ಕೊರೊನಾ ಪ್ರಕರಣ ಹೆಚ್ಚಾಗುತ್ತಿರುವ ಆರು ರಾಜ್ಯಗಳಿಗೆ ಕೇಂದ್ರದ ತಂಡ ನಿಯೋಜನೆ

ನವದೆಹಲಿ.ಜು.02: ಕೊರೊನಾ ಪ್ರಕರಣಗಳು ಆರು ರಾಜ್ಯಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವರದಿಯಾಗುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು, ಕೇರಳ, ಅರುಣಾಚಲ ಪ್ರದೇಶ, ತ್ರಿಪುರ, ಒಡಿಶಾ, ಛತ್ತೀಸಗಡ ಮತ್ತು ಮಣಿಪುರಕ್ಕೆ ತಜ್ಞರ ತಂಡಗಳನ್ನು ನಿಯೋಜಿಸಿದೆ.
ಈ ತಂಡಗಳು ಕೋವಿಡ್ ನಿರ್ವಹಣೆಯಲ್ಲಿ ರಾಜ್ಯಗಳಿಗೆ ಸಹಾಯ ಮಾಡಲಿದ್ದು, ಸಾಂಕ್ರಾಮಿಕ ರೋಗವನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು ನೆರವಾಗಲಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.
ರಾಜ್ಯಗಳಿಗೆ ಭೇಟಿ ನೀಡಲಿರುವ ಕೇಂದ್ರ ತಂಡವು, ಒಟ್ಟಾರೆ ಕೋವಿಡ್ ನಿರ್ವಹಣೆಯನ್ನು ಮೇಲ್ವಿಚಾರಣೆ ಮಾಡಲಿದ್ದು, ಸೂಕ್ತ ಕ್ರಮವನ್ನು ಸೂಚಿಸಲಿದೆ. ಸೋಂಕಿತರ ಪರೀಕ್ಷೆ, ಕಂಟೋನ್ಮೆಟ್‌ ವಲಯ, ಕೋವಿಡ್ ನಿರ್ವಹಣೆ ಮತ್ತು ಅದರ ಜಾರಿ, ಆಸ್ಪತ್ರೆಗಳಲ್ಲಿ ಹಾಸಿಗೆಗಳ ಲಭ್ಯತೆ, ಆಂಬ್ಯುಲೆನ್ಸ್, ವೆಂಟಿಲೇಟರ್, ವೈದ್ಯಕೀಯ ಆಮ್ಲಜನಕ ಪೂರೈಕೆ ಸೇರಿದಂತೆ ಕೋವಿಡ್ ಲಸಿಕೆ ವಿತರಣಾ ಕಾರ್ಯಕ್ರಮವನ್ನು ಮೇಲ್ವಿಚಾರಣೆ ನಡೆಸಲಿದೆ. ಒಟ್ಟಾರೆ ಪರಿಸ್ಥಿತಿಯನ್ನು ಅವಲೋಕಿಸಲಿರುವ ಕೇಂದ್ರ ತಂಡವು ಸಾರ್ವಜನಿಕ ಆರೋಗ್ಯ ಚಟುವಟಿಕೆಗಳ ಪರಿಹಾರ ಕ್ರಮಗಳನ್ನು ಆಯಾ ರಾಜ್ಯ ಸರ್ಕಾರಗಳಿಗೆ ಸೂಚಿಸಲಿದೆ.

Exit mobile version