ಸುಳ್ಯದಲ್ಲಿ ಮಕ್ಕಳ ಜೀತ ! ಜೀತದಲ್ಲಿದ್ದ 8 ಮಕ್ಕಳ ರಕ್ಷಣೆ. ದಾಳಿಯ ವೇಳೆ ಬಯಲಾಯ್ತು ಆ ದಂಪತಿ ಮಾಡ್ತಿದ್ದ ಭಯಾನಕ ಕೃತ್ಯ

ಸುಳ್ಯದಲ್ಲಿ ಮಕ್ಕಳ ಜೀತ ! Bonded labours in Sulya, Dakshina Kannada!

ಇದು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲ್ಲೂಕಿನ ಪಂಜದ ಮನೆಯೊಂದರ ಮೇಲೆ ಕಳೆದ ಶುಕ್ರವಾರ ಮಕ್ಕಳ ಕಲ್ಯಾಣ ಅಧಿಕಾರಿಗಳು ಹಾಗೂ ತಹಶೀಲ್ದಾರ್‌ ನಡೆಸಿರುವ ದಾಳಿ.

ಈ ದಾಳಿಗೆ ಕಾರಣ ಏನು ಗೊತ್ತಾ? ಮಕ್ಕಳನ್ನು ಅಕ್ರಮವಾಗಿ ಬಂಧನದಲ್ಲಿಟ್ಟು ಶೋಷಿಸುತ್ತಿರುವುದು. ಒಮ್ಮೆ ನೀವು ಈ ವಿಡಿಯೋವನ್ನ ನೋಡಿ. ಇವು ಕಡು ಬಡ ಹಾಗೂ ಅನಾಥ ಮಕ್ಕಳು. ಇವರು ಪಂಜದ ಮನೆಯೊಂದರಲ್ಲಿ ಜೀತದಾಳುಗಳಂತೆ ದುಡಿಯುತ್ತಿದ್ದಾರೆ. ಕಾಡಲ್ಲಿ ದನಕರುಗಳನ್ನು ಮೇಯಿಸುವುದು, ತೋಟದ ಕೆಲಸ, ಮನೆಕೆಲಸ, ಅಡುಗೆ ಕೆಲಸ ಹೀಗೆ ನಿತ್ಯ ಇವರನ್ನು ನಿರ್ದಾಕ್ಷಿಣ್ಯವಾಗಿ ದುಡಿಸಿಕೊಳ್ಳಲಾಗುತ್ತಿದೆ.

ಈ ಪುಟ್ಟ ಪುಟ್ಟ ಮಕ್ಕಳನ್ನು ಅಕ್ರಮದಲ್ಲಿಟ್ಟು ಶೋಷಿಸುತ್ತಿರುವವರು ಪಂಜದ ಕರಿಕಳ ವಿಶ್ವನಾಥ ದಂಪತಿ. ಇವರು ಸ್ಥಳೀಯವಾಗಿ ಭಾರೀ ಪ್ರಭಾವ ಹೊಂದಿದ್ದಾರಂತೆ. ಹಾಗಾಗಿ ಹಲವು ವರ್ಷಗಳಿಂದ ಪುಟ್ಟ ಪುಟ್ಟ ಮಕ್ಕಳನ್ನು ಹೀಗೆ ಕೂಡಿಟ್ಟು ದುಡಿಸುತ್ತಿದ್ದಾರೆ ಅನ್ನೋ ಸತ್ಯ ಅಧಿಕಾರಿಗಳ ದಾಳಿಯ ವೇಳೆ ಬಯಲಾಯ್ತು.

ಬರೀ ಮಕ್ಕಳು ಮಾತ್ರವಲ್ಲ ಈ ದಂಪತಿ ಮನೆಯಲ್ಲಿ ಮಾನಸಿಕ ಅಸ್ವಸ್ಥರು ಹಾಗೂ ವೃದ್ಧರನ್ನು ಕೂಡ ಅಕ್ರಮವಾಗಿ ಕೂಡಿಟ್ಟು ದುಡಿಸಲಾಗುತ್ತಿದೆ.

ಬಡತನದ ಬೇಗೆಯಿಂದ ಬಳಲುತ್ತಿರುವ ಮಕ್ಕಳನ್ನು ಆಶ್ರಯ ಹಾಗೂ ಶಿಕ್ಷಣದ ಭರವಸೆ ಕೊಟ್ಟು ಕರಿಕಳ ವಿಶ್ವನಾಥ ದಂಪತಿ ತಮ್ಮ ಮನೆಗೆ ಕರೆತರುತ್ತಾರೆ. ಆದ್ರೆ ಆ ಬಳಿಕ ಅವರನ್ನು ತಮ್ಮ ತೋಟ, ಮನೆಗಳಲ್ಲಿ ದುಡಿಸಿ, ಜೀತದಾಳುಗಳನ್ನಾಗಿಸುತ್ತಿದ್ದಾರೆ ಅನ್ನೋ ಸತ್ಯ ಅಧಿಕಾರಿಗಳ ದಾಳಿಯ ವೇಳೆ ಗೊತ್ತಾಯ್ತು.

