ಬೆಂಗಳೂರು, ಏ. 26: ಲಸಿಕೆ ಪಡೆಯುವುದನ್ನು ಪ್ರೊತ್ಸಾಹಿಸಬೇಕಾದ ಕೇಂದ್ರ
ಬಿಜೆಪಿ ಸರ್ಕಾರ ಅದರ ಬೆಲೆ ಏರಿಸಿ ಜನತೆ ಅದನ್ನು ಪಡೆಯದಂತೆ ಮಾಡಲು ಹೊರಟಿದೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಟೀಕಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಸಿದ್ದರಾಮಯ್ಯ, ನರೇಂದ್ರ ಮೋದಿ ಅವರೇ, ‘ಟೀಕಾ ಉತ್ಸವ್’ ನಂತಹ ಬಾಯಿ ಬಡಾಯಿಯನ್ನು ಬಿಟ್ಟಾಕಿ ಮೊದಲು ಎಲ್ಲರಿಗೂ ಉಚಿತವಾಗಿ ಲಸಿಕೆ ನೀಡಿ ಎಂದು ಆಗ್ರಹಿಸಿದ್ದಾರೆ.
ಔಷಧ, ಆಮ್ಲಜನಕ, ವೆಂಟಿಲೇಟರ್ ಕೊಡಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಅವರನ್ನು ಬೇಡುತ್ತಿರುವ ಮುಖ‍್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಕಂಡಾಗ ಕನಿಕರ ಮೂಡುತ್ತಿದೆ. ಸಂಸದರು ಎಲ್ಲಿ ಅಡಗಿ ಕೂತಿದ್ದಾರೆ? ಅವರನ್ನು ದೆಹಲಿಗೆ ಅಟ್ಟಿ ರಾಜ್ಯದ ನ್ಯಾಯಬದ್ಧ ಪಾಲಿಗಾಗಿ ಪ್ರಧಾನಿ ಮನೆ ಮುಂದೆ ಧರಣಿ ಕೂರಿಸಿ ಎಂದು ಒತ್ತಾಯಿಸಿದ್ದಾರೆ.
ಅಲ್ಲದೇ, ಅನ್ನಭಾಗ್ಯ ಯೋಜನೆ ಎಂದರೆ ಉರ್ಕೊಳ್ಳುತ್ತಿದ್ದ ಮತ್ತು ಆ ಯೋಜನೆಗೆ ಕಲ್ಲು ಹಾಕಲು ಪ್ರಯತ್ನಿಸುತ್ತಿರುವ ಬಿಜೆಪಿ ನಾಯಕರು, ಈಗ ಪ್ರಧಾನಿ ನರೇಂದ್ರ ಮೋದಿ ಘೋಷಿಸಿರುವ ಎರಡು ತಿಂಗಳ ಕಾಲ ಐದು ಕಿಲೋ ಅಕ್ಕಿ ನೀಡುವ ಯೋಜನೆಯನ್ನು ಕೊಂಡಾಡುತ್ತಿರುವುದು ತಮಾಷೆಯಾಗಿದೆ.
ಕೊರೊನಾದಿಂದ ತೀವ್ರ ಸಂಕಷ್ಟಕ್ಕೀಡಾಗಿರುವ ಜನರಿಗೆ ಪ್ರತಿ ತಿಂಗಳು ಉಚಿತವಾಗಿ ಹತ್ತು ಕಿಲೋ ಅಕ್ಕಿ ನೀಡಬೇಕು ಎಂದು ಪ್ರಾರಂಭದಿಂದಲೂ ಒತ್ತಾಯಿಸುತ್ತಾ ಬಂದಿದ್ದೇನೆ. ಪ್ರಧಾನಿ ನರೇಂದ್ರ ಮೋದಿ ಈಗಲಾದರೂ ಎಚ್ಚೆತ್ತುಕೊಳ್ಳಿ.
ಕೊರೊನಾ ಕಷ್ಟ ಕೊನೆಯಾಗುವವರೆಗಾದರೂ ಹತ್ತು ಕಿಲೋ ಅಕ್ಕಿ ನೀಡಿ ಪುಣ್ಯ ಕಟ್ಕೊಳ್ಳಿ ಎಂದಿದ್ದಾರೆ.