ಡಿ.ಕೆ.ಶಿವಕುಮಾರ್ ವಿರುದ್ಧ ಸಿಬಿಐ ತನಿಖೆಗೆ ಹೈಕೋರ್ಟ್ ಗ್ರೀನ್ ಸಿಗ್ನಲ್: ಡಿಕೆಶಿಗೆ ಹೊಸ ಸಂಕಷ್ಟ

Bengaluru: ಆದಾಯ ಮೀರಿ ಅಕ್ರಮವಾಗಿ ಆಸ್ತಿ ಗಳಿಕೆ ಮಾಡಿರುವ ಆರೋಪ ಎದುರಿಸುತ್ತಿರುವ ಕಾಂಗ್ರೆಸ್ (Congress) ನಾಯಕ ಹಾಗೂ ಹಾಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ (D.K Shivakumar) ವಿರುದ್ದ ಕೇಂದ್ರೀಯ ತನಿಖಾ ದಳದಿಂದ ತನಿಖೆ ನಡೆಸಲು ರಾಜ್ಯ ಹೈಕೋರ್ಟ್ ಅನುಮತಿ ನೀಡಿದೆ.

2017 ರಿಂದ ಡಿ.ಕೆ.ಶಿವಕುಮಾರ್ ವಿರುದ್ದ ಕೇಂದ್ರೀಯ ತನಿಖಾ ದಳವು ತನಿಖೆ ನಡೆಸುತ್ತಿದ್ದು, ಈ ತನಿಖೆಗೆ ತಡೆಯಾಜ್ಞೆ ನೀಡಬೇಕು ಹಾಗೂ ಪ್ರಕರಣವನ್ನು ರದ್ದುಗೊಳಿಸಬೇಕೆಂದು ಕೋರಿ ಡಿ.ಕೆ.ಶಿವಕುಮಾರ್ ಅವರು ಸಲ್ಲಿಸಿದ್ದ ಅರ್ಜಿಯನ್ನು ಕರ್ನಾಟಕ ರಾಜ್ಯ ಹೈಕೋರ್ಟ್ ವಜಾಗೊಳಿಸಿ ಸಿಬಿಐ (CBI) ತನಿಖೆಗೆ ಗ್ರೀನ್ ಸಿಗ್ನಲ್ ನೀಡಿದೆ.

ಕೇಂದ್ರೀಯ ತನಿಖಾ ದಳದ ತನಿಖೆಯನ್ನು ರದ್ದು ಮಾಡುವಂತೆ ಕೋರಿ ಡಿಕೆ ಶಿವಕುಮಾರ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ಪೂರ್ಣಗೊಳಿಸಿ ರಾಜ್ಯ ಹೈಕೋರ್ಟ್ (Highcourt) ತೀರ್ಪು ಕಾಯ್ದಿರಿಸಿತ್ತು. ನ್ಯಾಯಮೂರ್ತಿ ಕೆ.ನಟರಾಜನ್ (K Natarajan) ನೇತೃತ್ವದ ಪೀಠ, ಕೇಂದ್ರೀಯ ತನಿಖಾ ದಳದ ತನಿಖೆಗೆ ನೀಡಿದ್ದ ಮಧ್ಯಂತರ ತಡೆಯನ್ನು ತೆರವುಗೊಳಿಸಿ, ಈ ಕ್ಷಣದಿಂದಲೇ ಕೇಂದ್ರೀಯ ತನಿಖಾ ದಳವು ಡಿ.ಕೆ.ಶಿವಕುಮಾರ್ ಅವರನ್ನು ವಿಚಾರಣೆ ನಡೆಸಬಹುದು ಎಂದು ಹೈಕೋರ್ಟ್ ತೀರ್ಪು ನೀಡಿದೆ.

ಪ್ರಕರಣದ ಹಿನ್ನಲೆ :
2017ರಲ್ಲಿ ಆದಾಯ ತೆರಿಗೆ ಇಲಾಖೆ ಕಾಂಗ್ರೆಸ್ ನಾಯಕ ಡಿ.ಕೆ. ಶಿವಕುಮಾರ್ ಮೇಲೆ ದಾಳಿ ನಡೆಸಿತ್ತು. ಕೇಂದ್ರೀಯ ಐಟಿ (IT) ಇಲಾಖೆ ನೀಡಿದ ಮಾಹಿತಿ ಆಧರಿಸಿ ಇಡಿ ಡಿ.ಕೆ.ಶಿವಕುಮಾರ್ ವಿರುದ್ಧ ಅಕ್ರಮ ಆಸ್ತಿ ಗಳಿಕೆಯ ಪ್ರಕರಣವನ್ನು ದಾಖಲಿಸಿ ತನಿಖೆ ಆರಂಭಿಸಿತ್ತು. ಜಾರಿ ನಿರ್ದೇಶನಾಲಯ ನಡೆಸಿದ ತನಿಖೆಯನ್ನು ಆಧರಿಸಿ ಡಿಕೆ ಶಿವಕುಮಾರ್ ವಿರುದ್ಧ ಪ್ರಕರಣ ದಾಖಲಿಸಲು ಕೇಂದ್ರೀಯ ತನಿಖಾ ದಳರಾಜ್ಯ ಸರ್ಕಾರದಿಂದ ಅನುಮತಿ ಕೋರಿತ್ತು.

ರಾಜ್ಯ ಸರ್ಕಾರ 2019ರ ಸೆಪ್ಟಂಬರ್ (September) 25ರಂದು ಅನುಮತಿ ನೀಡಿದ ಹಿನ್ನಲೆ 2020ರ ಅಕ್ಟೋಬರ್ 3 ರಂದು ಡಿಕೆ ಶಿವಕುಮಾರ್ ವಿರುದ್ಧ ಪ್ರಕರಣ ದಾಖಲಾಗಿತ್ತು. ಕೇಂದ್ರೀಯ ತನಿಖಾ ದಳ ಮತ್ತೆ ತನಿಖೆ ಆರಂಭಿಸಿರುವುದರಿಂದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಇದೀಗ ಮತ್ತೊಂದು ಸಂಕಷ್ಟ ಶುರುವಾಗಿದೆ.

Exit mobile version