲಿರುವ ಅರ್ನಿಯಾ ಸೆಕ್ಟೆರ್ನಲ್ಲಿ ನಮ್ಮ ಸಿಬ್ಬಂದಿ ಡ್ರೋನ್ ಅನ್ನು ಪತ್ತೆ ಮಾಡಿದರು. ಭಾರತದ ಗಡಿಯನ್ನು ಪ್ರವೇಶಿಸಲು ಯತ್ನಿಸಿದ ಡ್ರೋನ್ ಮೇಲೆ ಯೋಧರು ಹಲವು ಸುತ್ತುಗಳ ಗುಂಡಿನ ದಾಳಿ ನಡೆಸಿದ್ದಾರೆ. ನಂತರ, ಡ್ರೋನ್ ಪಾಕಿಸ್ತಾನದ ಕಡೆ ಮರಳಿತು ಎಂದು ಅವರು ತಿಳಿಸಿದ್ದಾರೆ.
ಇಲ್ಲಿನ ಭಾರತೀಯ ವಾಯುಪಡೆಯ (ಐಎಎಫ್) ವಾಯುನೆಲೆ ಮೇಲೆ ಭಾನುವಾರ ನಡೆದ ಡ್ರೋನ್ ದಾಳಿಯ ಹಿನ್ನೆಲೆಯಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ.