ಬಿಎಸ್ವೈ ವಿರುದ್ಧದ ಡಿನೋಟಿಫೈ ಪ್ರಕರಣ: ಮುಖ್ಯಮಂತ್ರಿ ಗಳು ರಾಜೀನಾಮೆ ಪಡೆಯುವಂತೆ ಕಾಂಗ್ರೆಸ್ ಮುಖಂಡ ಉಗ್ರಪ್ಪ ವಾಗ್ದಾಳಿ

ಬೆಂಗಳೂರು, ಡಿ. 23: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಮತ್ತೆ ಭೂಕಂಟಕ ಎದುರಾದ ಹಿನ್ನೆಲೆಯಲ್ಲಿ ಬಿಎಸ್ವೈ ವಿರುದ್ಧ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ಮುಖಂಡ ಉಗ್ರಪ್ಪ, ಧಮ್, ತಾಕತ್ ಇದ್ರೆ ಯಡಿಯೂರಪ್ಪ ಅವರಿಂದ ರಾಜೀನಾಮೆ ಪಡೆಯಲಿ ಎಂದು ಬಿಜೆಪಿ ಹೈಕಮಾಂಡ್ ಗೆ ಸವಾಲು ಹಾಕಿದ್ದಾರೆ. ‌

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ವರಿಷ್ಠರು ಯಾವ ಮುಖ ಇಟ್ಕೊಂಡು ಯಡಿಯೂರಪ್ಪ ಅವರನ್ನ ಸಿಎಂ ಆಗಿ‌ ಮುಂದುವರೆಸುತ್ತಾರೆ. ಇವರಿಗೆ ಬದ್ಧತೆ ಇದ್ದಿದ್ದರೆ ಇಷ್ಟೊತ್ತಿಗೆ ರಾಜೀನಾಮೆ ಪಡೆಯುತ್ತಿದ್ದರು. ಜತೆಗೆ ಯಡಿಯೂರಪ್ಪ ಯಾವ ನೈತಿಕತೆ ಹೊತ್ತು ಅಧಿಕಾರದಲ್ಲಿ ಇದ್ದಾರೆ ಎಂದು ಪ್ರಶ್ನಿಸಿದರು.

ಪ್ರಧಾನಿ ಮೋದಿ ಕೇವಲ ಭಾಷಣ ಮಾಡೋದಲ್ಲ. ನಾನು ಸಂಸತ್ ನಲ್ಲಿ ಇದ್ದಾಗ ಮೋದಿ ಮಾತುಗಳನ್ನ‌ ಕೇಳಿದ್ದೇನೆ. ಅದು ಕೇವಲ ಭಾಷಣವಷ್ಟೇ, ಇವರಿಗೆ ಬದ್ಧತೆ, ನೈತಿಕತೆ ಯಾವುದೂ ಇಲ್ಲ. ಯಡಿಯೂರಪ್ಪ ಅವರ ವಿರುದ್ಧದ ಆರೋಪಕ್ಕೆ ಸಂಬಂಧಿಸಿದ ತನಿಖೆಯಲ್ಲಿ ಯಡಿಯೂರಪ್ಪ ಪ್ರಭಾವ ಬೀರುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಯಡಿಯೂರಪ್ಪ ರಾಜೀನಾಮೆ ನೀಡಬೇಕು. ಇಲ್ಲವಾದಲ್ಲಿ ಕಾಂಗ್ರೆಸ್ ಪಕ್ಷ ದೊಡ್ಡ ಹೋರಾಟ ಮಾಡಲಿದೆ ಎಂದು ಎಚ್ಚರಿಸಿದರು.

ನಾಲ್ಕು ವರ್ಷ ಯಾಕೆ ಲೋಕಾಯುಕ್ತ ತನಿಖೆ ಮಾಡಿರಲಿಲ್ಲ? ಯಡಿಯೂರಪ್ಪ ಬಹುಶಃ ಆಗಲೂ ಲೋಕಾಯುಕ್ತದ ಮೇಲೆ ಪ್ರಭಾವ ಬೀರಿರಬಹುದು. ಈಗಲೂ ಗೃಹ ಸಚಿವರು ಇವರ ಕೈಯ್ಯಲ್ಲೇ ಇರುವುದರಿಂದ ಈಗಲೂ ಪ್ರಭಾವ ಬೀರಬಹುದು. ಹೀಗಾಗಿ ದೇವರಬೀಸನಹಳ್ಳಿ ಡಿನೋಟಿಫೈ ಪ್ರಕರಣದಲ್ಲಿ ಯಡಿಯೂರಪ್ಪ ರಾಜಿನಾಮೆ ನೀಡಬೇಕು ಎಂದು ಆಗ್ರಹಿಸಿದರು.

Exit mobile version