ಅಕ್ರಮವಾಗಿ ಪಾಕ್ ಪ್ರವೇಶಿಸಿ 8 ವರ್ಷ ಶಿಕ್ಷೆ ಅನುಭವಿಸಿದ್ದ ಭಾರತೀಯರ ಹಸ್ತಾಂತರ

ಲಾಹೋರ್‌ ಆ 31 : ಪಾಕಿಸ್ತಾನದೊಳಗೆ ಅಕ್ರಮವಾಗಿ ಪ್ರವೇಶಿಸಿದ್ದಕ್ಕಾಗಿ 8 ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿದ್ದ ಇಬ್ಬರು ಭಾರತೀಯರನ್ನು ಪಾಕಿಸ್ತಾನವು ಭಾರತದ ಗಡಿ ಭದ್ರತಾ ಪಡೆಗೆ ಹಸ್ತಾಂತರಿಸಿದೆ ಎಂದು ಸರ್ಕಾರಿ ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದರು.

ಶರ್ಮಾ ರಜ‍ಪೂತ್‌ ಮತ್ತು ರಾಮ್‌ ಬುಹಾದಾರ್‌ ಎಂಬವರು 2013ರಲ್ಲಿ ಕಾಶ್ಮೀರದ ಎಲ್ಒಸಿ ಮೂಲಕ ಪಾಕಿಸ್ತಾನವನ್ನು ಪ್ರವೇಶಿಸಿದ್ದರು. ಅವರನ್ನು ಪಾಕಿಸ್ತಾನ ರೇಜಂರ್ಸ್ ಬಂಧಿಸಿದ್ದರು.

‘ಈ ಇಬ್ಬರು ಭಾರತೀಯರು ಬುದ್ದಿಮಾಂದ್ಯರಾಗಿದ್ದು, ಅಜಾಗರೂಕತೆಯಿಂದ ಗಡಿಯನ್ನು ದಾಟಿದ್ದಾರೆ ಎಂಬುದು ನಂತರದಲ್ಲಿ ತನಿಖೆ ವೇಳೆ ತಿಳಿದುಬಂದಿದೆ. ಅವರಿಬ್ಬರ ಫೋಟೋಗಳನ್ನು ಭಾರತದೊಂದಿಗೆ ಹಂಚಿಕೊಳ್ಳಲಾಗಿತ್ತು. ಭಾರತವು ಅವರ ಗುರುತನ್ನು ದೃಢೀಕರಿಸಿದ ಬಳಿಕ ಪಾಕಿಸ್ತಾನ ಸರ್ಕಾರವು ಸೋಮವಾರ ಅವರಿಬ್ಬರನ್ನು ವಾಘಾ ಗಡಿಯಲ್ಲಿ ಭಾರತಕ್ಕೆ ಹಸ್ತಾಂತರಿಸಿತು’ ಎಂದು ಅವರು ಹೇಳಿದರು.

Exit mobile version