ಚಾಮರಾಜನಗರ ಆಕ್ಸಿಜನ್ ಕೊರತೆ ಪ್ರಕರಣ: ಕೊಲೆ ದೂರು ದಾಖಲು

ಚಾಮರಾಜನಗರ, ಮೇ. 06: ಜಿಲ್ಲಾ ಆಸ್ಪತ್ರೆಯಲ್ಲಿ ಆಕ್ಸಿಜನ್‌ ಕೊರತೆಯಿಂದ 24 ಜನ ಸೋಂಕಿತರು ಮೃತರಾದ ಘಟನೆ ಗೆ ಸಂಬಂದಪಟ್ಟಂತೆ ರಾಜ್ಯ ಹೈಕೋರ್ಟ್‌ ನ್ಯಾಯಾಂಗ ತನಿಖೆಗೆ ಆದೇಶಿಸಿದೆ. ಜೊತೆಗೆ ಸರ್ಕಾರ ನೇಮಿಸಿರುವ ತನಿಖಾದಿಕಾರಿ ಶಿವಯೋಗಿ ಕಳಸದ್‌ ಅವರ ತನಿಖೆಯೂ ಪ್ರಗತಿಯಲ್ಲಿದೆ.

ಇದೇ ವಿಷಯಕ್ಕೆ ಸಂಬಂದಪಟ್ಟಂತೆ ಜಿಲ್ಲಾ ಕೋವಿಡ್ ಆಸ್ಪತ್ರೆ ಹಾಗೂ ಜಿಲ್ಲೆಯ ಇತರೆ ಆಸ್ಪತ್ರೆಗಳಲ್ಲಿ ಆಮ್ಲಜನಕ ಸಿಗದೇ ಮೃತಪಟ್ಟ ಸೋಂಕಿತರ ಸಾವಿಗೆ ಕಾರಣರಾದವರ ವಿರುದ್ಧ ಜಿಲ್ಲಾ ವಕೀಲರ ಸಂಘದ ಮಾಜಿ ಅಧ್ಯಕ್ಷ ಪುಟ್ಟಸ್ವಾಮಿ ಬುಧವಾರ ಚಾಮರಾಜನಗರ ಪಟ್ಟಣ ಪೊಲೀಸ್ ಠಾಣೆಯಲ್ಲಿ ಕೊಲೆ ದೂರು ನೀಡಿದ್ದಾರೆ.

ಸೋಂಕಿತರು ಆಮ್ಲಜನಕ ಸಿಗದೇ ತೀವ್ರತರ ನರಳಾಟದಿಂದ ಸಾವನ್ನಪ್ಪಿದ್ದಾರೆ. ಇದಕ್ಕೆ ಆರೋಗ್ಯ ಸಚಿವ ಡಾ.ಕೆ..ಸುಧಾಕರ್, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಸುರೇಶ್‌ಕುಮಾರ್, ಕರ್ತವ್ಯ ನಿರತ ವೈದ್ಯರು, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಂ.ಸಿ.ರವಿ, ಚಾಮರಾಜನಗರ ಮೆಡಿಕಲ್ ಕಾಲೇಜಿನ ಸಂಜೀವ್ ರೆಡ್ಡಿ, ಜಿಲ್ಲಾ ಸರ್ಜನ್‌ಗಳಾದ ಡಾ. ಮುರುಗೇಶ್, ಡಾ. ಶ್ರೀನಿವಾಸ್ ಅವರ ನೇತೃತ್ವದ ಆಡಳಿತ ಮಂಡಳಿ, ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ, ಆಕ್ಸಿಜನ್ ಪೂರೈಕೆ ಗುತ್ತಿಗೆದಾರರು ಕಾರಣ. ಇವರ ವಿರುದ್ಧ ಕೊಲೆ ಪ್ರಕರಣ ದಾಖಲಿಸುವಂತೆ ದೂರಿನಲ್ಲಿ ತಿಳಿಸಿದ್ದಾರೆ.

Exit mobile version