ಲಿಪ್ಸ್ಟಿಕ್.. ಹೆಣ್ಣುಮಕ್ಕಳ ಫೇವರೆಟ್ ಮೇಕಪ್ ವಸ್ತುಗಳಲ್ಲಿ ಒಂದು. ಯಾವುದೇ ಸಂದರ್ಭ ಇರಲಿ, ಲಿಪ್ಸ್ಟಿಕ್ ಇಲ್ಲದೇ ಹೊರಗೆ ಕಾಲಿಡದೇ ಇರೋರು ಸಾಕಷ್ಟು ಜನ. ಇಷ್ಟು ಇಷ್ಟ ಪಡೋ ಈ ಲಿಪ್ಸ್ಟಿಕ್ ನಿಂದ ನಿಮಗೆ ಅಪಾಯಕಾರಿ ಅಡ್ಡಪರಿಣಾಮಗಳಿವೆ ಎಂದು ಎಂದಾದರೂ ಯೋಚಿಸಿದ್ದಾರಾ? ಹೌದು, ಅದರಲ್ಲಿ ಬಳಸುವ ಹಾನಿಕಾರಕ ರಾಸಾಯನಿಕಗಳು ನಿಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ನೇರವಾಗಿ ತಲುಪುವುದರಿಂದ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವುದು. ಗರ್ಭಿಣಿಯರಂತೂ ಲಿಪ್ಸ್ಟಿಕ್ ಬಳಸುವಾಗ ತುಂಬಾ ಜಾಗರೂಕರಾಗಿಬೇಕು. ಲಿಪ್ಸ್ಟಿಕ್ನಲ್ಲಿ ಕಂಡುಬರುವ ರಾಸಾಯನಿಕಗಳು ಮತ್ತು ಅವುಗಳಿಂದ ಉಂಟಾಗುವ ಹಾನಿಯ ಬಗ್ಗೆ ಇಲ್ಲಿ ಹೇಳಿದ್ದೇವೆ.
ಲಿಪ್ಸ್ಟಿಕ್ ನಲ್ಲಿರುವ ರಾಸಾಯನಿಕಗಳು ಹಾಗೂ ಅದರಿಂದ ಉಮಟಾಗುವ ಹಾನಿಯನ್ನು ಈ ಕೆಳಗೆ ನೀಡಲಾಗಿದೆ:
ಈ ಪದಾರ್ಥಗಳನ್ನು ಪರಿಶೀಲಿಸಿ:
ಕೆಲವು ಲಿಪ್ಸ್ಟಿಕ್ ನಲ್ಲಿ ಮ್ಯಾಂಗನೀಸ್, ಕ್ಯಾಡ್ಮಿಯಮ್, ಕ್ರೋಮಿಯಂ ಮತ್ತು ಅಲ್ಯೂಮಿನಿಯಂ ಎಂಬ ರಾಸಾಯನಿಕಗಳಿರುತ್ತವೆ. ಇವು ನಮ್ಮ ದೇಹದಲ್ಲಿ ಸಂಗ್ರಹವಾದಾಗ ದೊಡ್ಡ ಹಾನಿ ಉಂಟುಮಾಡುತ್ತವೆ. ಲಿಪ್ ಸ್ಟಿಕ್ ಹಚ್ಚಿಕೊಂಡು ಆಹಾರವನ್ನು ತಿನ್ನುವಾಗ, ಅದು ದೇಹಕ್ಕೆ ಹೋಗುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ. ಲಿಪ್ಸ್ಟಿಕ್ ಖರೀದಿಸುವಾಗ, ಅದರಲ್ಲಿ ಈ ಉತ್ಪನ್ನಗಳು ಇರುವುದಿಲ್ಲ ಎಂಬುದನ್ನು ನೆನಪಿನಲ್ಲಿಡಿ.
ಸೀಸ ಮತ್ತು ಪ್ಯಾರಾಬೆನ್:
ಸೀಸವು ಹೆಚ್ಚಿನ ಲಿಪ್ ಸ್ಟಿಕ್‌ಗಳಲ್ಲಿ ಕಂಡುಬರುತ್ತದೆ. ಇದು ದೇಹಕ್ಕೆ ತುಂಬಾ ಹಾನಿಕಾರಕವಾಗಿದ್ದು, ಅಧಿಕ ರಕ್ತದೊತ್ತಡ ಮತ್ತು ಹೃದಯ ಸಂಬಂಧಿತ ಸಮಸ್ಯೆಗಳಿಗೆ ಕಾರಣವಾಗಬಹುದು. ಲಿಪ್ ಸ್ಟಿಕ್‌ಗಳಲ್ಲಿ ಅನೇಕ ರೀತಿಯ ಸಂರಕ್ಷಕಗಳನ್ನು ಬಳಸಲಾಗುವುದು. ಒಂದುವೇಳೆ ಅವುಗಳ ಪ್ರಮಾಣ ಹೆಚ್ಚಿದ್ದರೆ ಕ್ಯಾನ್ಸರ್ ಸಮಸ್ಯೆ ಉಂಟಾಗಬಹುದು. ಪ್ಯಾರಾಬೆನ್ ಒಂದು ಸಂರಕ್ಷಕವಾಗಿದ್ದು ಅದು ಕ್ಯಾನ್ಸರ್ಗೆ ಕಾರಣವೆಂದು ಹೇಳಲಾಗುವುದು. ಇದು ವಿಶೇಷವಾಗಿ ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಸಮಸ್ಯೆಗಳನ್ನು ಉಂಟುಮಾಡಬಹುದು.
