ಮೋದಿ (Modi)ಯವರ ಅಭಿವೃದ್ಧಿ ಕಾರ್ಯ, ಶ್ರೀರಾಮನ ಜೈಕಾರ, ಕೇಸರಿಯ ವಿಸ್ತಾರ ಕಾಂಗ್ರೆಸ್ಸಿ (Congress) ಗರನ್ನು ಕಂಗೆಡಿಸಿದೆ, ಅಖಾಡಕ್ಕೆ ಬರುವ ಮುನ್ನವೇ ಸೋಲೊಪ್ಪಿಕೊಳ್ಳುವಂತೆ ಮಾಡಿದೆ. ಓಟಿಗಾಗಿ ನೋಟು ಎನ್ನುತ್ತಿದ್ದ ಕಾಂಗ್ರೆಸ್ಸಿಗರು ಕಳೆದ ಚುನಾವಣೆಯಲ್ಲಿ ಓಟಿಗಾಗಿ ಬಿಟ್ಟಿ ಗ್ಯಾರಂಟಿ ಎಂದರು, ಇದೀಗ ಓಟು ಕೊಡದಿದ್ದರೆ ಗ್ಯಾರಂಟಿ ನಿಲ್ಲಿಸುವ ಏಟು ಕೊಡುವುದಾಗಿ ಮತದಾರರಿಗೆ ಬೆದರಿಕೆ ಒಡ್ಡುತ್ತಿದ್ದಾರೆ, ಏಟಿಗೆ ಎದಿರೇಟು ಕೊಡುವ ತಾಕತ್ತು ನಮ್ಮ ಮತದಾರರಿಗಿದೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿವೈ ವಿಜಯೇಂದ್ರ (BY Vijayendra) ಅವರು ಮಾಗಡಿ ಕಾಂಗ್ರೆಸ್ ಶಾಸಕ ಬಾಲಕೃಷ್ಣ ನೀಡಿರುವ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡದಿದ್ದರೆ, ಗ್ಯಾರಂಟಿ ಯೋಜನೆಗಳನ್ನು ರದ್ದಗೊಳಿಸಲಾಗುವುದು ಎಂದು ಮಾಗಡಿ ಶಾಸಕ ಹೇಳಿದ್ದರು. ಶಾಸಕರ ಹೇಳಿಕೆಯನ್ನು ಖಂಡಿಸಿರುವ ವಿಜಯೇಂದ್ರ ಅವರು, ಪ್ರಬುದ್ಧತೆಗೆ ಹೆಸರಾದ ನಮ್ಮ ಕರ್ನಾಟಕದ (Karntaka) ಮತದಾರರನ್ನುಆಮಿಷಗಳಿಗೆ ಬಲಿಯಾಗುವ ದುರ್ಬಲ ಮನಸ್ಸಿನವರು ಎಂದು ಭಾವಿಸಿರುವ ಕಾಂಗ್ರೆಸ್ ತಮ್ಮ ಶಾಸಕರೊಬ್ಬರ ಮೂಲಕ ಮತದಾರರನ್ನು ಬಿಕ್ಷುಕರಂತೆ ಬೆದರಿಸಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಅಪಮಾನಿಸುವ ಹೇಳಿಕೆ ಕೊಡಿಸಿರುವುದು ಅಕ್ಷಮ್ಯ ಅಪರಾಧ.
ಈ ಕೂಡಲೇ ಕಾಂಗ್ರೆಸ್ ಜನರ ಬಳಿ ಬೇಷರತ್ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸುವೆ. ಯಾರದೋ ದುಡ್ಡು ಯಲ್ಲಮನ ಜಾತ್ರೆ’ಯ ರೀತಿ ಜನರ ತೆರಿಗೆಯಿಂದ ರಾಜ್ಯದ ಬೊಕ್ಕಸ ಸೇರುವ ಹಣವನ್ನು ಬಿಟ್ಟಿ ಭಾಗ್ಯದ ಹೆಸರಿನ ಯೋಜನೆಗಳಿಗೆ ಸರ್ಕಾರ ಬಳಸಿಕೊಂಡರೂ ಯೋಜನೆಗಳನ್ನು ಜನರಿಗೆ ಸಮರ್ಪಕವಾಗಿ ತಲುಪಿಸಲು ಸಾಧ್ಯವಾಗದೇ ಪರದಾಡುತ್ತಿದೆ. ಈ ನಡುವೆ ಫಲಾನುಭವಿ ಜನರನ್ನು ಹಂಗಿಸಿ ಬೆದರಿಸಿ ಕರ್ನಾಟಕದ ಮಾನ ಕಳೆಯುತ್ತಿದೆ ಎಂದು ಟೀಕಿಸಿದ್ದಾರೆ.
ಸಭೆಯಲ್ಲಿ ಶಾಸಕರು ಹೇಳಿದ್ದೇನು..?:
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಸೋತರೆ ಎಲ್ಲ ಗ್ಯಾರಂಟಿ (Guarantee) ಯೋಜನೆಗಳನ್ನು ರದ್ದು ಮಾಡಲಾಗುವುದು. ಬಿಜೆಪಿಯವರು ಮಂತ್ರಾಕ್ಷತೆ ನೀಡಿ ಮತ ಕೇಳುತ್ತಿದ್ದಾರೆ. ಆದರೆ ಜನರಿಗೆ ಐದು ಗ್ಯಾರಂಟಿ ಯೋಜನೆಗಳನ್ನ ನೀಡಿ ಮತ ಕೇಳುತ್ತೇವೆ. ಹೀಗಾಗಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಹೆಚ್ಚು ಸ್ಥಾನಗಳನ್ನು ಗೆಲ್ಲದಿದ್ದರೆ, ರಾಜ್ಯದ ಜನರಿಗೆ ಗ್ಯಾರಂಟಿ ಯೋಜನೆಗಳು ಇಷ್ಟವಾಗಿಲ್ಲ ಎಂದು ಅರ್ಥ. ಹೀಗಾಗಿ ಆಗ ಗ್ಯಾರಂಟಿ ಯೋಜನೆಗಳನ್ನು ರದ್ದು ಮಾಡಲಾಗುವುದು.
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ನಿಮ್ಮ ಮತ ರಾಮನ ಮಂತ್ರಾಕ್ಷತೆಗೋ ಅಥವಾ ಕಾಂಗ್ರೆಸ್ ಪಕ್ಷ ನೀಡಿರುವ ಐದು ಗ್ಯಾರಂಟಿಗಾ ಎಂದು ನೀವೇ ಯೋಚನೆ ಮಾಡಿ. ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚು ಸ್ಥಾನಗಳಲ್ಲಿ ಗೆಲ್ಲಿಸಿದ್ರೆ ಮಾತ್ರ ಗ್ಯಾರಂಟಿ ಯೋಜನೆ ಮುಂದುವರಿಸುತ್ತೇವೆ. ಇಲ್ಲದಿದ್ದರೆ ಜಾರಿ ಮಾಡಿರುವ ಎಲ್ಲಾ ಗ್ಯಾರಂಟಿ ಯೋಜನೆಗಳನ್ನು ರದ್ದು ಮಾಡುತ್ತೇವೆ ಎಂದು ಮತದಾರರಿಗೆ ಪರೋಕ್ಷವಾಗಿ ಶಾಸಕರು ತಾಕೀತು ಮಾಡಿದ್ದಾರೆ.