ಲಿಂಗಾಯತ ಪಂಚಮಸಾಲಿ ಸಮಾಜವನ್ನು ಹಿಂದುಳಿದ ವರ್ಗ 2-ಎ ಮೀಸಲಾತಿಗೆ ಒಳಪಡಿಸುವ ಬಗ್ಗೆ ಅಧ್ಯಯನ ವರದಿ ನೀಡಲು ಸಿಎಂ ಸೂಚನೆ

ಬೆಂಗಳೂರು, ಫೆ. 06: ಲಿಂಗಾಯತ ಪಂಚಮಸಾಲಿ ಸಮಾಜವನ್ನು ಹಿಂದುಳಿದ ವರ್ಗ 2-ಎ ಮೀಸಲಾತಿಗೆ ಒಳಪಡಿಸುವ ಸಂಬಂಧ, ಸಮಗ್ರ ಅಧ್ಯಯನ ನಡೆಸಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗಕ್ಕೆ ಸೂಚಿಸಿದ್ದಾರೆ.

ಈ ಬಗ್ಗೆ ಪ್ರಕಟಣೆ ಹೊರಡಿಸಿರುವ ಅವರು, ಲಿಂಗಾಯತ ಪಂಚಮಸಾಲಿ ಜನಾಂಗದವರು ತಮ್ಮ ಸಮಾಜವು ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಾಗೂ ಔದ್ಯೋಗಿಕವಾಗಿ ಹಿಂದುಳಿದಿದೆ ಮತ್ತು ಸಮಾಜದ ಕಡುಬಡವರಿಗೆ ತೊಂದರೆಯಾಗಿರುವುದರಿಂದ ತಮ್ಮ ಸಮಾಜವನ್ನು ಹಿಂದುಳಿದ ವರ್ಗ 2-ಎ ಮೀಸಲಾತಿಗೆ ಒಳಪಡಿಸಲು ಮನವಿ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಲಿಂಗಾಯತ ಪಂಚಮಸಾಲಿ ಜನಾಂಗದ ಕುರಿತು ಸಮಗ್ರ ಅಧ್ಯಯನ ನಡೆಸಿ ಸರ್ಕಾರಕ್ಕೆ ವರದಿ ನೀಡುವಂತೆ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಿಗೆ ತಿಳಿಸಿದ್ದಾರೆ.

ಅಲ್ಲದೇ, ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಮತ್ತೊಂದು ಪ್ರಕಟಣೆ ಹೊರಡಿಸಿರುವ ಸಿಎಂ ಯಡಿಯೂರಪ್ಪ, ಇಂದಿನ ಅಧಿವೇಶನದಲ್ಲಿ ನನ್ನ ಹೇಳಿಕೆಯನ್ನು ಶ್ರೀ ಜಯ ಮೃತ್ಯುಂಜಯ ಸ್ವಾಮೀಜಿ ಅವರು ಅಪಾರ್ಥ ಮಾಡಿಕೊಂಡಿದ್ದಾರೆ. ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡುವ ಬಗ್ಗೆ ನಾನು ಈಗಾಗಲೇ ಸಚಿವರಾದ ಮುರುಗೇಶ್ ನಿರಾಣಿ, ಸಿ.ಸಿ.ಪಾಟೀಲ್ ಅವರನ್ನು ಒಳಗೊಂಡ ಹಲವು ಶಾಸಕರ ಜತೆಗೆ ಚರ್ಚಿಸಿದ್ದೇನೆ.

ಮುಖ್ಯಮಂತ್ರಿಯಾಗಿ ಎಲ್ಲಾ ಸಮುದಾಯಗಳ ಒಳಿತಿಗೆ ನಾನು ಬದ್ಧನಾಗಿದ್ದೇನೆ. ಇಂತಹ ಗಂಭೀರ ವಿಷಯಗಳ ಬಗ್ಗೆ ತರಾತುರಿಯಲ್ಲಿ ನಿರ್ಧಾರ ತೆಗೆದುಕೊಳ್ಳದೆ, ತಜ್ಞರೊಂದಿಗೆ ಚರ್ಚಿಸಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಮುಂದುವರಿಯಬೇಕಿದ್ದು, ಈ ನಿಟ್ಟಿನಲ್ಲಿ ತಮ್ಮೆಲ್ಲರ ಸಹಕಾರ ಕೋರಿತ್ತೇನೆ ಎಂದು ತಿಳಿಸಿದ್ದಾರೆ.

Exit mobile version