Bengaluru: ಬಿಜೆಪಿ ರಾಜ್ಯಾಧ್ಯಕ್ಷರಾಗಿ ಬಿವೈ ವಿಜಯೇಂದ್ರ (B Y Vijayendra) ಅಧಿಕಾರ ಸ್ವೀಕಾರ ಮಾಡಿ ಮಾಡಿದ ಮೊದಲ ಭಾಷಣದಲ್ಲಿ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಸರ್ಕಾರಕ್ಕೆ ತಕ್ಕ ಉತ್ತರ ಕೊಡುವುದೇ ನನ್ನ ಗುರಿ ಎಂದು ಹೇಳಿದ್ದಾರೆ.
ಬಿಜೆಪಿ (BJP) ಕಚೇರಿಯಲ್ಲಿ ಅಧಿಕಾರ ಸ್ವೀಕಾರ ಮಾಡಿದ ಬಳಿಕ ಮಾತನಾಡಿ, ನಾವೆಲ್ಲರೂ ಜಾತಿ ಮನೋಭಾವ ಬಿಟ್ಟು ಬಿಜೆಪಿ ಕಾರ್ಯಕರ್ತ ಎಂದು ಮನದಲ್ಲಿ ಇಟ್ಟುಕೊಂಡರೆ ಲೋಕಸಭೆ ಚುನಾವಣೆಯಲ್ಲಿ 28 ಸ್ಥಾನ ಗೆಲ್ಲಲು ಸಾಧ್ಯ ಎಂದರು. ಬಿಜೆಪಿ ರಾಜ್ಯಾಧ್ಯಕ್ಷ ಜವಾಬ್ದಾರಿಯನ್ನು ಕೇಂದ್ರದ ನಾಯಕರ ಆಶೀರ್ವಾದದಿಂದ ಹೊತ್ತುಕೊಂಡಿದ್ದೇನೆ. ವಿಶ್ವಾಸವನ್ನು ಉಳಿಸಿಕೊಂಡು ಹೋಗುವ ಪ್ರಯತ್ನ ಪ್ರಾಮಾಣಿಕವಾಗಿ ಮಾಡುತ್ತೇನೆ.
ಜೆಪಿ ನಡ್ಡಾ (J P Nadda) ನನ್ನ ಹೆಸರು ಘೋಷಣೆ ಮಾಡಿದ ಕ್ಷಣದಿಂದ ಎಲ್ಲ ನಾಯಕರ ಜೊತೆ ವೈಯಕ್ತಿಕವಾಗಿ ಮಾತನಾಡಿದ್ದೇನೆ. ಲೋಕಸಭೆ ಚುನಾವಣೆಯಲ್ಲಿ 28 ಸ್ಥಾನ ಗೆಲ್ಲುವ ಮೂಲಕ ನರೇಂದ್ರ ಮೋದಿ (Narendra Modi) ಅವರನ್ನು ಮತ್ತೆ ಪ್ರಧಾನಿ ಮಾಡುವುದು ನಮ್ಮ ಗುರಿ ಎಂದರು. ವಿಧಾನಸಭೆ ಚುನಾವಣೆಯಲ್ಲಿ ಹಿನ್ನಡೆ ಆಗಿದೆ. ಆದರೆ ಲೋಕಸಭೆ ಚುನಾವಣೆಯಲ್ಲಿ ಗೆಲುವಿಗೆ ಶ್ರಮ ಹಾಕಬೇಕಿದೆ.
ರಾಜ್ಯಾಧ್ಯಕ್ಷ ಸ್ಥಾನದ ಮಹತ್ವ ಹಾಗೂ ಗೌರವ ಏನು ಎಂದು ಗೊತ್ತಿದೆ. ಬಿಜೆಪಿ ಕಾರ್ಯಕರ್ತರು ಯಾವತ್ತೂ ತಲೆ ತಗ್ಗಿಸಲು ಅವಕಾಶ ಕೊಡಲ್ಲ ಎಂದರು. ಬಿಜೆಪಿ ವಿರುದ್ಧ ರಾಜ್ಯ ಕಾಂಗ್ರೆಸ್ (Congress) ಸರ್ಕಾರ ಅನೇಕ ಟೀಕೆ ಮಾಡಿದ್ದರು. 40% ಸರ್ಕಾರ ಎಂದರು, ಮತದಾರರು ಅದನ್ನು ನಂಬಿದರು. ಆದರೆ ಇವಾಗ ಕಾಂಗ್ರೆಸ್ ಹಗಲು ದರೋಡೆ ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದರು.
ಭೀಕರ ಬರಗಾಲ ಇದ್ದು, ಕೈಗಾರಿಕೋದ್ಯಮಿಗಳು ಬಂಡವಾಳ ಹೂಡುವ ಸ್ಥಿತಿ ನಮ್ಮಲ್ಲಿ ಇಲ್ಲ. ಆದರೆ ಉಸ್ತುವಾರಿ ಸಚಿವರು ಬರ ಪ್ರದೇಶದಲ್ಲಿ ಪ್ರವಾಸ ಮಾಡಿಲ್ಲ. ರೈತರ ಸಮಸ್ಯೆಗೆ ಸ್ಪಂದನೆ ಮಾಡುತ್ತಿಲ್ಲ. ಅಧಿಕಾರದ ದರ್ಪದಿಂದ ಉದ್ಧಟತನದಿಂದ ನಡೆದುಕೊಳ್ಳುತ್ತಿದೆ. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಸರ್ಕಾರಕ್ಕೆ ಉತ್ತರ ಕೊಡಬೇಕಿದೆ.
ಭವ್ಯಶ್ರೀ ಆರ್.ಜೆ