ಕರಿಕಳದ ವಿಶ್ವನಾಥ್‌ ಭಟ್‌ ಅವರು ಮಾನಸಿಕ ಅಸ್ವಸ್ಥರಿಗೆ ಔಷಧಿ ಕೊಡುವ ಭರವಸೆ ಕೊಟ್ಟು ಕರೆದುಕೊಂಡು ಬರ್ತಾರೆ. ಮಹಿಳೆಯರಾದ್ರೆ ಅವರ ಮಕ್ಕಳನ್ನೂ ಜೊತೆಗೆ ಕರೆದುಕೊಂಡು ಬಂದು ಇಲ್ಲಿ ದುಡಿಸುತ್ತಾರೆ. ಅವರಿಗೆ ಯಾವ ಮೂಲಭೂತ ಸೌಕರ್ಯವನ್ನೂ ಕೊಡದೆ ಹೊಡೆದು ಬಡಿದು ಬಲವಂತವಾಗಿ ಇರಿಸಿ ಹಿಂಸಿಸುತ್ತಾರೆ ಅನ್ನೋದು ಪ್ರತ್ಯಕ್ಷದರ್ಶಿಗಳ ದೂರು.

ಈ ಕಾನೂನು ಬಾಹಿರ ಚಟುವಟಿಕೆಗಳನ್ನು ಅಮೃತಾನಂದಮಯೀ ಮಠದ ಹೆಸರಲ್ಲಿ ಮಾಡುತ್ತಿದ್ಧಾರೆ. ಇದಕ್ಕೆ ಪೂರಕವೆಂಬಂತೆ ಸಾರ್ವಜನಿಕರಿಗೆ ಗೊಂದಲ ಸೃಷ್ಟಿಸುವಂತಹ ಬೋರ್ಡ್‌ನ್ನೂ ಹಾಕಿದ್ದಾರೆ.

ಇವರ ಮನೆಯ ಪಕ್ಕದಲ್ಲೇ ಚಿಕ್ಕದಾದ ಅಮೃತಾನಂದಮಯೀ ಮಠ ಇದೆ. ಆದರೆ ಅಲ್ಲಿ ಯಾವುದೇ ಚಟುವಟಿಕೆಗಳು ನಡೆಯುತ್ತಿಲ್ಲ. ಬದಲಾಗಿ ಮಠದ ಹೆಸರಲ್ಲಿ ಮಕ್ಕಳ, ಮಾನಸಿಕ ಅಸ್ವಸ್ಥರ ಶೋಷಣೆ ನಡೆಯುತ್ತಿದೆ. ವಿಶ್ವನಾಥ್‌ ದಂಪತಿಗಳ ದೌರ್ಜನ್ಯ ತಾಳಲಾರದೆ ಮಕ್ಕಳು, ಮಹಿಳೆಯರು ಸಹಾಯ ಕೇಳಿಕೊಂಡು ನೆರೆಹೊರೆಯ ಹೋಗ್ತಾರೆ. ಆಗ ಅವರ ನೋವಿಗೆ ಸ್ಪಂದಿಸಿ ಸಹಾಯಕ್ಕೆ ಮುಂದಾದ್ರೆ ಸಹಾಯ ಮಾಡಿದವರಿಗೆ ಕೊಲೆ ಬೆದರಿಕೆ ಕೊಡ್ತಾರೆ. ಅಷ್ಟೇ ಅಲ್ಲ  ಕೃಷಿ ನಾಶ ಮಾಡಿರುವ ಘಟನೆಯೂ ನಡೆದಿದೆಯಂತೆ.

ಇದೆಲ್ಲವನ್ನು ಗಮನಿಸಿದ  ಸಾಮಾಜಿಕ ಸಂಘಟನೆ ನೀತಿ ತಂಡ, ಬಚ್ ಪನ್ ಬಚಾವೋ ಸಂಸ್ಥೆಯು ಸೇರಿ ರಾಜ್ಯ ಮಕ್ಕಳ ರಕ್ಷಣಾ ನಿರ್ದೇಶಕರಿಗೆ ದೂರು ನೀಡಿದ್ರು. ದೂರನ್ನು ಆಧರಿಸಿ ರಾಜ್ಯ ಮಕ್ಕಳ ರಕ್ಷಣಾ ನಿರ್ದೇಶಕರಾದ ಪಲ್ಲವಿ ಆಕುರಾತಿ ಅವರು ದ.ಕ ಜಿಲ್ಲಾಧಿಕಾರಿಗಳಿಂದ ಘಟನೆಯ ವಿವರ ಪಡೆದು ದಾಳಿ ನಡೆಸಿ ಮಕ್ಕಳನ್ನು ರಕ್ಷಣೆ ಮಾಡುವಂತೆ ಆದೇಶಿಸಿದ್ಧಾರೆ.

