ಹಿಂದಿನ ಕಾಲದಲ್ಲಿ ಹರಳು ಬೀಜದಿಂದ ತಯಾರು ಮಾಡುತ್ತಿದ್ದ ಹರಳೆಣ್ಣೆ ಬಳಕೆ ಹೇಗಿತ್ತು ಗೊತ್ತಾ?

Castor seeds

ಹರಳು ಬೀಜ(Castor Seeds) ಸಸ್ಯಶಾಸ್ತ್ರೀಯ ಹೆಸರು Ricinus Communis ಈ ಹರಳು ಬೀಜ ನಮ್ಮ ಮನೆಗಳ ಸಂದಿಗೊಂದಿಗಳಲಿ, ಕೀರೆ ಮಡಿ ತೋಟಗಳಲಿ ಬೆಳೀತಾ ಇದ್ರು ಒಂದು ವರ್ಷಕ್ಕೆ ಬೇಕಾಗುವಷ್ಟು ಹರಳಣ್ಣೆ ಸಿಕ್ತಾ ಇರಲಿಲ್ಲ.

ಒಣಭೂಮಿ ಇರುವ ಕಡೆ ಹೊಲಗಳ ಬದುಗೆ ಈ ಅರಳು ಗಿಡ ಹಾಕಿ ಬೆಳೆದ ಜನ ಸಂತೆಯಲ್ಲಿ ಮಾರುತ್ತಿದ್ದರು. ಹಾಗೆ ಸಂತೆಯಲ್ಲಿ ಒಂದತ್ತು ಸೇರು ತಂದು ಚೆನ್ನಾಗಿ ಬಿಸಿಲಲ್ಲಿ ಒಣಹಾಕಿ ಗಾಣಿಗರ ಮನೆಯಲ್ಲಿದ್ದ ಅಜ್ಜಿ ಕೊಡುವ ಡೇಟಿಗೆ ಅವ್ವ ಕಾಯ್ತಾ ಇರೋಳು. ತನಗೇ ಮಾಡಲು ಗೊತ್ತಿದ್ದರೂ ಆ ಅಜ್ಜಿಯ ಕೈಗುಣದ ಮೇಲೆಯೆ ಜಾಸ್ತಿ ನಂಬುಗೆ. ಶುಕ್ರವಾರವೋ ಇಲ್ಲ, ಬುದವಾರವೋ ಆ ಹಣ್ಣು ಹಣ್ಣಾದ ಅಜ್ಜಿ ಬರ್ತಾ ಇದ್ರು. ಕೊಟ್ಟಿಗೆ ಮನೆ ಅಥವಾ ಹಿತ್ತಲಲ್ಲಿ ಒಂದು ಒಲೆ ಹಾಕಿ ಘಮ್ಮನ್ನುವ ಅರಳು ಹುರಿದು ಮುದ್ದೆ ಕಟ್ಟೊ ಹಸೆಕಲ್ಲಿನ ಮೇಲೆ ಹರಳು ಅರೆಯುತ್ತಾ ಇದ್ರೆ ಆ ವಾಸನೆ ಅದೊಂತರ ಕಿಕ್ಕು !

ಅರೆದ ಗಸಿಯನ್ನೆಲ್ಲಾ ಸೇರಿಸಿ ಬೇಯಿಸಿ ಮೇಲೆ ಬರುವ ಎಣ್ಣೆಯನ್ನ ಒಂದು ತೆಂಗಿನ ಕರಟದಲ್ಲಿ ಬಸಿದು ಬಿಳಿಯ ಪಂಚೆಯ ತುಂಡಿನಲ್ಲಿ ಸೋಸಿ ಮತ್ತೊಂದು ಡಬ್ಬಿಯಲಿ ಶೇಖರಿಸಿಡ್ತಾ ಇದ್ರು. ತಲೆಗೆ ಕೊಬ್ಬರಿ ಎಣ್ಣೆ, ನಾನಾ ರೀತಿಯ ತೈಲಗಳನ್ನ ಹಾಕೋಕೆ ಅಜ್ಜಿಯಂದಿರು ಬಿಡ್ತಾ ಇರ್ಲಿಲ್ಲ. ಹೀಗೆ ಮನೆಯಲ್ಲಿ ಕಾಯಿಸಿ ಸೋಸಿ ತೆಗೆದ ಹರಳೆಣ್ಣೆಯನ್ನೇ ಬಳಸಬೇಕೆಂಬುದು ಅವರ ತಾಕೀತು. ವಾರಕ್ಕೆರಡು ಬಾರಿಯಾದರೂ ಮಕ್ಕಳಿಗೆ ಮೊಮ್ಮಕ್ಕಳಿಗೆ ಎಣ್ಣೆ ತುಂಬುವುದು ಸಾಮಾನ್ಯ( ತಲೆಗೆ ಹೆಚ್ಚು ಎಣ್ಣೆ ತಿಕ್ಕಿ ಒಂದೆರಡು ದಿನ ನೆನೆಯಲು ಬಿಡವುದು)

ಇನ್ನು ಹಲಸಿನ ಹಣ್ಣು ಕೊಯ್ಯಲು ಕೈಗೆ ಹರಳೆಣ್ಣೆ ಹಚ್ಚಿಕೊಳ್ಳುವುದು, ಹಸುಗೂಸುಗಳ ಸ್ನಾನಕ್ಕೆ ಈ ಎಣ್ಣೆ ಮಸಾಜ್ ಮಾಡುವುದು ನಮ್ಮಲ್ಲಿ ಕಡ್ಡಾಯ. ಹರಳೆಣ್ಣೆ ಇಲ್ಲದ ಯುಗಾದಿ ನಡೆದಿದ್ದು ಉಂಟೆ! ಮೈತುಂಬಾ ಎಣ್ಣೆ ತುಂಬಿಕೊಂಡು ದಿಗಂಬರರಾಗಿ ಮನೆಯಂಗಳದಲ್ಲಿ ನಿಂತ ನೆನಪು ಅಮರ. ವಿಶ್ವದಲ್ಲಿ ಭಾರತವೇ ಅತ್ಯಧಿಕ ಹರಳುಬೀಜ ಉತ್ಪಾದನೆ ಮಾಡುವ ದೇಶ. 2013 ರಲ್ಲಿ ಭಾರತವೊಂದೇ 1744000 ಟನ್ ಗಳಷ್ಟು ಉತ್ಪಾದಿಸಿದ್ದರೆ ಉಳಿದ ದೇಶಗಳ ಒಟ್ಟು ಉತ್ಪನ್ನ 110775 ಟನ್ ಗಳಷ್ಟು. ಅಂದರೆ ಶೇ. 94 ರಷ್ಟು!

ಹರಳು ಬೀಜದಲ್ಲಿ ಹೆಚ್ಚು ಅಲರ್ಜಿಯ ಅಂಶಗಳಿರುವುದರಿಂದ ಇದರ ಎಣ್ಣೆಯನ್ನು ಆಹಾರ ಮತ್ತು ಔಷಧಗಳ ಬಳಕೆಯಲ್ಲಿ ಅಷ್ಟಾಗಿ ಬಳಸುವುದಿಲ್ಲ ಇವತ್ತು ಯಾಕೋ ಹರಳೆಣ್ಣೆ ನೆನಪಾಯಿತು. ಹತ್ತು ವರ್ಷಗಳ ಮೇಲಾಯಿತು ತಲೆಗೆ ಎಣ್ಣೆ ತುಂಬಿ!

Exit mobile version