ಉತ್ತರ ಪ್ರದೇಶದಾದ್ಯಂತ ಬೀಡಾಡಿ ದನಗಳ ಸಂಖ್ಯೆ ಹೆಚ್ಚಾಗಿ ರೈತರ ಬೆಳೆಗಳನ್ನು ನಾಶ ಪಡಿಸುತ್ತಿದ್ದು, ಈ ಹಿನ್ನೆಲೆಯಲ್ಲಿ ಯೋಗಿ ಆದಿತ್ಯನಾಥ್ ಅವರ ರ್ಯಾಲಿ ಮೈದಾನಕ್ಕೆ ಬೀಡಾಡಿ ದನಗಳನ್ನು ಬಿಡುವ ಮೂಲಕ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಾರಾಬಂಕಿಯಲ್ಲಿ ಸಿಎಂ ಆದಿತ್ಯನಾಥ್ ಅವರ ಕಾರ್ಯಕ್ರಮಕ್ಕೂ ಮುನ್ನ ರೈತರು ನೂರಾರು ಜಾನುವಾರುಗಳನ್ನು ಹೊಲದಿಂದ ಓಡಿಸಿ ರ್ಯಾಲಿ ನಡೆಯುವ ಸ್ಥಳದ ಬಳಿ ಬಿಟ್ಟರು. ಈ ಬಿಡಾಡಿ ದನಗಳನ್ನು ನಿರ್ವಹಿಸಲು ರೈತರಿಗೆ ದಾರಿ ಕಾಣಲಿಲ್ಲ ಎಂದು ರಮಣದೀಪ್ ಸಿಂಗ್ ಮಾನ್ ವೀಡಿಯೊವನ್ನು ಪೋಸ್ಟ್ ಮಾಡುವಾಗ ಟ್ವೀಟ್ ಮಾಡಿದ್ದಾರೆ. “ಐದು ವರ್ಷಗಳಿಂದ ಯುಪಿ ಸರ್ಕಾರವು ಪರಿಹಾರವನ್ನು ಕಂಡುಕೊಳ್ಳಲು ಸಾಧ್ಯವಾಗಲಿಲ್ಲ. ಈ ಕಾರ್ಯಕ್ರಮಕ್ಕೆ ಮೊದಲು ಬಿಜೆಪಿ ಯಾವ ಪರಿಹಾರವನ್ನು ತರುತ್ತದೆ ಎಂಬುದನ್ನು ರೈತರು ನೋಡಬೇಕೆಂದು ಬಯಸಿದ್ದರು” ಎಂದು ಅವರು ಟ್ವೀಟ್ ಮಾಡಿದ್ದಾರೆ.

ಇನ್ನೂ ರ್ಯಾಲಿಯಲ್ಲಿ ಯೋಗಿ ಆದಿತ್ಯನಾಥ್ ಅವರು ರಾಜ್ಯದಲ್ಲಿ ಬಿಜೆಪಿ ಅಧಿಕಾರವನ್ನು ಉಳಿಸಿಕೊಂಡರೆ ಯುಪಿಯಲ್ಲಿ ಬಿಡಾಡಿ ದನಗಳ ಸಮಸ್ಯೆಯನ್ನು ಪರಿಹರಿಸುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರ ಭರವಸೆಯನ್ನು ಸಭೆಯಲ್ಲಿ ನೆನಪಿಸಿದರು. ಕಳೆದ ವಾರ ರ್ಯಾಲಿಯಲ್ಲಿ “ಮಾರ್ಚ್ 10ರ ನಂತರ ಬೀದಿ ಪ್ರಾಣಿಗಳಿಂದ ನೀವು ಎದುರಿಸುತ್ತಿರುವ ಸಮಸ್ಯೆಗಳನ್ನು ಎದುರಿಸಲು ಹೊಸ ವ್ಯವಸ್ಥೆಯನ್ನು ಮಾಡಲಾಗುವುದು. ಹಾಲು ನೀಡದ ಪ್ರಾಣಿಗಳ ಸಗಣಿಯಿಂದ ಆದಾಯವನ್ನು ಗಳಿಸುವ ವ್ಯವಸ್ಥೆಯನ್ನು ಮಾಡಲಾಗುವುದು ಎಂದು ಪ್ರಧಾನಿ ಮೋದಿ ಹೇಳಿದ್ದರು. ಉತ್ತರ ಪ್ರದೇಶದಲ್ಲಿ ಬಿಡಾಡಿ ದನಗಳು ಹೊಲಗಳಿಗೆ ನುಗ್ಗುವುದು ಮತ್ತು ಬೆಳೆಗಳನ್ನು ಗುರಿಯಾಗಿಸುವುದು ವಿಶೇಷವಾಗಿ ಬುಂದೇಲ್ಖಂಡ್ ಪ್ರದೇಶದಲ್ಲಿ ಸಾಮಾನ್ಯವಾಗಿದೆ. ಇದರಿಂದ ಈ ಭಾಗದ ರೈತರಿಗೆ ಆರ್ಥಿಕ ನಷ್ಟ ಉಂಟಾಗುತ್ತಿದ್ದು, ಜಾನುವಾರುಗಳನ್ನು ಓಡಿಸಲು ರಾತ್ರಿಯಿಡೀ ಜಾಗರಣೆ ಮಾಡಬೇಕಾಗಿದೆ.

ಉತ್ತರಪ್ರದೇಶ ವಿಧಾನಸಭಾ ಚುನಾವಣೆ ಒಟ್ಟು ಏಳು ಹಂತದಲ್ಲಿ ನಡೆಯಲಿದ್ದು, ಈಗಾಗಲೇ ಮೂರು ಹಂತದ ಚುನಾವಣೆ ಯಶಸ್ವಿಯಾಗಿ ಪೂರ್ಣಗೊಂಡಿದೆ. ಇನ್ನೂ ನಾಲ್ಕು ಹಂತದ ಮತದಾನ ನಡೆಯಬೇಕಿದೆ. ಈ ಹಂತದ ಪ್ರಮುಖ ಅಭ್ಯರ್ಥಿಗಳಲ್ಲಿ ಉತ್ತರ ಪ್ರದೇಶದ ಕಾನೂನು ಸಚಿವ ಬ್ರಿಜೇಶ್ ಪಾಠಕ್ ಅವರು ಲಕ್ನೋ ಕಂಟೋನ್ಮೆಂಟ್ ಕ್ಷೇತ್ರದಲ್ಲಿ ಸಮಾಜವಾದಿ ಪಕ್ಷದ ಅಭ್ಯರ್ಥಿ ಮತ್ತು ಎರಡು ಬಾರಿ ಕಾರ್ಪೊರೇಟರ್ ಸುರೇಂದ್ರ ಸಿಂಗ್ ಗಾಂಧಿ ಅವರನ್ನು ಎದುರಿಸುತ್ತಿದ್ದಾರೆ.