ಕನ್ನಡದ ಹಿರಿಯ ಸಾಹಿತಿ ಚಂದ್ರಶೇಖರ ಪಾಟೀಲ ನಿಧನ

ಬೆಂಗಳೂರು ಜ 10 : ಕನ್ನಡದ ಹಿರಿಯ ಸಾಹಿತಿ, ಕನ್ನಡ ಪರಿಷತ್‌ನ ಮಾಜಿ ಅಧ್ಯಕ್ಷ ಚಂದ್ರಶೇಖರ ಪಾಟೀಲ್ (ಚಂಪಾ ) ನಿಧನರಾಗಿದ್ದಾರೆ.

ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಕೋಟಣನಕುಂಟೆ ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪಾರ್ಥೀವ ಶರೀರವನ್ನು ಯಲಚೇನಹಳ್ಳಿ ಸಮೀಪದ ಅವರ ನಿವಾಸಕ್ಕೆ ತೆಗೆದುಕೊಂಡು ಹೋಗಲಾಗುತ್ತಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಚಂಪಾ ಅವರಿಗೆ 83 ವರ್ಷ ವಯಸ್ಸಾಗಿತ್ತು.

ಚಂಪಾ ಅವರು 2004-08ರವರೆಗೆ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಅಲ್ಲದೆ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ಕ್ರಾಂತಿಕಾರ ಮನೋಭಾವ ಹೊಂದಿದ್ದ ಚಂಪಾ ಅವರನ್ನು ಕನ್ನಡ ಸಾಹಿತ್ಯ ಪರಿಷತ್ತನ್ನು ರಾಜ್ಯವ್ಯಾಪಿ ವಿಸ್ತರಿಸುವಲ್ಲಿ ಮತ್ತು ಕನ್ನಡವನ್ನು ಜನರಿಗೆ ತಲುಪಿಸುವಲ್ಲಿ ಸಾಕಷ್ಟು ಕೊಡುಗೆ ನೀಡಿದ್ದಾರೆ.

ಚಂಪಾ ಅವರು ಒಬ್ಬ ಸಾಹಿತಿಯಾಗಿ, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಗುರುತಿಸಿಕೊಂಡದ್ದಕ್ಕಿಂತ ಒಬ್ಬ ಹೋರಾಟಗಾರರಾಗಿ ಹೆಚ್ಚು ಗುರುತಿಸಿಕೊಂಡವರು. ಪ್ರಾಥಮಿಕ ಶಿಕ್ಷಣದಲ್ಲಿ ಕನ್ನಡ ಕಡ್ಡಾಯವಾಗಬೇಕು ಎಂದು ಬಹಳ ಸಂಘಟಿತವಾದಂತಹ ಹೋರಾಟ ರೂಪಿಸಿದ್ದರು. ಕೇಂದ್ರ ಪಠ್ಯಕ್ರಮದಲ್ಲಿಯೂ ಸಹ ಇಂಗ್ಲಿಷ್, ಹಿಂದಿ ಜೊತೆಗೆ ಕನ್ನಡವನ್ನು ಕಡ್ಡಾಯವಾಗಿ ಕಲಿಸಬೇಕು ಎಂದು ಆಗ್ರಹಿಸುತ್ತಿದ್ದರು. ಯಾವುದೇ ರಾಜಕೀಯ ನಾಯಕರ ವಿರುದ್ಧ ನಿರ್ಭೀತಿಯಿಂದ ಮಾತನಾಡುತ್ತಿದ್ದರು. ತಮ್ಮ ಉತ್ತರ ಕರ್ನಾಟಕದ ಭಾಷೆಯ ಶೈಲಿಯಲ್ಲಿ ಹಲವರನ್ನು ತಿವಿಯುತ್ತಿದ್ದರು.

ಕನ್ನಡದ ಕವಿ, ನಾಟಕಕಾರ, ಹೋರಾಟಗಾರರಾದ ಚಂದ್ರಶೇಖರ ಪಾಟೀಲ ಅವರು ‘ಚಂಪಾ’ ಎಂದೇ ಪ್ರಖ್ಯಾತರಾಗಿದ್ದರು. 1939ರಲ್ಲಿ ಅವರು ಹಾವೇರಿ ಜಿಲ್ಲೆಯ ಹತ್ತಿಮತ್ತೂರಿನಲ್ಲಿ ಜನಿಸಿದ್ದರು. ಹತ್ತಿಮತ್ತೂರು- ಹಾವೇರಿ ಶಾಲೆ-ಹೈಸ್ಕೂಲ್ ಮುಗಿಸಿ 1956ರಲ್ಲಿ ಕರ್ನಾಟಕ ಕಾಲೇಜಿಗೆ ಸೇರಿದರು. 1960ರಲ್ಲಿ ಬಿಎ ಪೂರೈಸಿ ಕರ್ನಾಟಕ ವಿಶ್ವವಿದ್ಯಾಲಯದಿಂದ 1962ರಲ್ಲಿ ಎಂ.ಎ. ಮುಗಿಸಿದರು. 1969ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾದರು. 1980-82ರಲ್ಲಿ ಧಾರವಾಡದ ಅಖಿಲ ಕರ್ನಾಟಕ ಕೇಂದ್ರ ಕ್ರಿಯಾ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿ ಗೋಕಾಕ್ ಚಳವಳಿಗೆ ಪ್ರೇರಣಿ ನೀಡಿದ ಪ್ರಮುಖರಲ್ಲಿ ಚಂಪಾ ಒಬ್ಬರಾಗಿದ್ದರು.

Exit mobile version