ಹೆಚ್ಚುತ್ತಿದೆ ಬಾಲ್ಯ ವಿವಾಹ ; ಬಾಲ್ಯ ವಿವಾಹಕ್ಕೆ ಜರುಗಬೇಕು ಕಠಿಣ ಕಾನೂನು ಕ್ರಮ!

child marriage

ಮಕ್ಕಳ ಮದುವೆ(Child Marriage) ಕಾನೂನು ಬಾಹಿರ. ಆದ್ರೆ ಆತಂಕಕಾರಿ ವಿಚಾರ ಗೊತ್ತಾ? ಕೊರೋನಾ(Covid-19) ನಂತ್ರ ನಮ್ಮ ದೇಶದಲ್ಲಿ ಬಾಲ್ಯ ವಿವಾಹದ ಪ್ರಮಾಣ ಗಣನೀಯವಾಗಿ ಏರಿಕೆಯಾಗ್ತಿದೆ. ನಾಚಿಕೆಗೇಡಿನ ವಿಚಾರ ಅಂದ್ರೆ ನಮ್ಮ ಕರ್ನಾಟಕದಲ್ಲೇ(Karnataka) 2020ರಲ್ಲಿ ಅತೀ ಹೆಚ್ಚು ಬಾಲ್ಯ ವಿವಾಹ ಆಗಿರೋದು. ಯಾಕೆ? ಇದರಿಂದ ಹೆಣ್ಣು ಮಕ್ಕಳು ಅನುಭವಿಸುತ್ತಿರುವ ನೋವೇನು. ಇವೆಲ್ಲವನ್ನು ತಿಳಿಯೋಣ ಇಂದಿನ ಲೇಖನದಲ್ಲಿ…

ಕೊರೋನಾ ನಂತ್ರ ಶೇ.50 ಹೆಚ್ಚಿದೆ ಬಾಲ್ಯವಿವಾಹ. ಅತೀ ಹೆಚ್ಚು ಬಾಲ್ಯವಿವಾಹದಲ್ಲಿ ಕರ್ನಾಟಕ ನಂ ೧ ಸ್ಥಾನ. ಥೂ…..ನಾಚಿಕೆಗೇಡಿನ ವಿಚಾರ. ಕಾನೂನು ಬಾಹಿರವಾಗಿರೋ ಮಕ್ಕಳ ಮದುವೆಯಲ್ಲಿ ಕರ್ನಾಟಕಕ್ಕೆ ಮೊದಲನೇ ಸ್ಥಾನ. 2020ರ ದೇಶದ ಸರ್ಕಾರಿ ದಾಖಲೆಯಲ್ಲಿ ದಾಖಲಾಗಿರುವ ಬಾಲ್ಯವಿವಾಹದ ಸಂಖ್ಯೆಯೇ 785. ಇನ್ನು ದಾಖಲಾಗದೆ ಸದ್ದಿಲ್ಲದೆ ಕದ್ದು ಮುಚ್ಚಿಯಾಗಿರುವ ಮದುವೆಗಳಿಗೆ ಲೆಕ್ಕವೇ ಇಲ್ಲ ಬಿಡಿ. ಇನ್ನು ನಾವು 2020ರಲ್ಲಿ ವಿವಿಧ ರಾಜ್ಯಗಳಲ್ಲಿ ದಾಖಲಾದ ಅಂಕಿ ಅಂಶ ನೋಡಿದ್ರೆ ನಮಗೆ ನಾಚಿಕೆಯಾಗುತ್ತೆ.
2020ರ ಬಾಲ್ಯ ವಿವಾಹ ದಾಖಲೆ ಹೀಗಿದೆ.

  1. ಕರ್ನಾಟಕ – 184
  2. ಅಸ್ಸಾಂ – 138
  3. ಪಶ್ಚಿಮ ಬಂಗಾಳ – 98
  4. ತಮಿಳುನಾಡು – 77
  5. ತೆಲಂಗಾಣ – 62
    ಈ ಅಂಕಿ ಅಂಶಗಳು ಅಚ್ಚರಿಯ ಮಾಹಿತಿಯನ್ನು ಬಹಿರಂಗಪಡಿಸಿವೆ. ಅದೇನಂದ್ರೆ ಕೊರೋನಾ ನಂತ್ರ ನಮ್ಮ ದೇಶದಲ್ಲಿ ಬಾಲ್ಯ ವಿವಾಹ ಶೇಕಡಾ 50 ರಷ್ಟು ಹೆಚ್ಚಿದೆ ಗೊತ್ತಾ.