ಬಿಸ್ಮತ್ ಆಕ್ಸಿಕ್ಲೋರೈಡ್:
ಬಿಸ್ಮತ್ ಆಕ್ಸಿಕ್ಲೋರೈಡ್ ಅನ್ನು ಲಿಪ್ಸ್ಟಿಕ್ ನಲ್ಲಿ ಸಂರಕ್ಷಕವಾಗಿ ಬಳಸಲಾಗುತ್ತದೆ. ಇದರಿಂದ ಕ್ಯಾನ್ಸರ್ ಬರುವ ಅಪಾಯವೂ ಇದೆ ಜೊತೆಗೆ ಆರೋಗ್ಯಕ್ಕೆ ತುಂಬಾ ಅಪಾಯಕಾರಿಯಾಗಿದೆ. ಇದು ವಿವಿಧ ರೀತಿಯ ಅಲರ್ಜಿಯನ್ನು ಸಹ ಉಂಟುಮಾಡುತ್ತದೆ.
ಗರ್ಭಾವಸ್ಥೆಯಲ್ಲಿ ಲಿಪ್ಸ್ಟಿಕ್ ಬೇಡ:
ನೀವು ಗರ್ಭಿಣಿಯಾಗಿದ್ದರೆ, ನಿಮ್ಮ ಮಗುವಿನ ಸುರಕ್ಷತೆಗಾಗಿ ಯಾವಾಗಲೂ ಲಿಪ್ಸ್ಟಿಕ್ ಹಚ್ಚಿಕೊಳ್ಳುವುದನ್ನು ನಿಲ್ಲಿಸಿ. ವಿಶೇಷ ಸಂದರ್ಭಗಳಲ್ಲಿ ಅವಶ್ಯಕತೆಯಿದ್ದರೆ ಮಾತ್ರ ಹಚ್ಚಿಕೊಳ್ಳಿ. ಅದು ಕೂಡ, ಕಡಿಮೆ ಬೆಲೆಯ ಲಿಪ್ ಸ್ಟಿಕ್‌ಗಳನ್ನು ಖರೀದಿಸಬೇಡಿ. ಉತ್ತಮ ಬ್ರಾಂಡ್ ಲಿಪ್ಸ್ಟಿಕ್ ಬಳಸಿ, ಲಭ್ಯವಿದ್ದರೆ ಗಿಡಮೂಲಿಕೆಗಳ ಲಿಪ್ ಸ್ಟಿಕ್ ಆದರೂ ಹಚ್ಚಬಹುದು.
ಈ ಸಲಹೆಗಳನ್ನು ಪಾಲಿಸಿ:
ನಿಮಗೆ ಲಿಪ್ಸ್ಟಿಕ್ ಹಚ್ಚುವುದು ಬಿಡಲು ಸಾಧ್ಯವಿಲ್ಲ ಎಂಬುದು ತಿಳಿದಿದೆ, ಆದರೆ ಜಾಗರೂಕರಾಗಿರಿ. ಹೆಚ್ಚು ರಾಸಾಯನಿಕಗಳು ಡಾರ್ಕ್ ಶೇಡ್ ಲಿಪ್ಸ್ಟಿಕ್ ನಲ್ಲಿ ಹೆಚ್ಚು ಇರುವುದರಿಂದ ಲಿಪ್ಸ್ಟಿಕ್ ಖರೀದಿಸುವಾಗ ಡಾರ್ಕ್ ಶೇಡ್ ತೆಗೆದುಕೊಳ್ಳುವುದನ್ನು ತಪ್ಪಿಸಿ. ಲಿಪ್ಸ್ಟಿಕ್ ಅನ್ನು ಹಚ್ಚುವ ಮೊದಲು, ತುಪ್ಪವನ್ನು ಲೇಪಿಸಿ. ಇದು ಅಡ್ಡಪರಿಣಾಮಗಳನ್ನು ಕಡಿಮೆ ಮಾಡುತ್ತದೆ. ಸ್ಥಳೀಯ ಬ್ರ್ಯಾಂಡ್‌ಗಳು ಅಗ್ಗವಾಗಿರಬಹುದು. ಆದರೆ ಅವು ನಿಮಗೆ ಹೆಚ್ಚು ಹಾನಿ ಮಾಡುತ್ತವೆ. ಉತ್ತಮ ಬ್ರಾಂಡ್‌ಗಳ ಲಿಪ್ ಸ್ಟಿಕ್ ಖರೀದಿಸಿ, ಕೊಳ್ಳುವಾಗ ಅದರ ಪದಾರ್ಥಗಳನ್ನು ಪರಿಶೀಲಿಸಿ.