ಈ ಆದೇಶದ ಮೇರೆಗೆ ಬಚ್ ಪನ್ ಬಚಾವೋ ರಾಜ್ಯ ಸಮನ್ವಯಾಧಿಕಾರಿ ಬೆಂಗಳೂರಿನ ಬಿನು ವರ್ಗೀಸ್,  ಸುಳ್ಯ ತಹಶಿಲ್ದಾರ್ ಅನಿತಾಲಕ್ಷ್ಮಿ ಅವರ ನೇತೃತ್ವದಲ್ಲಿ ಬಾಲ ಕಾರ್ಮಿಕ ಅಧಿಕಾರಿಗಳು, ಪುತ್ತೂರು ಕಾರ್ಮಿಕ ಇಲಾಖೆ ಅಧಿಕಾರಿಗಳು, ಸುಳ್ಯ ಸಿಡಿಪಿಓ, ಕಂದಾಯ ಅಧಿಕಾರಿಗಳು,ಸುಬ್ರಹ್ಮಣ್ಯ ಪೊಲೀಸರು, ಪಂಜ ಗ್ರಾಮ ಪಂಚಾಯತ್ ಅಧಿಕಾರಿಗಳು ದಾಳಿ ನಡೆಸಿ ಮಾಹಿತಿ ಕಲೆ ಹಾಕಿದ್ದಾರೆ.

ಈ ದಂಪತಿಗಳು ಎಷ್ಟು ಪ್ರಭಾವಿಗಳೆಂದರ ಅಧಿಕಾರಿಗಳ ದಾಳಿಯ ಸೂಚನೆ ಇವರಿಗೆ ಮೊದಲೇ ಲಭ್ಯವಾಗಿದ್ದು, ದನಮೇಯಿಸುತ್ತಿದ್ದ ಮಕ್ಕಳನ್ನು ವಾಪಾಸ್‌ ಕರೆಸಿ ಮನೆಯಲ್ಲಿ ಇರಿಸಿಕೊಂಡಿದ್ದರು. ಮಕ್ಕಳ ಜಾಗದಲ್ಲಿ ವೃದ್ಧೆಯನ್ನು ನಿಲ್ಲಿಸಿದ್ರು.

ಇಲ್ಲಿ ದುಡಿಯುತ್ತಿರುವ ಯಾರಿಗೂ ಸಂಬಳ ಕೊಡುತ್ತಿಲ್ಲವಂತೆ. ಊಟ ವಸತಿ ನೀಡಿ ಇವರನ್ನು ನಿತ್ಯ ದುಡಿಸುವ ಕೆಲಸ ಮಾಡಿಸುತ್ತಿದ್ದಾರೆ ಅಂತ ಅಲ್ಲಿ ಬಂಧಿಯಾಗಿರುವವರೇ ಬಾಯಿ ಬಿಟ್ಟಿದ್ದಾರೆ.

ವಿಶ್ವನಾಥ್ ಭಟ್ ದಂಪತಿಗಳು ಮಕ್ಕಳ ರಕ್ಷಣೆಯ ಕಾಯ್ದೆಯಡಿಯಾಗಲಿ, ಟ್ರಸ್ಟ್ ಆಕ್ಟ್‌ ಪ್ರಕಾರವಾಗಲಿ ನೊಂದಾವಣಿ ಮಾಡಿಕೊಂಡಿಲ್ಲ ಅನ್ನೋದು ತನಿಖೆ ವೇಳೆ ಬಹಿರಂಗವಾಗಿದೆ.

ಅಧಿಕಾರಿಗಳು ದಂಪತಿಗಳನ್ನು ವಿಚಾರಿಸಿದಾಗ, ಮಕ್ಕಳನ್ನು, ವೃದ್ಧರನ್ನ ದುಡಿಸುತ್ತಿರುವ ವಿಚಾರವನ್ನು ಅವರೇ ಒಪ್ಪಿಕೊಂಡಿದ್ದಾರೆ. ಅಲ್ಲದೆ ತಮ್ಮ ಬಳಿ ಯಾವುದೇ ದಾಖಲೆಗಳೂ ಇಲ್ಲ ಅನ್ನೋದನ್ನೂ ತಿಳಿಸಿದ್ದಾರೆ.

ತನಿಖೆಯ ಬಳಿಕ ಮಕ್ಕಳನ್ನು  48 ಗಂಟೆಗಳ ಒಳಗಾಗಿ ಮಕ್ಕಳ ಕಲ್ಯಾಣ ಸಮಿತಿಗೆ ಹಾಜರುಪಡಿಸುವಂತೆ ಅಧಿಕಾರಿಗಳು ಆದೇಶ ನೀಡಿದ್ರು. ಈ ಹಿನ್ನೆಲೆಯಲ್ಲಿ ಮಕ್ಕಳನ್ನು ಮಂಗಳೂರಿನ ಮಕ್ಕಳ ಪಾಲನಾ ಕೇಂದ್ರಕ್ಕೆ ಶನಿವಾರ ಸ್ಥಳಾಂತರ ಮಾಡಲಾಗಿದೆ. ಹೆಚ್ಚಿನ ತನಿಖೆ ನಡೆಸಲು ಆದೇಶ ನೀಡಲಾಗಿದೆ.

Exit mobile version