ಏರುತ್ತಿದೆ ಬಾಲ್ಯವಿವಾಹ :
2016 – 326
2017 – 395
2018 – 501
2019 – 523
2020 – 785


ಈ ಸಂಖ್ಯೆ ಹೆಚ್ಚುತ್ತಲೇ ಇದೆ. ಈ ಅಂಕಿ ಅಂಶಗಳು ಅಧಿಕಾರಿಗಳು ದೂರು ಬಂದ ಆಧಾರದ ಮೇಲೆ ದಾಖಲಾಗಿದ್ದು. ಇನ್ನು ದೂರು ಕೊಡದೆ ಇರೋ ಬಾಲ್ಯವಿವಾಹಗಳು ಇದಕ್ಕಿಂತ ಮೂರು ಪಟ್ಟು ಹೆಚ್ಚಿರುತ್ತೆ. ಆದ್ರೆ ಖುಷಿಯ ವಿಚಾರ ಅಂದ್ರೆ ಬಾಲ್ಯ ವಿವಾಹದ ಬಗ್ಗೆ ಮಾಹಿತಿ ಕೊಡುವವರ ಸಂಖ್ಯೆಯೂ ಹೆಚ್ಚಿದೆ. ಕೊರೋನಾ ನಂತ್ರ ಬಾಲ್ಯ ವಿವಾಹ ಹೆಚ್ಚಲು ಮುಖ್ಯ ಕಾರಣ ಆರ್ಥಿಕ ಸಂಕಷ್ಟ, ನಿರುದ್ಯೋಗ. ಈ ಸಮಸ್ಯೆಯಿಂದ ಬಳಲುತ್ತಿದ್ದ ಅನೇಕ ಪೋಷಕರು ಹೆಣ್ಣು ಮಕ್ಕಳನ್ನು ಮಾರುವ ಮತ್ತು ಆಕೆಯನ್ನು ಬೇಗ ಮದುವೆ ಮಾಡಿ ಬೇರೆಯವರ ಮನೆಗೆ ಕಳುಹಿಸುವ ಕಠಿಣ ನಿರ್ಧಾರ ಮಾಡ್ತಿದ್ದಾರೆ.

ಇದು ನಿಜವಾಗ್ಲೂ ಆತಂಕಕಾರಿ ವಿಚಾರ. ಬಾಲ್ಯ ವಿವಾಹ ಹೆಣ್ಣಿನ ಮೇಲಿನ ದೌರ್ಜನ್ಯವನ್ನು ಹೆಚ್ಚಿಸುತ್ತಿದೆ. ಅಷ್ಟೇ ಅಲ್ಲ ಅಪ್ರಾಪ್ತ ಬಾಲೆಯನ್ನು ಸಂಕಷ್ಟದ ಕೂಪಕ್ಕೆ ತಳ್ಳುತ್ತಿದೆ.ಬಾಲ್ಯ ವಿವಾಹದಿಂದ ಹೆಣ್ಣು ಮಕ್ಕಳು ಚಿಕ್ಕ ವಯಸ್ಸಿನಲ್ಲೇ ಗರ್ಭ ಧರಿಸಿ ಅಪಾಯಕ್ಕೆ ಸಿಲುಕುತ್ತಿದ್ದಾರೆ. ಜೊತೆಗೆ ಅಪೌಷ್ಠಿಕತೆಯಿಂದ ನರಳಿ ಸಾವನ್ನಪ್ಪುತ್ತಿದ್ದಾರೆ. ಇನ್ನು ಮದುವೆಯಾದ ಕೆಲವೇ ತಿಂಗಳುಗಳಿಗೆ ಅದೆಷ್ಟೋ ಅಪ್ರಾಪ್ತ ಹೆಣ್ಣು ಮಕ್ಕಳು ಗಂಡನನ್ನು ಕಳೆದುಕೊಂಡು ವಿಧವೆ ಎಂಬ ಪಟ್ಟ ಪಡೀತ್ತಿದ್ದಾರೆ. ಜೀವನ ಪರ್ಯಂತ ಪಡಬಾರದ ಕಷ್ಟಕ್ಕೆ ತುತ್ತಾಗ್ತಾರೆ. ಇದರ ಜೊತೆಗೆ ಬಾಲ್ಯ ವಿವಾಹ ಮತ್ತೊಂದು ಗಂಭೀರ ಸಮಸ್ಯೆಯನ್ನು ಸೃಷ್ಟಿಸುತ್ತಿದೆ.

ಅದೇನಂದ್ರೆ ಬಾಲ್ಯ ವಿವಾಹ ಹೆಣ್ಣುಮಕ್ಕಳ ಮಾರಾಟಕ್ಕೂ ದಾರಿ ಮಾಡಿಕೊಡುತ್ತಿದೆ. ಹಾಗಾಗಿ ಹೆತ್ತವರು ಎಷ್ಟೇ ಕಷ್ಟ ಆದ್ರೂ ತಮ್ಮ ಕರುಳ ಬಳ್ಳಿಗಳಿಗೆ ಬೇಗ ಮದುವೆ ಮಾಡಿ ಸಾವಿನ ಕೂಪಕ್ಕೆ ತಳ್ಳಬೇಡಿ. ಅಲ್ಲದೆ ಬಾಲ್ಯ ವಿವಾಹದಂಥಾ ಅಕ್ರಮ ಕೆಲಸ ಮಾಡಿ ಜೈಲು ಸೇರಬೇಡಿ. ಇನ್ನಾದರೂ ಪೋಷಕರು ಬಾಲ್ಯ ವಿವಾಹ ಮಾಡುವ ಮುನ್ನ ಅವರ ಮಕ್ಕಳ ಭವಿಷ್ಯದ ಬಗ್ಗೆಯೂ ಯೋಚಿಸಲಿ ಹಾಗೂ ಸರ್ಕಾರದ ನಿಯಮವನ್ನು ಪಾಲಿಸಬೇಕೆಂಬುದೇ ವಿಜಯಟೈಮ್ಸ್ ಆಶಯ .

Exit mobile version