Lucknow: ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಲು ಬಹತೇಕ ಎಲ್ಲ ಪಕ್ಷಗಳೂ ಹಲವು ಗ್ಯಾರಂಟಿ ಯೋಜನೆಗಳ (Guarantee Scheme) ಆಶ್ವಾಸನೆಯನ್ನು ನೀಡಿದ್ದವು. ಅದರಲ್ಲೂ ಕಾಂಗ್ರೆಸ್ ಪಕ್ಷ ಮತ್ತೊಂದು ಹೆಜ್ಜೆ ಮುಂದೆ ಹೋಗಿ ಉತ್ತರ ಪ್ರದೇಶದಲ್ಲಿ ಎಲ್ಲರಿಗೂ 1 ಲಕ್ಷ ರೂಪಾಯಿ ನೀಡುವುದಾಗಿ ಗ್ಯಾರೆಂಟಿ ಕಾರ್ಡ್ ಹಂಚಲಾಗಿತ್ತು. ಇದೀಗ ಕಾಂಗ್ರೆಸ್ ಹಾಗೂ ಇಂಡಿಯಾ ಒಕ್ಕೂಟಕ್ಕೆ ಹೆಚ್ಚಿನ ಸ್ಥಾನ ಪಡೆದಿರುವ ಕಾರಣ ಯುಪಿ ಮಹಿಳೆಯರ ಬೆಳ್ಳಂಬೆಳಿಗ್ಗೆ ಕಾಂಗ್ರೆಸ್ ಕಚೇರಿ ಮುಂದೆ ಗ್ಯಾರೆಂಟಿ ಕಾರ್ಡ್ (Guarantee Card) ಹಿಡಿದು ಸಾಲುಗಟ್ಟಿ ನಿಂತಿದ್ದಾರೆ. 1 ಲಕ್ಷ ರೂಪಾಯಿ ನೀಡುವಂತೆ ಪಟ್ಟು ಹಿಡಿದ್ದಾರೆ.
ಕಾಂಗ್ರೆಸ್ (Congress) ಲೋಕಸಭಾ ಚುನಾವಣಾ ಪ್ರಚಾರದ ವೇಳೆ ತನ್ನ ಭರವಸೆಗಳನ್ನು ಘಂಟಾಘೋಷವಾಗಿ ಪ್ರಚಾರ ನಡೆಸಿತ್ತು.ಪ್ರಣಾಳಿಕೆಯಲ್ಲಿ ಉಲ್ಲೇಖಿಸಿರುವ ಪ್ರತಿ ಬಡ ಕುಟುಂಬದ ಮಹಿಳೆಯರಿಗೆ ವರ್ಷಕ್ಕೆ 1 ಲಕ್ಷ ರೂಪಾಯಿ ಖಾತೆಗೆ ಜಮೆ ಮಾಡುವುದಾಗಿ ಕಾಂಗ್ರೆಸ್ ಪಕ್ಷ ಭರವಸೆ ನೀಡಿತ್ತು. ಇಷ್ಟಕ್ಕೇ ಕಾಂಗ್ರೆಸ್ ಕಾರ್ಯತಂತ್ರ ಕೊನೆಯಾಗಿರಲಿಲ್ಲ . ಬದಲಿಗೆ 1 ಲಕ್ಷ ರೂಪಾಯಿ ಗ್ಯಾರೆಂಟಿ ಕಾರ್ಡನ್ನು ಪ್ರತಿ ಮನೆ ಮನೆಯ ಮಹಿಳೆಯರಿಗೂ ನೀಡಿತ್ತು.
ಪ್ರತಿ ತಿಂಗಳು ಸರಿಸುಮಾರು 8,500 ರೂಪಾಯಿ ಖಾತೆಗೆ ಜಮೆ ಆಗಲಿದೆ ಎಂದು ಕಾಂಗ್ರೆಸ್ ಕಾರ್ಯಕರ್ತರು ಮಹಿಳೆಯರಿಗೆ ಹೇಳಿದ್ದರು. ಇದೀಗ ಕಾಂಗ್ರೆಸ್ ನಾಯಕರ ಮಾತಿನಂತೆ ನಿಮ್ಮ ಪಕ್ಷಕ್ಕೆ ಮತದಾನ ಮಾಡಿ ಕಾಂಗ್ರೆಸ್ ಇಂಡಿಯಾ ಒಕ್ಕೂಟಕ್ಕೆ ಹೆಚ್ಚಿನ ಸ್ಥಾನ ಗೆಲ್ಲಿಸಿಕೊಟ್ಟಿದ್ದೇವೆ. ಬಿಜೆಪಿ (BJP)ಯನ್ನು ಸೋಲಿಸಿದ್ದೇವೆ. ನಮಗೆ 1 ಲಕ್ಷ ರೂಪಾಯಿ ಗ್ಯಾರೆಂಟಿ ನೀಡಿ ಎಂದು ಉತ್ತರ ಪ್ರದೇಶದ (Uttar Pradesh) ಕಾಂಗ್ರೆಸ್ ಕಚೇರಿ ಮುಂದೆ ಜಮಾಯಿಸಿದ ಮಹಿಳೆಯರು ಪಟ್ಟು ಹಿಡಿದ್ದಾರೆ.