ಬುಲ್ಲಿ ಬಾಯ್‍ ಆ್ಯಪ್‍ನ ಪ್ರಮುಖ ಆರೋಪಿ ಬಂಧನ

ಮುಂಬೈ ಜ 8 : ಬುಲ್ಲಿ ಬಾಯ್‌ ಆ್ಯಪ್‍ನ ಪ್ರಮುಖ ಆರೋಪಿ ನೀರಜ್‍ ಬಿಶ್ನೋಯ್‌ ಕೊನೆಗೂ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಮುಸ್ಲಿಂ ಮಹಿಳೆಯರನ್ನು ಹರಾಜು ಹಾಕುವ ವಿವಾದಾತ್ಮಕ ಆಪ್‌ನ ಮುಖ್ಯ ಆರೋಪಿ ನೀರಜ್ ಬಿಶ್ನೋಯ್ ತನ್ನ ಕೃತ್ಯದ ಬಗ್ಗೆ ಯಾವುದೇ ಪಶ್ಚಾತ್ತಾಪ ಇಲ್ಲ ಎಂದು ಪೊಲೀಸ್ ವಿಚಾರಣೆ ವೇಳೆ ಹೇಳಿಕೊಂಡಿದ್ದಾನೆ. ಬದಲಾಗಿ ತಾನು ಮಾಡಿರುವುದು ಸರಿಯಾಗಿದೆ ಎಂದು ಸಮರ್ಥಿಸಿಕೊಂಡಿದ್ದಾನೆ. ಭೋಪಾಲ್‌ನ ಶಿಕ್ಷಣ ಸಂಸ್ಥೆಯೊಂದರಲ್ಲಿ ಎರಡನೇ ವರ್ಷದ ಬಿ.ಟೆಕ್ ವಿದ್ಯಾರ್ಥಿಯಾಗಿದ್ದ ಬಿಶ್ನೋಯ್‌ನನ್ನು ಅಸ್ಸಾಂನ ಜೊರ್ಹಾತ್ ಜಿಲ್ಲೆಯಲ್ಲಿ ಪೊಲೀಸರು ಗುರುವಾರ ಬಂಧಿಸಿದ್ದರು. ಗಿಟ್‌ಹಬ್ ವೇದಿಕೆಯಲ್ಲಿ ಆಪ್ ಸೃಷ್ಟಿಸಲು ಆತ ಬಳಸಿದ್ದ ಸಾಧನವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆತ ಕುಟುಂಬದ ಸದಸ್ಯರಲ್ಲಿ ಒಬ್ಬರ ಫೋನ್ ಬಳಸಿ ಆಪ್ ಸೃಷ್ಟಿಸಿದ್ದ. ನವೆಂಬರ್‌ನಲ್ಲಿ ಆಪ್ ಅಭಿವೃದ್ಧಿಪಡಿಸಿದ್ದು, ಡಿಸೆಂಬರ್ 31ರಂದು ಸಾರ್ವಜನಿಕರ ಬಳಕೆಗೆ ಲಭ್ಯವಾಗುವಂತೆ ಮಾಡಿದ್ದ. ಮತ್ತೊಂದು ಟ್ವಿಟ್ಟರ್ ಹ್ಯಾಂಡಲ್ ಮೂಲಕ ಅದರ ಪ್ರಚಾರ ಮಾಡಿದ್ದಾಗಿ ತಿಳಿಸಿದ್ದಾನೆ.

ಬಿಶ್ನೋಯ್ ತನ್ನ ಗುರುತನ್ನು ಹಾಗೂ ಈ ಆಪ್‌ ತಯಾರಿಸಿದ್ದು ಏಕೆ ಎಂಬ ಕಾರಣಗಳನ್ನು ಮುಚ್ಚಿಡಲು ಪ್ರಯತ್ನಿಸಿದ್ದ. ಅಸ್ಸಾಂನ ಜೊರ್ಹಾತ್‌ನಲ್ಲಿರುವ ತನ್ನ ಪೋಷಕರ ಮನೆಯಲ್ಲಿ ಇದ್ದಾಗ ಆತ ಟ್ವಿಟ್ಟರ್‌ನಲ್ಲಿ ‘ಬುಲ್ಲಿಬಾಯಿ’ ಖಾತೆಯಲ್ಲಿ ತಾನು ನೇಪಾಳದ ಸುಂಧಾರ ನಿವಾಸಿ ಎಂದು ಹೇಳಿಕೊಂಡಿದ್ದ. ತನಗೆ ಪಾಕಿಸ್ತಾನಿ ಸಂಸ್ಥೆಗಳು ಬುಲ್ಲಿ ಬಾಯ್‍ ಆ್ಯಪ್ ಸೃಷ್ಟಿಸಲು ಹಣ ನೀಡಿದ್ದು, ತನ್ನ ಯೋಜನೆಯಲ್ಲಿ ಯಶಸ್ಸು ಕಂಡಿದ್ದಾಗಿ ಹೇಳುವ ಮೂಲಕ ತನಿಖಾಧಿಕಾರಿಗಳ ದಾರಿ ತಪ್ಪಿಸಲು ಪ್ರಯತ್ನಿಸಿದ್ದ. ಎಂದು ವಿಚಾರಣೆ ವೇಳೆ ತಿಳಿದುಬಂದಿದೆ.

ಬುಲಲಿ ಬಾಯ್‍ ಆ್ಯಪ್‍ ಹಿಂದಿರುವ ವ್ಯಕ್ತಿ ನಾನೇ  ಎಂದು ಆತ ಒಪ್ಪಿಕೊಂಡಿದ್ದಾನೆ. ಆತ ಟ್ವಿಟ್ಟರ್‌ನಲ್ಲಿ ಕೆಲವು ಹ್ಯಾಂಡಲ್‌ಗಳನ್ನು ಟ್ಯಾಗ್ ಮಾಡಿದ್ದು, ಮುಂಬಯಿ ಪೊಲೀಸರು ತಪ್ಪು ಶಂಕಿತರನ್ನು ಬಂಧಿಸಿದ್ದಾರೆ. ಅವರಿಗೆ ಧೈರ್ಯವಿದ್ದರೆ ತನ್ನನ್ನು ಬಂಧಿಸಲಿ ಎಂದು ಹೇಳಿಕೊಂಡಿದ್ದ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ

Exit mobile version