ಚಾಮರಾಜನಗರ: ಆಸ್ಪತ್ರೆಯಲ್ಲಿ ಆಕ್ಸಿಜನ್‌ ಕೊರತೆಗೆ 12, ಒಟ್ಟು 23 ಸೋಂಕಿತರು ಸಾವು: ಸರ್ಕಾರದ ವಿರುದ್ಧ ಮೃತರ ಸಂಬಂಧಿಕರ ಆಕ್ರೋಶ

ಚಾಮರಾಜನಗರ, ಮೇ. 03: ಜಿಲ್ಲಾ ಕೋವಿಡ್‌ ಆಸ್ಪತ್ರೆಯಲ್ಲಿ ಆಮ್ಲಜನಕ ಸಿಲಿಂಡರ್‌ ಕೊರತೆಯಿಂದ 12 ಸೇರಿದಂತೆ ಒಟ್ಟು 23 ಸೋಂಕಿತರು ಸಾವಿಗೀಡಾಗಿದ್ದಾರೆ ಎನ್ನಲಾಗಿದೆ.

ಆಮ್ಲಜನಕ ಕೊರತೆಯಿಂದ 12 ಮಂದಿ ಮೃತಪಟ್ಟಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ. ನಿಖರ ಸಂಖ್ಯೆಯನ್ನು ಆಸ್ಪತ್ರೆ, ಜಿಲ್ಲಾಡಳಿತ ಮುಚ್ಚಿಡುತ್ತಿವೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಭಾನುವಾರ ಮಧ್ಯರಾತ್ರಿ ಅಮ್ಲಜನಕ ಸಿಲಿಂಡರ್ ಖಾಲಿಯಾಯಿತು. ರಾತ್ರಿ 9 ಗಂಟೆಗೆ ಮೈಸೂರಿನಿಂದ ಸಿಲಿಂಡರ್‌ಗಳು ಬರಬೇಕಿತ್ತು. ಆದರೆ ಮೈಸೂರಿಂದ ಆಕ್ಷಿಜನ್‌ ಬರಲಿಲ್ಲ. ಆದ್ದರಿಂದ ವೆಂಟಿಲೇಟರ್‌ ಚಿಕಿತ್ಸೆ ಪಡೆಯುತಿದ್ದ 12 ಕೋವಿಡ್‌ ಸೋಂಕಿತರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ನಂತರ ಸಂಸದ ಪ್ರತಾಪ್‌ ಸಿಂಹ ಅವರಿಗೆ ಈ ವಿಷಯ ತಿಳಿದು ಮೈಸೂರು ಜಿಲ್ಲಾಸ್ಪತ್ರೆಯಿಂದ ಕೂಡಲೇ 50 ಆಕ್ಷಿಜನ್‌ ಸಿಲಿಂಡರ್‌ ಗಳನ್ನು ಕಳಿಸಿಕೊಟ್ಟಿದ್ದಾರೆ ಎನ್ನಲಾಗಿದೆ.

ಚಾಮರಾಜನಗರ ಆಸ್ಪತ್ರೆಯಲ್ಲಿ ಕಳೆದ ವಾರವಷ್ಟೆ 6000 ಲೀಟರ್ ಸಾಮರ್ಥ್ಯದ ಆಮ್ಲಜನಕ ಘಟಕವನ್ನು ಸ್ಥಾಪಿಸಲಾಗಿದ್ದು ಇದು ಒಮ್ಮೆ ಭರ್ತಿ ಮಾಡಿದರೆ 36 ಘಂಟೆಗಳಷ್ಟು ಮಾತ್ರ ಬಳಸಬಹುದಾಗಿದೆ. ಕೋವಿಡ್ ಆಸ್ಪತ್ರೆಯಲ್ಲಿ 24 ವೆಂಟಿಲೇಟರ್‌ಗಳಿವೆ, 53 ಐಸಿಯು ಹಾಗೂ 55 ಆಮ್ಲಜನಕ ಸಹಿತ ಹಾಸಿಗೆಗಳಿವೆ. ಬಹುತೇಕ ಎಲ್ಲವೂ ಭರ್ತಿಯಾಗಿವೆ.

ಆಮ್ಲಜನಕ ಕೊರತೆಯಿಂದಾಗಿ ಕೋವಿಡ್‌ ರೋಗಿಗಳ ಜೀವ ಹಾನಿ ಸಂಭವಿಸಿದೆ ಎನ್ನಲಾಗುತ್ತಿದೆ. ಈ ಮಧ್ಯೆ, ಆಸ್ಪತ್ರೆಗೆ ಜಿಲ್ಲಾಧಿಕಾರಿ‌ ಡಾ.ಎಂ.ಆರ್.ರವಿ, ಎಸ್.ಪಿ ದಿವ್ಯಾ ಸಾರಾ ಥಾಮಸ್ ಭೇಟಿ ನೀಡಿದ್ದು, ವೈದ್ಯರೊಂದಿಗೆ ಚರ್ಚೆ ನಡೆಸಿದ್ದು, ಸಭೆಯಲ್ಲಿ ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರೂ ಭಾಗಿಯಾಗಿದ್ದಾರೆ

Exit mobile version